ಪಾಪಿಗಳನ್ನು ಜೈಲಿಗೆ ಅಟ್ಟಿತ್ತು ಎಲುಬಿನ ತುಂಡು ! ಸಾಕ್ಷ್ಯವಾಗಿ ಕಾಡಿತ್ತು ಭಾಸ್ಕರ ಶೆಟ್ಟಿಯ ಪ್ರೇತಾತ್ಮ ?

10-06-21 05:22 pm       Crime Correspondent, Udupi   ಕ್ರೈಂ

ಮಾಡಿದ ಕರ್ಮ ನಮ್ಮನ್ನು ಬಿಡುವುದಿಲ್ಲ ಎನ್ನುವಂತೆ, ಕೊಲೆ ಕೃತ್ಯಕ್ಕೆ ಸಾಕ್ಷಿಯಿಲ್ಲದಿದ್ದರೂ ಶವ ಸುಟ್ಟು ಹಾಕಿದ್ರೂ ಉಳಿದುಕೊಂಡಿದ್ದ ಎಲುಬಿನ ಚೂರುಗಳೇ ಭಾಸ್ಕರ ಶೆಟ್ಟಿಯ ಪ್ರೇತಾತ್ಮದ ರೂಪದಲ್ಲಿ ಅಪರಾಧಿಗಳನ್ನು ಕಾಡಿದ್ದು ದುರಂತ ಸತ್ಯ.

ಉಡುಪಿ, ಜೂನ್ 10: ಸಾಮಾನ್ಯವಾಗಿ ಕೊಲೆಯಾಗಲೀ, ಇನ್ಯಾವುದೇ ಪ್ರಕರಣವಾಗಲೀ ಕೋರ್ಟಿನಲ್ಲಿ ಗೆಲ್ಲೋದು ಪೊಲೀಸರು ತೋರಿಸುವ ಸಾಕ್ಷಿಯಿಂದ ಮಾತ್ರ. ಸಾಕ್ಷಿಯಿದ್ದರೆ, ಅಪರಾಧಿಗೆ ಶಿಕ್ಷೆ. ಇಲ್ಲದಿದ್ದರೆ ಆರೋಪಿ ಕೊಲೆ ಮಾಡಿದ್ದಾನೆ ಅನ್ನೋದು ಗೊತ್ತಿದ್ದರೂ, ನ್ಯಾಯಾಧೀಶರು ಕೂಡ ಆತನನ್ನು ಬಿಟ್ಟೇ ಬಿಡಬೇಕಾಗುತ್ತದೆ. ಇದೇ ಕಾರಣಕ್ಕೆ ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದವರು ತಾವು ಕೋರ್ಟ್ ಕೇಸನ್ನು ಗೆದ್ದೇ ಗೆಲ್ಲುತ್ತೇವೆಂದು ಹುಂಬತನದಲ್ಲೇ ಇದ್ದರು. ಯಾಕಂದ್ರೆ, ಕೊಲೆ ಕೃತ್ಯದ ಬಗ್ಗೆ ಒಂದೇ ಒಂದು ಪ್ರತ್ಯಕ್ಷ ಸಾಕ್ಷಿಗಳಿರಲಿಲ್ಲ. ಏನೆಲ್ಲಾ ಸಾಕ್ಷಿಗಳು ಉಳಿದುಕೊಂಡಿರಬೇಕಿತ್ತೋ ಅವೆಲ್ಲವನ್ನೂ ಆರೋಪಿಗಳು ನಾಶ ಪಡಿಸಿದ್ದರು. ತುಂಬಾನೇ ಪ್ಲಾನ್ ಹಾಕ್ಕೊಂಡು ಕೊಲೆಕೃತ್ಯ ನಡೆಸಿದ್ದರು. ಆದರೆ, ಕೊನೆಗೆ ಉಳಿದುಕೊಂಡಿದ್ದ ಎಲುಬಿನ ಚೂರುಗಳೇ ಭಾಸ್ಕರ ಶೆಟ್ಟಿಯ ಪ್ರೇತಾತ್ಮದ ರೂಪದಲ್ಲಿ ಬಂದು ಅಪರಾಧಿಗಳ ಭವಿಷ್ಯವನ್ನೇ ಬರೆದುಬಿಟ್ಟವು.  

