ಮೇಪಲ್ ಶೋರೂಂ ಪ್ರಕರಣ ; ಸುಳಿವೇ ಇಲ್ಲದೆ ಎಗರಿಸಿ ಹೋದ ಮುಂಬೈ ಕಳ್ಳನಿಗೆ ಕೋಳ ತೊಡಿಸಿತ್ತು ಐಫೋನ್ !

14-08-21 06:13 pm       Mangaluru Correspondent   ಕ್ರೈಂ

ಬಲ್ಮಠದಲ್ಲಿರುವ ಮೇಪಲ್ ಮೊಬೈಲ್ ಶೋರೂಂ ಕಳ್ಳತನ ಪ್ರಕರಣದಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ಕೊನೆಗೂ ಯಶ ಸಾಧಿಸಿದ್ದಾರೆ.

ಮಂಗಳೂರು, ಆಗಸ್ಟ್ 14: ನಗರದ ಬಲ್ಮಠದಲ್ಲಿರುವ ಮೇಪಲ್ ಮೊಬೈಲ್ ಶೋರೂಂ ಕಳ್ಳತನ ಪ್ರಕರಣದಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ಕೊನೆಗೂ ಯಶ ಸಾಧಿಸಿದ್ದಾರೆ. ಮುಂಬೈನಿಂದ ಬಂದು ಯಾವುದೇ ಸುಳಿವು ಬಿಟ್ಟುಕೊಳ್ಳದೆ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಗಳನ್ನು ಎಗರಿಸಿ ಹೋಗಿದ್ದ ಕಳ್ಳರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.

ಮೂಲತಃ ರಾಜಸ್ಥಾನ ಮೂಲದ ಮುಂಬೈನ ಮೀರಾ ರೋಡ್ ಈಸ್ಟ್ ನಲ್ಲಿ ವಾಸ ಇರುವ ವಿನೋದ್ ರಾಮ್ ಬಲಿ ಸಿಂಗ್ ಅಲಿಯಾಸ್ ವಿಜಯ್ ಶೆಟ್ಟಿ (52) ಸಿಕ್ಕಿಬಿದ್ದಿರುವ ಆರೋಪಿ. ಕಳೆದ ಜುಲೈ ತಿಂಗಳ ಮೊದಲ ವಾರದಲ್ಲಿ ವೀಕೆಂಡ್ ಲಾಕ್ಡೌನ್ ಇದ್ದಾಗ ಕಳವು ಕೃತ್ಯ ನಡೆದಿತ್ತು. ಜುಲೈ 2ರಿಂದ 5ರ ನಡುವೆ ಕೃತ್ಯ ನಡೆದಿದ್ದು ಸೋಮವಾರ ಬೆಳಗ್ಗೆ ಸಿಬಂದಿ ಶೋರೂಂ ಓಪನ್ ಮಾಡಿದಾಗ ಕಳವಾಗಿದ್ದು ಬೆಳಕಿಗೆ ಬಂದಿತ್ತು. ಲಕ್ಷಕ್ಕೂ ಹೆಚ್ಚು ಬೆಲೆಯುಳ್ಳ 68 ಮೊಬೈಲ್ ಗಳನ್ನು ಕಳವು ಮಾಡಿದ್ದು, ಅದರ ಬೆಲೆ 53 ಲಕ್ಷ ಎಂದು ದೂರು ದಾಖಲಾಗಿತ್ತು. ಅಲ್ಲದೆ, ಕಪಾಟಿನಲ್ಲಿದ್ದ ರೂ.1,15 ಲಕ್ಷ ನಗದು, ಸಿಸಿಟಿವಿಯ ಕಂಟ್ರೋಲ್ ಇದ್ದ ಡಿವಿಆರ್ ಅನ್ನೂ ಎಗರಿಸಿದ್ದರು.

