ಭಾರತದಲ್ಲಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ NavIC ಇರಲೇಬೇಕೆಂದು ಆದೇಶ!..ಏನಿದು ಗೊತ್ತಾ?

29-09-22 08:03 pm       Source: Vijayakarnataka   ಡಿಜಿಟಲ್ ಟೆಕ್

NavIC ಎಂಬುದು ಭಾರತೀಯ ಸಂಶೋಧನಾ ಬಾಹ್ಯಾಕಾಶ ಸಂಸ್ಥೆ (ISRO) ಮಿಲಿಟರಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಿದ ಸ್ವದೇಶಿ ನ್ಯಾವಿಗೇಷನ್ ಟೆಕ್ನಾಲಜಿಯಾಗಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಎಲ್ಲಾ ಮೊಬೈಲ್ ಕಂಪೆನಿಗಳು ಜನವರಿ 1, 2023 ರಿಂದ ತಮ್ಮ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ NavIC ( ಸ್ವದೇಶಿ ನ್ಯಾವಿಗೇಷನ್ ಟೆಕ್ನಾಲಜಿ) ತಂತ್ರಜ್ಞಾನವನ್ನು ಸಕ್ರಿಯಗೊಳಿಸಬೇಕು ಎಂಬ ಆದೇಶವನ್ನು ಭಾರತ ಸರ್ಕಾರವು ಅಂಗೀಕರಿಸಿದೆ. ಪ್ರಸ್ತುತ ದೇಶದಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು GPS ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ಅಥವಾ ಬದಲಾಗಿ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಭಿವೃದ್ಧಿಪಡಿಸಿರುವ ಸ್ವದೇಶಿ ನ್ಯಾವಿಗೇಷನ್ ಟೆಕ್ನಾಲಜಿ NavIC ವೈಶಿಷ್ಟ್ಯವನ್ನು ದೇಶದಲ್ಲಿ ಮಾರಾಟ ಮಾಡುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಬೇಕು ಎಂದು ಸರ್ಕಾರವು ಮೊಬೈಲ್ ಕಂಪೆನಿಗಳಿಗೆ ಸೂಚಿಸಿದೆ.

NavIC ಎಂಬುದು ಭಾರತೀಯ ಸಂಶೋಧನಾ ಬಾಹ್ಯಾಕಾಶ ಸಂಸ್ಥೆ (ISRO) ಮಿಲಿಟರಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಿದ ಸ್ವದೇಶಿ ನ್ಯಾವಿಗೇಷನ್ ಟೆಕ್ನಾಲಜಿಯಾಗಿದೆ. ಪ್ರಸ್ತುತ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಯಲ್ಲಿರುವ GPS ಅಥವಾ GLONASS ಗಿಂತ ಉತ್ತಮವಾದ ತಂತ್ರಜ್ಞಾನವನ್ನು ಹೊಂದಿರುವ ಈ ವ್ಯವಸ್ಥೆಯು ಗೂಗಲ್‌ ಮ್ಯಾಪ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ವಾಸ್ತವವಾಗಿ, ಸ್ವದೇಶಿ ನ್ಯಾವಿಗೇಷನ್ ಟೆಕ್ನಾಲಜಿ NavIC ತನ್ನ ಡ್ಯುಯಲ್ ಫ್ರೀಕ್ವೆನ್ಸಿ ಬ್ಯಾಂಡ್‌ಗಳ ಮೂಲಕ GPS ಗಿಂತ ಉತ್ತಮ ನಿಖರತೆಯನ್ನು ನೀಡಲಿದೆ ಎನ್ನಲಾಗಿದೆ. ಹಾಗಾದರೆ, ಏನಿದು NavIC ಸ್ವದೇಶಿ ನ್ಯಾವಿಗೇಷನ್ ತಂತ್ರಜ್ಞಾನ?, ಸರ್ಕಾರ ಏಕೆ ಈ ಬದಲಾವಣೆಯನ್ನು ತರಲು ಕೈ ಹಾಕಿದೆ ಎಂಬುದನ್ನು ನೋಡೋಣ ಬನ್ನಿ.