ಭಾಸ್ಕರ ಶೆಟ್ಟಿಯ ಕೊಲೆ ನಡೆದಿರೋದು, ಶವ ಸುಟ್ಟಿರೋದಕ್ಕೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲ. ಅಂದ್ರೆ, ತನಿಖೆಯಲ್ಲಿ ಪೊಲೀಸರು ಸಾಬೀತುಪಡಿಸಿದ ಅಂಶಗಳಿಂದ ಮತ್ತು ಆರೋಪಿಗಳು ನೀಡಿದ್ದ ಹೇಳಿಕೆಗಳಿಂದಲೇ ಕೊಲೆ ಎನ್ನುವ ಸುದ್ದಿಯಾಗಿತ್ತು. ಆದರೆ, ಒಂದು ಕೊಲೆ ಪ್ರಕರಣ ಕೇವಲ ಪ್ರತ್ಯಕ್ಷ ಸಾಕ್ಷಿಯಿಂದ ಮಾತ್ರ ಗೆಲ್ಲುವುದಲ್ಲ. ಪೊಲೀಸರು ಸಾಧಿಸಿದರೆ, ಯಾವುದೇ ವ್ಯಕ್ತಿ ಸಾಕ್ಷ್ಯ ಹೇಳಿಲ್ಲ ಎಂದರೂ ಕೇಸನ್ನು ಚುಕ್ತಾ ಮಾಡಬೇಕಾಗಿಲ್ಲ. ಮನಸ್ಸು ಮಾಡಿದರೆ, ಒಂದು ಕೇಸಿನ ಸುತ್ತ ಹತ್ತಾರು ದಾರಿಗಳಿರುತ್ತವೆ. ಕೃತ್ಯ ನಡೆದ ಜಾಗದಲ್ಲಿ ಉಳಿದು ಹೋದ ರಕ್ತದ ಕಲೆಗಳೂ ಆರೋಪವನ್ನು ಪುಷ್ಟೀಕರಿಸುತ್ತವೆ. ಅವುಗಳನ್ನು ಪತ್ತೆ ಮಾಡಿ, ಸಾಂದರ್ಭಿಕ ಸಾಕ್ಷ್ಯಗಳಾಗಿಸಿ ಕೋರ್ಟ್ ಕಟಕಟೆಯಲ್ಲಿ ಮಹತ್ತರ ಸಾಕ್ಷ್ಯವಾಗಿಸುವುದು ಅಪರಾಧ ಶಾಸ್ತ್ರದಲ್ಲಿ ಅಪ್ಪಟ ಕಲೆ. ಸಿಐಡಿ ಅಧಿಕಾರಿಗಳು ಮನಸ್ಸು ಮಾಡಿದರೆ, ಯಾವುದೇ ಕೇಸಿಗೂ ಅಂತ್ಯ ಹಾಕೇ ಬಿಡಬಲ್ಲರು ಅನ್ನುವುದಕ್ಕೆ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣವೇ ಸಾಕ್ಷಿ.

