ದಾಂಡೇಲಿಯೇ ಖೋಟಾ ರಹದಾರಿ ! 72 ಲಕ್ಷ ಮೌಲ್ಯದ ಖೋಟಾ ನೋಟು ಪತ್ತೆ ; ಹೊರಬಿದ್ದ ಭಾರೀ ಡೀಲಿಂಗ್ !!

03-06-21 06:29 pm       Headline Karnataka News Network   ಕ್ರೈಂ

ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಖೋಟಾ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರವಾರ, ಜೂನ್ 3: ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಖೋಟಾ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಂಡೇಲಿ ತಾಲೂಕಿನ ಭರ್ಚಿ ಎಂಬಲ್ಲಿ ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 72 ಲಕ್ಷ ಖೋಟಾ ನೋಟು ಮತ್ತು 4.50 ಲಕ್ಷ ಅಸಲಿ ನೋಟುಗಳ ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆ.‌

ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು, ದಾಳಿ ನಡೆಸಿದ್ದು ಭರ್ಚಿ ಚೆಕ್ ಪೋಸ್ಟ್ ನಲ್ಲಿ ಅನುಮಾನಾಸ್ಪದ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಕಾರು ಮಹಾರಾಷ್ಟ್ರದ ರತ್ನಗಿರಿ ಕಡೆಯಿಂದ ಬಂದಿದೆ ಎನ್ನುವುದು ತಿಳಿದುಬಂದಿದ್ದು ಅನುಮಾನ ಬಂದು ಕಾರಿನ ಒಳಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಹಿಂಬದಿ ಸೀಟಲ್ಲಿ ಕುಳಿತಿದ್ದ ಒಬ್ಬ ಕಾರಿನ ಬಾಗಿಲು ತೆರೆದು ಓಡಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸರು ಕಾರನ್ನು ಸುತ್ತುವರೆದು ಪರಿಶೀಲಿಸಿದಾಗ ಕಾರಿನಲ್ಲಿ ಭಾರೀ ಮೊತ್ತದ ನೋಟಿನ ಕಂತೆಗಳು ಇರುವುದು ಪತ್ತೆಯಾಗಿವೆ. 
 
ಅದರಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವಾಗಲೇ ಹಿಂದಿನಿಂದ ಮತ್ತೊಂದು ಕಾರು ಬಂದಿದ್ದು, ಅದರಲ್ಲಿಯೂ ಇಬ್ಬರು ಆರೋಪಿಗಳಿದ್ದರು.  ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ದಾಂಡೇಲಿಯ ವನಶ್ರೀ ಭಾಗದ ಶಿವಾಜಿ ಶ್ರವಣ್ ಎನ್ನುವವರ ಮನೆಯಲ್ಲಿ 4.5 ಲಕ್ಷ ರೂ. ಅಸಲಿ ನೋಟು ಪಡೆದು, 9 ಲಕ್ಷ ಮೌಲ್ಯದ ನಕಲಿ ನೋಟು ನೀಡಲು ಪ್ಲಾನ್ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.

ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಮಾಹಿತಿ ಪಡೆದು ಇನ್ನೂ 62 ಲಕ್ಷ ಮೊತ್ತದ ಖೋಟಾ ನೋಟು ಪತ್ತೆ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಕಿರಣ ದೇಸಾಯಿ, ಗಿರೀಶ ಪೂಜಾರಿ, ಬೆಳಗಾವಿಯ ಅಮರ ನಾಯ್ಕ, ಸಾಗರ ಕುಣ್ಣೂರ್ಕರ್, ದಾಂಡೇಲಿಯ ಶಬ್ಬೀರ್ ಕುಟ್ಟಿ ಹಾಗೂ ಶಿವಾಜಿ ಶ್ರವಣ ಎಂದು ಗುರುತಿಸಲಾಗಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲೇ ಅತೀ ದೊಡ್ಡ ಖೋಟಾ ನೋಟು ಪ್ರಕರಣ ಇದಾಗಿದ್ದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ದಾಂಡೇಲಿ ಡಿಎಸ್ಪಿ ಗಣೇಶ, ಸಿಪಿಐ ಪ್ರಭು, ಗ್ರಾಮೀಣ ಠಾಣೆಯ ಪಿಎಸ್‌ಐ ಗಾಡೇಕರ್, ಪಿಎಸ್‌ಐ ಯಲ್ಲಾಲಿಂಗ, ನಗರ ಠಾಣೆಯ ಪಿಎಸ್‌ಐ ಯಲ್ಲಪ್ಪ ಹಾಗೂ ದಾಂಡೇಲಿ ಗ್ರಾಮೀಣ ಮತ್ತು ನಗರ ಠಾಣೆಯ ಎಲ್ಲಾ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಪ್ರಶಂಸಿಸಿದ್ದಾರೆ.

The Karwar police have busted a counterfeit currency racket, seized fake currency with a face value of over Rs 72 lakh from various locations and arrested six people