What is NavIC and why does the government want it on all smartphones? -  Technology News

NavIC ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?
NavIC ತಂತ್ರಜ್ಞಾನವು ಇಸ್ರೋ ವಿನ್ಯಾಸಗೊಳಿಸಿದ ಭಾರತದ ಉಪಗ್ರಹ ವ್ಯವಸ್ಥೆಯಾಗಿದೆ. ಭಾರತೀಯ ಭೂಪ್ರದೇಶವನ್ನು ಆವರಿಸುವ ಈ ವ್ಯವಸ್ಥೆಗಾಗಿ ಭಾರತ ಸರ್ಕಾರವು ಆಕಾಶದಲ್ಲಿ 8 ಉಪಗ್ರಹಗಳನ್ನು ನಿಯೋಜಿಸಿದೆ. ಇಡೀ ಭಾರತೀಯ ಭೂಪ್ರದೇಶವನ್ನು ಆವರಿಸಿರುವ ಈ ಎಲ್ಲಾ ಉಪಗ್ರಹಗಳು ಸ್ಥಾನದ ನಿಖರತೆಯು GPS ಅಥವಾ GLONASS ಗಿಂತ ಉತ್ತಮವಾಗಿ ಪ್ರದೇಶಗಳನ್ನು ಗುರುತಿಸುತ್ತದೆ. ಈ ತಂತ್ರಜ್ಞಾನದ ಸಹಾಯದಿಂದ 10 ಮೀಟರ್‌ಗಳಿಗಿಂತ ಕಡಿಮೆ ಪ್ರದೇಶವನ್ನು ನಿಖರವಾಗಿ ಗುರುತಿಸಬಹುದು. ಅಂದರೆ, ಭಾರತೀಯರು ಪ್ರಸ್ತುತ ಬಳಸುತ್ತಿರುವ GPS ವ್ಯವಸ್ಥೆಗಿಂತ NavIC ತಂತ್ರಜ್ಞಾನದಲ್ಲಿ ಸುಧಾರಿತ ಮ್ಯಾಪ್ ವ್ಯವಸ್ಥೆಯನ್ನು ಪಡೆಯುತ್ತಾರೆ.

GPS ಮತ್ತು NavIC ಏನು ವ್ಯತ್ಯಾಸ
GPS ಎಂಬುದು ಅಂತರಾಷ್ಟ್ರೀಯ ನ್ಯಾವಿಗೇಷನ್ ಸಿಸ್ಟಮ್ ಆಗಿದ್ದು, ಇದನ್ನು ಅಮೆರಿಕಾ ಅಭಿವೃದ್ಧಿಪಡಿಸಿದ್ದರೆ, NavIC ನಮ್ಮ ದೇಶಿಯ ನ್ಯಾವಿಗೇಷನ್ ಸಿಸ್ಟಮ್ ಆಗಿದೆ. 31 ಉಪಗ್ರಹಗಳನ್ನು ಹೊಂದಿರುವ GPS ಜಗತ್ತಿನಾದ್ಯಂತ ಬಳಕೆದಾರರಿಗೆ ಸೇವೆಯನ್ನು ಪೂರೈಸುತ್ತದೆ ಮತ್ತು ಇದರ ಉಪಗ್ರಹಗಳು ದಿನಕ್ಕೆ ಎರಡು ಬಾರಿ ಭೂಮಿಯನ್ನು ಸುತ್ತುತ್ತವೆ. ಇನ್ನು 7 ಉಪಗ್ರಹಗಳನ್ನು ಹೊಂದಿರುವ NavIC ಪ್ರಸ್ತುತ ಭಾರತ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಬಳಕೆಗಾಗಿ ರೂಪುಗೊಂಡಿದೆ. ಆದರೆ, NavIC ತನ್ನ ಡ್ಯುಯಲ್ ಫ್ರೀಕ್ವೆನ್ಸಿ ಬ್ಯಾಂಡ್‌ಗಳ ಸಹಾಯದಿಂದ, GPS ಗಿಂತ ಉತ್ತಮ ನಿಖರವಾಗಿ ಸ್ಥಳಗಳನ್ನು ಗುರಿತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಸ್ರೋ ತಿಳಿಸಿದೆ.