ತನಿಖೆ ಆರಂಭಿಸಿದ ಕದ್ರಿ ಪೊಲೀಸರು ಆಸುಪಾಸಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು. ಆನಂತರ ಮಂಗಳೂರು ಸಿಸಿಬಿ ಪೊಲೀಸರು ಕೂಡ ತನಿಖೆಯಲ್ಲಿ ತೊಡಗಿದ್ದರು. ಕಳವಾಗಿದೆ ಎನ್ನಲಾದ ಮೂರು ದಿನಗಳಲ್ಲಿ ಲಾಕ್ಡೌನ್ ಇದ್ದುದರಿಂದ ಹೆಚ್ಚೇನೂ ವಾಹನಗಳ ಓಡಾಟ ಇರಲಿಲ್ಲ. ಆದರೆ, ಸಿಸಿಟಿವಿಗಳನ್ನು ತಡಕಾಡಿದರೂ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಇದರಿಂದ ಪೊಲೀಸರಿಗೆ ಮೇಪಲ್ ಶೋರೂಂ ಕಳವು ಪ್ರಕರಣ ತಲೆನೋವಿಗೆ ಕಾರಣವಾಗಿತ್ತು.

ಕಳ್ಳನ ಸುಳಿವು ಕೊಟ್ಟಿದ್ದೇ ಕಳವಾಗಿದ್ದ ಐಫೋನ್ !

50ಕ್ಕೂ ಹೆಚ್ಚು ಮೊಬೈಲ್ ಗಳನ್ನು ಕದ್ದುಕೊಂಡು ಮಹಾರಾಷ್ಟ್ರಕ್ಕೆ ತೆರಳಿದ್ದ ಕಳ್ಳರು, ಲಕ್ಷಾಂತರ ಬೆಲೆಯುಳ್ಳ ಐಫೋನ್ ಗಳಾಗಿದ್ದರಿಂದ ಅವನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರು. ರಸೀದಿ ಇಲ್ಲದೆ, ಡುಪ್ಲಿಕೇಟ್ ಆಗಿ ಸೇಲ್ ಮಾಡುವ ಮೊಬೈಲ್ ಅಂಗಡಿಗಳಲ್ಲಿ ಸೇಲ್ ಮಾಡಲಾಗಿತ್ತು. ಕಡಿಮೆ ಹಣಕ್ಕೆ ಸಿಕ್ಕಿದ್ದ ಒರಿಜಿನಲ್ ಐಫೋನ್ ಮೊಬೈಲನ್ನು ಗ್ರಾಹಕರು ಬಳಕೆ ಮಾಡಲು ಆರಂಭಿಸಿದ್ದರು. ತಿಂಗಳ ಕಾಲ ಪೊಲೀಸರು ಸಿಸಿಟಿವಿ, ಇನ್ನೊಂದು ಎಂದು ಆರೋಪಿಗಳಿಗಾಗಿ ತಡಕಾಟ ಮಾಡುತ್ತಿದ್ದಾಗಲೇ ಅತ್ತ ಕಡೆಯಿಂದ ಸುಳಿವು ಲಭಿಸಿತ್ತು.

ಮೇಪಲ್ ಶೋರೂಮಲ್ಲಿ ಕಳವಾಗಿದ್ದ ಮೊಬೈಲ್ ಮುಂಬೈನಲ್ಲಿ ವರ್ಕ್ ಆಗ್ತಿರೋದು ಕಂಡುಬಂದಿದ್ದು, ಮಂಗಳೂರಿನ ಪೊಲೀಸರು ಅಲರ್ಟ್ ಆಗಿದ್ದರು. ಕದ್ರಿ ಮತ್ತು ಸಿಸಿಬಿ ಪೊಲೀಸರು ಜಂಟಿಯಾಗಿ ಆಪರೇಶನ್ ಶುರು ಮಾಡಿದ್ದರಿಂದ ಮೇಲಧಿಕಾರಿಗಳ ವಿಶೇಷ ಅನುಮತಿ ಪಡೆದು ಪೊಲೀಸರ ತಂಡ ಮಹಾರಾಷ್ಟ್ರಕ್ಕೆ ತೆರಳಿತ್ತು. ಮುಂಬೈ ಮತ್ತು ರಾಜಸ್ಥಾನಕ್ಕೆ ತೆರಳಿದ ಪೊಲೀಸ್ ತಂಡ ಕೆಲವೇ ದಿನಗಳಲ್ಲಿ ಕಳ್ಳರ ಜಾಡು ಹಿಡಿದು ಕಳ್ಳನನ್ನು ಪತ್ತೆ ಮಾಡಿದೆ.