ಅದು 2016ರ ಜುಲೈ 28ರ ಮಧ್ಯಾಹ್ನ. ದಿನವೂ ಮನೆಗೆ ಬಂದು ಹೋಗುತ್ತಿದ್ದ ಭಾಸ್ಕರ ಶೆಟ್ಟಿ ಮನೆಗೆ ಬಂದಿರಲಿಲ್ಲ. ಮೊದಲೇ ಪತ್ನಿ, ಮಗನ ಗಲಾಟೆ ಬಗ್ಗೆ ಗೊತ್ತಿದ್ದ ಗುಲಾಬಿ ಶೆಟ್ಟಿಗೆ ಅನುಮಾನ ಬಂದಿತ್ತು. ಆಸ್ತಿಪತ್ರ ರೆಡಿ ಮಾಡುತ್ತೇನೆಂದು ಹೇಳಿ ಹೊರಟಿದ್ದ ಭಾಸ್ಕರ ಶೆಟ್ಟಿ ಕಾಣಿಸುತ್ತಿಲ್ಲವೆಂದು ಹೇಳಿ ಆತಂಕ ಎದುರಾಗಿತ್ತು. ಯಾಕಂದ್ರೆ, ಅದಕ್ಕೂ ಮೊದಲೇ ಭಾಸ್ಕರ ಶೆಟ್ಟಿ ಪತ್ನಿ ಮಗನಿಂದ ಜೀವಕ್ಕೆ ಆತಂಕವಿದೆ ಎಂದು ಪೊಲೀಸು ದೂರು ಕೊಟ್ಟಿದ್ದರು. ಹೀಗಾಗಿ ಅನುಮಾನಗೊಂಡು ಮರುದಿನವೇ ಬೆಳಗ್ಗೆ ಬಂಟರ ಸಂಘದ ಪ್ರಮುಖರಿಗೆ ವಿಷಯ ತಿಳಿಸಿ ಮಣಿಪಾಲ ಠಾಣೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಮೊದಲು ಮಿಸ್ಸಿಂಗ್ ಕೇಸ್ ಅಷ್ಟೇ ಆಗಿ ಉಳಿದಿದ್ದ ಭಾಸ್ಕರ ಶೆಟ್ಟಿಯ ಪ್ರಕರಣ ಮೂರೇ ದಿನಗಳಲ್ಲಿ ಭೀಕರ ಕೊಲೆ ಅನ್ನುವುದು ತಿಳಿದುಬಂದಿತ್ತು. ಪತ್ನಿ ರಾಜೇಶ್ವರಿ ಶೆಟ್ಟಿ, ತನ್ನ ಪ್ರಿಯಕರ ನಿರಂಜನ ಭಟ್ ಮತ್ತು ಮಗನ ಜೊತೆಗೆ ಸೇರಿಕೊಂಡು ಭಾಸ್ಕರ ಶೆಟ್ಟಿಯನ್ನು ಇಂದ್ರಾಳಿಯ ಅಪಾರ್ಟ್ಮೆಂಟ್ ಮನೆಯಲ್ಲಿ ಕೊಲೆಗೈದಿದ್ದಲ್ಲದೆ, ಬಳಿಕ ಹೆಣವನ್ನು ಕಾರ್ಕಳದ ನಂದಳಿಕೆಯ ನಿರಂಜನ ಭಟ್ಟನ ಮನೆಗೆ ಕೊಂಡೊಯ್ದು ಹೋಮಕುಂಡಕ್ಕೆ ಹಾಕಿ ಸುಟ್ಟು ಹಾಕಿದ್ದೂ ಬಯಲಾಗಿತ್ತು.

