ಫ್ರೂಟ್ ಇರ್ಫಾನ್ ಮೇಲೆ ಗುಂಡಿನ ದಾಳಿ- ಬಾಂಬೆ ಶೂಟರ್ ಗಳ ಬಂಧನ

27-08-20 11:59 am       Hubali Reporter   ಕ್ರೈಂ

ಧಾರವಾಡದ ರೌಡಿಶೀಟರ್ ಇರ್ಫಾನ್ ಹಂಚಿನಾಳ ಅಲಿಯಾಸ್ ಫ್ರೂಟ್ ಇರ್ಫಾನ್ ಹತ್ಯೆಗೆ ಸುಪಾರಿ ನೀಡಿದ್ದ ವ್ಯಕ್ತಿ ಸಮೇತ ಮೂವರು ಶೂಟರ್ಸ್ ಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಹುಬ್ಬಳ್ಳಿ , ಆಗಸ್ಟ್ 27: ಧಾರವಾಡದ ರೌಡಿಶೀಟರ್ ಇರ್ಫಾನ್ ಹಂಚಿನಾಳ ಅಲಿಯಾಸ್ ಫ್ರೂಟ್ ಇರ್ಫಾನ್ ಹತ್ಯೆಗೆ ಸುಪಾರಿ ನೀಡಿದ್ದ ವ್ಯಕ್ತಿ ಸಮೇತ ಮೂವರು ಶೂಟರ್ಸ್ ಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್ ಹೊಟೇಲ್ ಎದುರು ಆಗಸ್ಟ್ 7ರಂದು ನಡೆದಿದ್ದ ಕೊಲೆಯ ರೂವಾರಿಗಳ ಹುಡುಕಾಟಕ್ಕೆ ಪೊಲೀಸರು ನಿರಂತರವಾಗಿ ಪ್ರಯತ್ನ ಮಾಡಿದ್ದು, ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಾಂಬೆಯಿಂದ ಕರೆ ತಂದಿರುವ ಮೂವರು ಆರೋಪಿಗಳಾದ ನೀಲೇಶ ಗೋವಿಂದ ನಾಡಗಾಂವಕರ್, ಸುನೀಲ ಬನಸೂಡೆ ಅಲಿಯಾಸ್ ಮಾಮಾ ದೇವರಾಂ ಬನಾವುರಿ ಹಾಗೂ ನವನಾಥ ಅರ್ಜುನ ಡೋಲಾಸ್ ಎಂದು ಗುರುತಿಸಲಾಗಿದೆ. ಇವರಿಗೆ ಸುಪಾರಿ ನೀಡಿದ್ದ ವ್ಯಕ್ತಿಯನ್ನು ರಾಜೇಂದ್ರಸಿಂಗ್ ಮೋಹನಸಿಂಗ್ ರಾಹುತ್ ಅಲಿಯಾಸ್ ರಾಜು ನೇಪಾಳಿ ಎಂದು ಗುರುತಿಸಲಾಗಿದೆ.
ಬಂಧಿತ ಮೂವರು ಆರೋಪಿಗಳು ಹಣಕ್ಕಾಗಿ ರೌಡಿಶೀಟರ್ ಇರ್ಫಾನ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು. ಅವರನ್ನು ಮುಂಬೈ ಪೊಲೀಸರ ಸಹಾಯದಿಂದ ಹುಬ್ಬಳ್ಳಿ ಪೊಲೀಸರು ಬಂಧಿಸಿ ಇದೀಗ ಹುಬ್ಬಳ್ಳಿಗೆ ಕರೆತಂದಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಮೈಸೂರು ಜೈಲಿನಲ್ಲಿರುವ ಭೂಗತ ಪಾತಕಿ ಬಚ್ಚಾಖಾನ ಹೆಸರು ಸಹ ತಳಕು ಹಾಕಿಕೊಂಡಿದ್ದು ಬಚ್ಚಾಖಾನನ ಪಾತ್ರದ ಬಗ್ಗೆಯೂ ಸಹ ಪೊಲೀಸರು ವಿಚಾರಣೆ ನಡೆಸಲು ಇದೀಗ ಮುಂದಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹುಬ್ಬಳ್ಳಿ-ಧಾರವಾಡ ಮೂಲದ ಸಾಫ್ಟ್ ವೇರ್ ಅನಲೈಸರ್ ಆಗಿದ್ದ ಧಾರವಾಡ ಮಣಕಿಲ್ಲಾ ನಿವಾಸಿ ಅಫ್ತಾಬ ಮಹಮ್ಮದಲಿ ಬೇಪಾರಿ, ಸ್ಕ್ರ್ಯಾಪ್ ವ್ಯವಹಾರ ಮಾಡುತ್ತಿದ್ದ ಧಾರವಾಡ ಶೇಖ ಕಂಪೌಂಡ್ ಮಾಳಾಪುರ ನಿವಾಸಿ ತೌಸೀಫ ಸಾಧಿಕ ನಿಪ್ಪಾಣಿ, ಧಾರವಾಡ ಮೆಣಸಿನಕಾಯಿ ಓಣಿ ಮದಾರಮಡ್ಡಿಯ ವಿದ್ಯಾರ್ಥಿ ಅತಿಯಾಬಖಾನ ಅಮಾನುಲ್ಲಾಖಾನ ತಡಕೋಡ, ಇಸ್ಲಾಂಪೂರ ರಸ್ತೆ ಹಳೇ ಹುಬ್ಬಳ್ಳಿ ನಿವಾಸಿ ವಿದ್ಯಾರ್ಥಿ ಅಮೀರ ಮಹಮ್ಮದಶಫಿ ತಮಟಗಾರ ಹಾಗೂ ಲಾರಿ ವ್ಯವಹಾರ ಮಾಡುತ್ತಿರುವ ಧಾರವಾಡದ ಬಡಿಗೇರ ಓಣಿ ಮದಿಹಾಳ ನಿವಾಸಿ ಮೋಹಿನ್ ದಾದಾಸಾಬ ಪಟೇಲ ಸೇರಿದಂತೆ ಮೈಸೂರಿನ ಶಹಜಾನ್ ಮತ್ತು ಸೈಯದ್ ಸೋಹೈಲ್ ಎಂಬ ಏಳು ಜನರನ್ನು ಬಂಧನ ಮಾಡಲಾಗಿದ್ದು, ಗುಂಡಿನ ದಾಳಿ ಪ್ರಕರಣದಲ್ಲಿ ಒಟ್ಟು ಹತ್ತು ಜನರ ಬಂಧನವಾಗಿದೆ. ಘಟನೆಯ ಕುರಿತು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.