ಯಾವುದೇ ಸುಳಿವು ಕೊಡದೆ, ಮೊಬೈಲ್ ಕಳವು ಮಾಡಿಕೊಂಡು ಮುಂಬೈಗೆ ಪರಾರಿಯಾಗಿದ್ದ ಕಳ್ಳನ ಕರಾಮತ್ತನ್ನು ಮೊಬೈಲ್ ಟೆಕ್ನಾಲಜಿಯೇ ಪತ್ತೆ ಮಾಡಿತ್ತು. ಐಫೋನ್ ನಂಬರ್ ಆಧಾರದಲ್ಲಿಯೇ ಪೊಲೀಸರು ಅದು ಎಲ್ಲಿ ವರ್ಕ್ ಆಗ್ತಿದೆ ಎನ್ನುವುದನ್ನು ಪತ್ತೆ ಮಾಡಿದ್ದರು. ಏನೂ ಆಗಿಯೇ ಇಲ್ಲ ಎಂದು ಆರಾಮದಿಂದ ತಿರುಗಾಡಿಕೊಂಡಿದ್ದ ಕಳ್ಳ ವಿನೋದ್ ಸಿಂಗ್ ಮುಂಬೈನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದ.

ವಿನೋದ್ ಸಿಂಗ್ ಜೊತೆಗೆ ಇನ್ನೊಬ್ಬ ಯುವಕ ಸಾಥ್ ಕೊಟ್ಟಿದ್ದ. ಇಬ್ಬರು ಕೂಡ ಮುಂಬೈನಲ್ಲಿ ನಟೋರಿಯಸ್ ಕಳ್ಳರಾಗಿದ್ದರು. ಜುವೆಲ್ಲರಿ ಕಳವು, ದರೋಡೆ ಯತ್ನ ಸೇರಿ ಒಂಬತ್ತು ಪ್ರಕರಣಗಳಲ್ಲಿ ವಿನೋದ್ ಸಿಂಗ್ ಭಾಗಿಯಾಗಿದ್ದ. ಮುಂಬೈನಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದ ಕಳ್ಳರು ನಗರದಲ್ಲಿ ಹಲವಾರು ಕಡೆ ತೆರಳಿ, ಅಲ್ಲಿನ ಸ್ಥಿತಿಗತಿಯ ಅಧ್ಯಯನ ಮಾಡಿದ್ದಾರೆ. ಎಲ್ಲಿ ಸಿಸಿಟಿವಿ ಇದೆ, ಏನೇನು ಲೂಪ್ ಹೋಲ್ ಇದೆ ಎನ್ನೋದನ್ನು ಪತ್ತೆ ಮಾಡಿದ್ದರು. ಮೇಪಲ್ ಶೋರೂಂ ಮಳಿಗೆಗೂ ಬಂದಿದ್ದ ಕಳ್ಳರು ಒಳಗೆ ಹೊಕ್ಕಲು ಎಲ್ಲಿ ಖಾಲಿ ಜಾಗ ಇದೆ ಎಂದು ಶೋಧನೆ ಮಾಡಿದ್ದರು. ಆನಂತರ ಲಾಕ್ಡೌನ್ ಇರುವುದನ್ನು ತಿಳ್ಕೊಂಡು ಜುಲೈ 4ರ ಹಾಡಹಗಲೇ ಒಳನುಗ್ಗಿದ್ದು, ಮೊಬೈಲ್ ಜೊತೆಗೆ ಒಳಗಿದ್ದ ಡಿವಿಆರ್ ಅನ್ನೂ ದೋಚಿಕೊಂಡು ತೆರಳಿದ್ದರು. ಈಗ ಒಬ್ಬ ಸಿಕ್ಕಿದ್ದಾನೆ. ಇನ್ನೊಬ್ಬನ ಪತ್ತೆ ಸದ್ಯದಲ್ಲೇ ಆಗಲಿದ್ಯಂತೆ. 


Balmatta Maple Iphone showroom robbery accused arrested in Mumbai phones recovered. The arrested accused hails from Maharashtra. He was nabbed in Mumbai by Mangaluru police. As many as 40 mobile phones worth Rs 41 lac were also seized from his possession. It is gathered that two people were involved in the theft and one is yet to be caught. The accused who is now in custody has over 9 cases registered against him in Mumbai.