ಜ್ಯೋತಿಷ್ಯ ಹೇಳುವ ಭಟ್ಟರ ಮನೆಯಲ್ಲಿ ಈ ರೀತಿಯ ಅಮಾನುಷ ಕೃತ್ಯ ನಡೆದಿದೆ ಎನ್ನುವ ವಿಚಾರ ಬಯಲಾಗುತ್ತಿದ್ದಂತೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಮೂರೂ ಬಿಟ್ಟ ಹೆಂಡ್ತಿ ರಾಜೇಶ್ವರಿ ಶೆಟ್ಟಿ, ಮಗ 22ರ ಹರೆಯದ ನವನೀತ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ ಭಟ್ಟನ ಈ ಕೃತ್ಯ ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಕೇಸಿಗೆ ದುಬೈ ಲಿಂಕ್ ಇದ್ದುದರಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳು ಇಡೀ ಕೃತ್ಯವನ್ನು ಯಾವ ರೀತಿ ಮಾಡಲಾಗಿತ್ತು ಅನ್ನೋದನ್ನು ಆರೋಪಿಗಳಿಂದಲೇ ತಿಳಿದುಕೊಂಡು ಕೂಲಂಕುಷ ತನಿಖೆ ನಡೆಸಿದ್ದರು. ಬಳಿಕ ಸುದೀರ್ಘ ಎರಡು ಸಾವಿರ ಪುಟಗಳ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 162 ಸಾಕ್ಷಿಗಳನ್ನು ಕಲೆಹಾಕಿ, ಎಲ್ಲವನ್ನೂ ತುಂಬಾ ಡಿಟೈಲಾಗಿ ಬರೆದಿದ್ದರು. ಕೇವಲ ಮೂರು ತಿಂಗಳಲ್ಲಿ ತನಿಖೆ ಪೂರ್ತಿಗೊಳಿಸಿದ್ದ ಸಿಐಡಿ ಅಧಿಕಾರಿಗಳ ತಂಡ ಮೊದಲು ಪ್ರಾಥಮಿಕ, ಆಬಳಿಕ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

2017ರಲ್ಲಿಯೇ ಪ್ರಕರಣದ ವಿಚಾರಣೆ ಉಡುಪಿ ಕೋರ್ಟಿನಲ್ಲಿ ಆರಂಭಗೊಂಡಿತ್ತು. ಉಡುಪಿಯಲ್ಲಿ ಹಲವು ಸಂಘ- ಸಂಸ್ಥೆಗಳು ಭಾಸ್ಕರ ಶೆಟ್ಟಿಯ ಅಮಾನುಷ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಉಡುಪಿಯ ವಕೀಲರು ಕೂಡ ರಾಜೇಶ್ವರಿ ಶೆಟ್ಟಿ ಪರವಾಗಿ ಯಾರು ಕೂಡ ವಕಾಲತ್ತು ಮಾಡುವುದಿಲ್ಲ ಎಂದು ನಿರ್ಣಯ ತೆಗೆದುಕೊಂಡಿದ್ದರು. ಇದೇ ವೇಳೆ, ಉಡುಪಿಯ ಹಿರಿಯ ವಕೀಲ ಶಾಂತರಾಮ ಶೆಟ್ಟಿ ಅವರನ್ನು ಭಾಸ್ಕರ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಡಬೇಕೆಂದು ಬಂಟರ ಸಂಘದ ಸದಸ್ಯರು ಸೇರಿ ಸರಕಾರಕ್ಕೆ ಅಹವಾಲು ಹಾಕಿದ್ದರು. ಶಾಸಕ ಪ್ರಮೋದ್ ಮಧ್ವರಾಜ್ ಮುತುವರ್ಜಿಯಿಂದಾಗಿ ಶಾಂತರಾಮ ಶೆಟ್ಟಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದರು.

ಇದೇ ವೇಳೆ, ರಾಜೇಶ್ವರಿ ಶೆಟ್ಟಿ ಪರವಾಗಿ ಉಡುಪಿಯಲ್ಲಿ ವಕೀಲರು ಸಿಗದ ಕಾರಣ ಮಂಗಳೂರಿನ ಕ್ರಿಮಿನಲ್ ವಕೀಲ ಅರುಣ್ ಬಂಗೇರ ಅವರನ್ನು ಸಂಪರ್ಕಿಸಲಾಗಿತ್ತು. ಅತ್ತ ಪೊಲೀಸರು ಚಾರ್ಜ್ ಶೀಟ್ ಹಾಕುವ ಮೊದಲೇ ಹಣದ ಬಲದಲ್ಲಿ ಜಾಮೀನಿಗಾಗಿ ಹಾತೊರೆದ ರಾಜೇಶ್ವರಿ ಶೆಟ್ಟಿ, ಮಹಿಳೆ ಅನ್ನುವ ನೆಪದಲ್ಲಿ ಜಾಮೀನಿಗೆ ಅರ್ಜಿ ಹಾಕಿಸಿದ್ದಳು. ಆದರೆ, ಯಾವುದೇ ಕೋರ್ಟ್ ಜಾಮೀನು ನೀಡಲು ಒಪ್ಪದ ಕಾರಣ ಕೊನೆಗೆ ಮೂರು ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆದು, ಹೈಕೋರ್ಟಿನಲ್ಲೂ ಆಗದೆ ಕೊನೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಜಾಮೀನು ಪಡೆದಿದ್ದರು. ಆಬಳಿಕ ರಾಜೇಶ್ವರಿ ಶೆಟ್ಟಿ ಎರಡು ಬಾರಿ ವಕೀಲರನ್ನು ಬದಲಿಸಿದ್ದು ಕೊನೆಗೆ ಆಕೆಗೇ ಮುಳುವಾಗಿ ಪರಿಣಮಿಸಿತ್ತು.

