30ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ; ವಿಷ ಉಣಿಸಿ ಕೊಂದರಾ ಪಾಪಿಗಳು!?

08-02-21 11:22 am       Headline Karnataka News Network   ಕ್ರೈಂ

ಕೋತಿಗಳ ಕಾಟ ತಾಳಲಾರದೆ 30ಕ್ಕೂ ಹೆಚ್ಚು ಕೋತಿಗಳಿಗೆ ವಿಷ ಹಾಕಿರುವುದಾಗಿ ಹಿಂದು ಜಾಗರಣ ವೇದಿಕೆ ಮುಖಂಡರು ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರ, ಫೆ.8: ಕೋತಿಗಳ ಕಾಟ ತಾಳಲಾರದೆ 30ಕ್ಕೂ ಹೆಚ್ಚು ಕೋತಿಗಳಿಗೆ ವಿಷ ಉಣಿಸಿ ಸಾಗಿಸುತ್ತಿದ್ದರೆನ್ನಲಾದ ಟ್ರ್ಯಾಕ್ಟರ್‌ನನ್ನು ಹಿಂದು ಜಾಗರಣ ವೇದಿಕೆ ಮುಖಂಡರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿ ಗ್ರಾಮದಲ್ಲಿ ಕೋತಿಗಳ ಕಾಟಕ್ಕೆ ತಾಳಲಾರದೆ, ಕಳೆದ ದಿನ ಬೆಳಗ್ಗೆ ಐವತ್ತು ಕ್ಕೂ ಹೆಚ್ಚು ಕೋತಿಗಳನ್ನ ಹಿಡಿದು ಒಂದೇ ಬೋನಿನಲ್ಲಿ ಬಂಧಿಸಿಡಲಾಗಿದ್ದು, ರಾತ್ರಿ 9ರ ನಂತರ ಬೋನಿನಲ್ಲಿ ಇದ್ದ ಕೋತಿಗಳು ಅಸ್ವಸ್ಥಗೊಂಡು ಕೆಲವು ಮೂರ್ಛೆ ಹೋಗಿದ್ದು ಹಾಗೂ 30 ಕ್ಕೂ ಹೆಚ್ಚು ಕೋತಿಗಳು ಉಸಿರುಗಟ್ಟಿ ಸತ್ತು ಹೋಗಿವೆ.

ತದ ನಂತರ ರಾತ್ರಿ ಸುಮಾರು 9 ಗಂಟೆಯಲ್ಲಿ ಜರಬಂಡಹಳ್ಳಿ ತಾಲೂಕು ಪಂಚಾಯತ್​ ಸದಸ್ಯರಾದ ಮೋಹನ್ ಅವರ ಟ್ರ್ಯಾಕ್ಟರ್ ನಲ್ಲಿ ಗೌರಿಬಿದನೂರು ಪಟ್ಟಣದ ಕಲ್ಲೂಡಿ ರೈಲ್ವೆ ಹಳಿಯ ಬಳಿ ಬಿಡಲು ಬಂದ ವೇಳೆ ಹಿಂದೂ ಜಾಗರಣ ವೇದಿಕೆಯ ಮುಖಂಡರು ಟ್ರ್ಯಾಕ್ಟರ್‌ ತಡೆದು ಪ್ರಶ್ನಿಸಿದ್ದಾರೆ. ಅಲ್ಲದೆ, ಕೋತಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಸದ್ಯ ಟ್ರ್ಯಾಕ್ಟರ್ ಹಾಗೂ ಚಾಲಕರನ್ನು ಗೌರಿಬಿದನೂರು ಪುರ ಪೊಲೀಸರಿಗೆ ಒಪ್ಪಿಸಿ ಅರಣ್ಯ ಇಲಾಖೆಯವರು ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ದೂರು ನೀಡಿದ್ದಾರೆ.

ವಿಷ ಹಾಕಿ ಕೊಂದ ಆರೋಪ :

ಗ್ರಾಮದಲ್ಲಿ ಕೋತಿಗಳ ಕಾಟಕ್ಕೆ ಬೇಸತ್ತ ಜನ ಬೋನಿನಲ್ಲಿ ಕೋತಿಗಳನ್ನು ಸೆರೆಹಿಡಿದು, ಅವುಗಳಿಗೆ ವಿಷ ಹಾಕಿ ಕೊಲ್ಲಲಾಗಿದ್ದು, ಪ್ರಕರಣವನ್ನು ಮುಚ್ಚಲು ರೈಲ್ವೆ ಹಳಿಯ ಬಳಿ ಬಿಸಾಡಲು ಯತ್ನಿಸಿರುವ ಬಗ್ಗೆ ಮಾಹಿತಿ ಹಿಂದು ಜಾಗರಣ ವೇದಿಕೆಯ ಮುಖಂಡರಿಗೆ ಲಭ್ಯವಾಗುತ್ತಿದ್ದಂತೆ, ಸ್ಥಳಕ್ಕೆ ಧಾವಿಸಿ ಟ್ರ್ಯಾಕ್ಟರ್‌ನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಜರಬಂಡಹಳ್ಳಿ ಗ್ರಾಮ ಪಂಚಾಯತ್​ ಸದಸ್ಯ ಮೋಹನ್ ಕೋತಿಗಳಿಗೆ ವಿಷ ಹಾಕಿರುವುದಾಗಿ ಹಿಂದು ಜಾಗರಣ ವೇದಿಕೆ ಮುಖಂಡರು ಆರೋಪಿಸಿದ್ದಾರೆ.

Over 30monkeys were suspected to be poisoned to death in Chikkaballapur, Bengaluru.