सभी स्मार्टफोन में लागू होगा NavIC नेविगेशन सिस्टम. Government of India:  NavIC navigation system to be mandatory in all smartphones by 2023 - Hindi  Gizbot

NavIC ಕುರಿತಂತೆ ಸರ್ಕಾರದ ಹೊಸ ಆದೇಶವೇನು?
ಜನವರಿ 1, 2023 ರಿಂದ ದೇಶದಲ್ಲಿ ಬಿಡುಗಡೆ ಮಾಡಲಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ NavIC ತಂತ್ರಜ್ಞಾನವನ್ನು ಅಳವಡಿಸಬೇಕೆಂದು ಸರ್ಕಾರವು ಆದೇಶಿಸಿದೆ. ವಿದೇಶಿ ನ್ಯಾವಿಗೇಷನ್ ಸಿಸ್ಟಂ ಅನ್ನು ಆಯಾ ರಾಷ್ಟ್ರಗಳ ಸೆಕ್ಯುರಿಟಿ ಏಜೆನ್ಸಿಗಳು ನಿರ್ವಹಿಸುತ್ತವೆ. ಇದರಿಂದ, ನಾಗರಿಕ ಸೇವೆಗಳಲ್ಲಿ ವ್ಯತ್ಯಯ ಕಂಡುಬರಬಹುದು. ಆದರಿಂದ ಸ್ವದೇಶಿ ತಂತ್ರಜ್ಞಾನವಾದ ನಾವಿಕ್ ಬಳಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಭಾರತ ಸರ್ಕಾರ ಬಂದಿದೆ. ಈಗಾಗಲೇ ಭಾರತದಲ್ಲಿ ಮಾರಾಟವಾಗುತ್ತಿರುವ ಸುಮಾರು 300 ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು NavIC ತಂತ್ರಜ್ಞಾನವನ್ನು ಬೆಂಬಲಿಸುತ್ತಿವೆ. 2020 ರಲ್ಲಿ NavIC ತಂತ್ರಜ್ಞಾನವನ್ನು ಒಳಗೊಂಡ ಮೊದಲ ಸ್ಮಾರ್ಟ್‌ಫೋನ್ ಆಗಿ Realme X50 Pro ಫೋನ್ ಬಿಡುಗಡೆಗೊಂಡಿತ್ತು.

ದೇಶದಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಳ?
ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ NavIC ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹೆಚ್ಚುವರಿ ಘಟಕಗಳನ್ನು ಅಳವಡಿಸುವ ಅಗತ್ಯವಿದೆ, ಇದರಿಂದ ಸ್ಮಾರ್ಟ್‌ಫೋನ್‌ಗಳ ಬೆಲೆ ದುಬಾರಿಯಾಗುತ್ತವೆ ಎಂದು ಹಲವು ಮೊಬೈಲ್ ಕಂಪೆನಿಗಳು ವಾದಿಸಿವೆ. ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾದುದರಿಂದ ಬಜೆಟ್ ವಿಭಾಗದಲ್ಲಿ 20 ಸಾವಿರ ರೂ ವಿಭಾಗದಲ್ಲಿ ಬರುವ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಆದರೆ, ಭಾರತ ಸರ್ಕಾರವು ಈ ಯಾವುದೇ ವಾದಗಳಿಗೆ ಸೊಪ್ಪು ಹಾಕಿಲ್ಲ. ಏಕೆಂದರೆ, ಸರ್ಕಾರವು ಕಳೆದ ಮೂರು ವರ್ಷಗಳ ಹಿಂದೆಯೇ NavIC ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮೊಬೈಲ್ ಕಂಪೆನಿಗಳಿಗೆ ಸೂಚಿಸಿತ್ತು. ಇದೀಗ ಸಕ್ರಿಯಗೊಳಿಸಲು ಸಮಯದ ಗಡುವು ನೀಡಿದೆ ಅಷ್ಟೆ.

India To Mandate Navic Support For Smartphones, What Is Navic.