ವಿಚಾರಣೆ ಹಂತದಲ್ಲಿ ರಾಜೇಶ್ವರಿ ಪಾಲಿಗೆ ಮುಳ್ಳಾಗಿ ಕಾಡಿದ್ದು ಆಕೆಯೇ ಮಾಡಿದ್ದ ಸ್ವಯಂಕೃತ ಅಪರಾಧ. ಭಾಸ್ಕರ ಶೆಟ್ಟಿಯನ್ನು ನಂದಳಿಕೆಯ ನಿರಂಜನ ಭಟ್ಟನ ಮನೆಯಲ್ಲಿ ಜುಲೈ 28ರ ರಾತ್ರಿ ಹೋಮಕುಂಡಕ್ಕೆ ಹಾಕಿ ಸುಟ್ಟ ಬಳಿಕ, ಮರುದಿನವೇ ಭಸ್ಮ ಮತ್ತು ಎಲುಬಿನ ತುಂಡುಗಳನ್ನು ಹೋಮಕುಂಡದ ಕಲ್ಲುಗಳ ಸಹಿತ ಗೋಣಿಚೀಲದಲ್ಲಿ ಕಟ್ಟಿ ನದಿಗೆ ಎಸೆದಿದ್ದರು. ಕೊಲೆಯ ಬಗ್ಗೆ ಅರಿವಿಲ್ಲದ ಕಾರಿನ ಚಾಲಕ ರಾಘವೇಂದ್ರನ ಬಳಿ ಗೋಣಿಚೀಲದಲ್ಲಿ ಕಟ್ಟನ್ನು ಕೊಟ್ಟು ನದಿಗೆಸೆಯಲು ಹೇಳಿದ್ದರು. ಕೊಲೆ ಪ್ರಕರಣ ಬಯಲಾದಾಗ ರಾಘವೇಂದ್ರನೂ ಅರೆಸ್ಟ್ ಆಗಿದ್ದ. ತಾನು ಎಸೆದಿದ್ದ ಗೋಣಿಚೀಲದ ಬಗ್ಗೆ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದೇ ದೊಡ್ಡ ಸಾಕ್ಷ್ಯವಾಗಿ ಬದಲಾಗಿತ್ತು.

ಅಪರಾಧಿಗಳನ್ನು ಜೈಲಿಗೆ ತಳ್ಳಿದ ಎಲುಬಿನ ತುಂಡು !

ಆವತ್ತು ಗೋಣಿಚೀಲದಲ್ಲಿ ಕಟ್ಟಿ ನದಿಗೆಸೆದಿದ್ದ ಭಸ್ಮ ನೀರಿನಲ್ಲಿ ಲೀನವಾಗಿದ್ದರೆ, ಎಲುಬಿನ ತುಂಡುಗಳು ಅಲ್ಲಿಯೇ ಉಳಿದಿದ್ದವು. ಭಾಸ್ಕರ ಶೆಟ್ಟಿಯನ್ನು ಸುಟ್ಟು ಮುಗಿಸಿದ್ದೇವೆ ಎಂದು ಬೀಗಿದ್ದ ಹೆಂಡ್ತಿ, ಮಗನಿಗೆ ಕೊನೆಗೆ ಕಾಡಿದ್ದು ಅದೇ ಎಲುಬಿನ ತುಂಡುಗಳು. ಪೆಟ್ರೋಲ್ ಮತ್ತು ಸ್ಥಳೀಯರಿಗೆ ಗೊತ್ತಾಗಬಾರದೆಂದು ಸಾಕಷ್ಟು ಕರ್ಪೂರ, ತುಪ್ಪ ಹಾಕಿ ಉರಿಸಿದ್ದ ಭಾಸ್ಕರ ಶೆಟ್ಟಿಯ ಅಜಾನುಬಾಹು ದೇಹ ಇಡೀ ರಾತ್ರಿಯಲ್ಲಿ ಸುಟ್ಟು ಬೂದಿಯಾಗಿದ್ದರೂ, ಎಲುಬಿನ ಚೂರುಗಳು ಉಳಿದಿದ್ದವು. ನದಿಯಲ್ಲಿ ಪತ್ತೆಯಾಗಿದ್ದ ಎಲುಬಿನ ಚೂರುಗಳನ್ನು ಹೈದ್ರಾಬಾದಿನ ಎಫ್ಎಸ್ಎಲ್ ರಿಪೋರ್ಟಿಗೆ ಕಳಿಸಲಾಗಿತ್ತು. ಭಾಸ್ಕರ ಶೆಟ್ಟಿಯ ತಾಯಿ ಗುಲಾಬಿ ಶೆಟ್ಟಿ ಮತ್ತು ಸೋದರನಿಗೆ ಎಲುಬಿನ ಡಿಎನ್ಎ ಹೋಲಿಕೆಯಾಗಿದ್ದು ಕೋರ್ಟಿನಲ್ಲಿ ಸಾಕ್ಷ್ಯವಾಗಿ ನಿಂತಿದ್ದಲ್ಲದೆ, ಭಾಸ್ಕರ ಶೆಟ್ಟಿಯನ್ನು ಹೋಮಕುಂಡಕ್ಕೆ ಹಾಕಿ ಸುಟ್ಟಿದ್ದಕ್ಕೆ ಸಾಕ್ಷ್ಯ ಹೇಳಿತ್ತು. ಬೇರಾವುದೇ ಪ್ರತ್ಯಕ್ಷ ಸಾಕ್ಷಿ ಇರದೇ ಇದ್ದರೂ, ಗಂಡನ ಶವದ ಎಲುಬಿನ ತುಂಡು ರಾಜೇಶ್ವರಿ ಶೆಟ್ಟಿಯನ್ನು ಕಡೆಗೂ ಕಂಬಿ ಎಣಿಸುವಂತೆ ಮಾಡಿತ್ತು.

ಮುಂಬೈ ರೌಡಿ ಹೇಳಿದ್ದ ಸುಪಾರಿ ಸಾಕ್ಷ್ಯ

ಇದಲ್ಲದೆ, ನಿರಂಜನ ಭಟ್ಟ ಉಡುಪಿ ಮೂಲದ ಮುಂಬೈನ ಒಬ್ಬ ರೌಡಿಗೆ ಸುಪಾರಿ ಕೊಟ್ಟಿದ್ದು ಕೂಡ ದೊಡ್ಡ ಸಾಕ್ಷ್ಯವಾಗಿತ್ತು. ಭಾಸ್ಕರ ಶೆಟ್ಟಿಯನ್ನು ಕೊಲ್ಲಲು ಪ್ಲಾನ್ ಹಾಕಿದ್ದ ಜ್ಯೋತಿಷಿ ನಿರಂಜನ ಭಟ್ಟ ಮತ್ತು ರಾಜೇಶ್ವರಿ ಶೆಟ್ಟಿ, ಮುಂಬೈನ ರೌಡಿ ತಂಡಕ್ಕೆ ಸುಪಾರಿ ಕೊಟ್ಟಿದ್ದರು. ರೌಡಿಯಿಂದ ಕ್ಲೋರೋಫಾರ್ಮ್ ಮತ್ತು ಪಿಸ್ತೂಲನ್ನು ಪಡೆದಿದ್ದರು. ಈ ವಿಚಾರವನ್ನು ತನಿಖೆಯಲ್ಲಿ ನಿರಂಜನ ಭಟ್ಟನೇ ಹೇಳಿದ್ದರಿಂದ, ಪೊಲೀಸರು ಮುಂಬೈ ರೌಡಿಯನ್ನು ಸಂಪರ್ಕಿಸಿ, ಕೋರ್ಟಿಗೆ ಬಂದು ಸಾಕ್ಷಿ ಹೇಳುವಂತೆ ನೋಡಿಕೊಂಡಿದ್ದರು. ಕೋರ್ಟಿನಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ರೌಡಿ, ನಿರಂಜನ್ ಭಟ್ಟ ಸುಪಾರಿ ಕೊಟ್ಟಿರುವ ವಿಚಾರವನ್ನು ಸಾಕ್ಷಿ ಹೇಳಿದ್ದ. ಇದಕ್ಕೆ ಸಾಕ್ಷಿಯಾಗಿ ನಿರಂಜನ ಭಟ್ಟನ ಮೊಬೈಲಿನಿಂದ ರೌಡಿಗೆ ಕರೆ ಹೋಗಿದ್ದು ಮಾತಾಡಿದ್ದು ತನಿಖೆಯಲ್ಲಿ ಟ್ರೇಸ್ ಆಗಿತ್ತು.

ತಾನೇ ಬರೆದಿದ್ದ ಪತ್ರವೇ ಮುಳುವಾಯ್ತು !

ಈ ನಡುವೆ, ನಿರಂಜನ್ ಭಟ್ಟ ಮಂಗಳೂರಿನ ಜೈಲಿನಲ್ಲಿದ್ದಾಗ ವಜ್ರದ ಉಂಗುರವನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಪೊಲೀಸ್ ವಿಚಾರಣೆ ನಡೆಯುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಬಳಿಕ ವೈದ್ಯರು ಉಂಗುರವನ್ನು ಆತನ ಹೊಟ್ಟೆಯಿಂದ ಹೊರತೆಗೆದಿದ್ದರು. ಈ ವೇಳೆ, ನಿರಂಜನ್ ಭಟ್ಟ ಪೊಲೀಸ್ ಅಧಿಕಾರಿಗಳಲ್ಲಿ ತಪ್ಪೊಪ್ಪಿಗೆ ಹೇಳಿಕೆಯನ್ನೂ ಕೊಟ್ಟಿದ್ದ. ಅಷ್ಟೇ ಅಲ್ಲದೆ, ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳು ಒಟ್ಟು ಘಟನೆಯ ಬಗ್ಗೆ ನಿರಂಜನ ಭಟ್ಟನಲ್ಲಿಯೇ ಕೈಬರಹದ ಮೂಲಕ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡಿದ್ದರು. ತನ್ನದೇ ಕೈಬರಹದ ತಪ್ಪೊಪ್ಪಿಗೆ ಪತ್ರವೂ ಕೋರ್ಟಿನಲ್ಲಿ ಬಲವಾದ ಸಾಕ್ಷ್ಯ ಪರಿಗಣಿಸಲ್ಪಟ್ಟಿತ್ತು. ಒಟ್ಟು 162 ಸಾಕ್ಷಿಗಳನ್ನು ಚಾರ್ಜ್ ಶೀಟ್ ನಲ್ಲಿ ತೋರಿಸಲಾಗಿದ್ದರೂ, ಕೋರ್ಟಿನಲ್ಲಿ 72 ಸಾಕ್ಷಿಗಳ ವಿಚಾರಣೆಯಷ್ಟೇ ನಡೆಸಲಾಗಿದೆ. ಇಷ್ಟರಲ್ಲೇ ಆರೋಪಿಗಳ ಪಾತ್ರ ಪ್ರೂವ್ ಆಗಿದ್ದರಿಂದ ನ್ಯಾಯಾಧೀಶರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ರು.

ದುಬೈನಲ್ಲಿ ಆರು ಸೂಪರ್ ಮಾರ್ಕೆಟ್, ಉಡುಪಿಯಲ್ಲಿ ಸ್ಟಾರ್ ಹೊಟೇಲ್, ಇಂದ್ರಾಳಿಯಲ್ಲಿ ಬಹುಮಹಡಿಯ ಅಪಾರ್ಟ್ಮೆಂಟ್ ಸೇರಿ ಸುಮಾರು 300 ಕೋಟಿಯ ಆಸ್ತಿ ಹೊಂದಿದ್ದ ಭಾಸ್ಕರ ಶೆಟ್ಟಿಯ ಹಣದಲ್ಲಿ ಐಷಾರಾಮಿ ಬದುಕು ನಡೆಸುತ್ತಿದ್ದ ರಾಜೇಶ್ವರಿ ಶೆಟ್ಟಿ, ಕೊನೆಗೆ ಗಂಡನನ್ನೇ ಮಗ ಮತ್ತು ಜ್ಯೋತಿಷಿಯ ಜೊತೆ ಸೇರಿ ಕೊಲೆಗೈದಿದ್ದಳು. ಈ ರೀತಿಯ ದುಷ್ಟ ಬುದ್ಧಿ ತೋರಿಸಿದ್ದ ಕೊಲೆಗಾತಿ ತನ್ನ ಹಣದ ದರ್ಪದಲ್ಲಿ ಸಾಕ್ಷಿಗಳೇ ಇಲ್ಲದ ಮೇಲೆ ಕೇಸು ನಿಲ್ಲೋದಿಲ್ಲ. ಕೋರ್ಟ್ ಕೇಸನ್ನು ಹಣದ ಬಲದಲ್ಲಿ ಹೇಗೂ ಗೆಲ್ತೀನಿ ಎಂಬ ದರ್ಪದಲ್ಲಿದ್ದಳು. ಆದರೆ, ಮಾಡಿದ ಕರ್ಮ ನಮ್ಮನ್ನು ಬಿಡುವುದಿಲ್ಲ ಎನ್ನುವಂತೆ, ಕೊಲೆ ಕೃತ್ಯಕ್ಕೆ ಸಾಕ್ಷಿಯಿಲ್ಲದಿದ್ದರೂ ಶವ ಸುಟ್ಟು ಹಾಕಿದ್ರೂ ಉಳಿದುಕೊಂಡಿದ್ದ ಎಲುಬಿನ ಚೂರುಗಳೇ ಭಾಸ್ಕರ ಶೆಟ್ಟಿಯ ಪ್ರೇತಾತ್ಮದ ರೂಪದಲ್ಲಿ ಅಪರಾಧಿಗಳನ್ನು ಕಾಡಿದ್ದು ದುರಂತ ಸತ್ಯ.

Read: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಕಿರಾತಕಿ ಪತ್ನಿ, ಮಗ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ಪ್ರಕಟ

Udupi Bhaskar Shetty Murder Mystery Report How did the Court convict the three accused. Court convicted three accused in the sensational murder of hotelier Bhaskar Shetty and sentenced them to life imprisonment.  The main accused in the case are Shetty’s wife Rajeshwari Shetty, son Navaneeth Shetty and astrologer Niranjan Bhat of Nandalike. Shetty was murdered on July 28, 2016 at his residence and his body was burnt in a homa kunda, in an alleged attempt to destroy evidence. The accused had dumped the remains including ashes into rivulets.