ದೇಶದಲ್ಲಿ ಬಜೆಟ್ ಬೆಲೆಯ ಹೊಸ Itel P40 ಸ್ಮಾರ್ಟ್‌ಫೋನ್ ಲಾಂಚ್!

18-03-23 08:38 pm       Source: Vijayakarnataka   ಡಿಜಿಟಲ್ ಟೆಕ್

Itel P40 ಸ್ಮಾರ್ಟ್‌ಫೋನ್ ಎಲ್‌ಇಡಿ ಪ್ಲ್ಯಾಶ್‌ನೊಂದಿಗೆ ಡ್ಯುಯಲ್‌ ರಿಯರ್ ‌ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 13 ಮೆಗಾಪಿಕ್ಸೆಲ್ ವೀಡಿಯೊ ಗ್ರಾಫಿಕ್ಸ್ ಅರೇ (VGA).

ಬೇಸಿಕ್ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ತನ್ನದೇ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿರುವ ಹೆಸರಾಂತ ಮೊಬೈಲ್ ಬ್ರ್ಯಾಂಡ್ ಐಟೆಲ್ (Itel) ದೇಶದಲ್ಲಿ ತನ್ನ ಹೊಸದೊಂದು ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸುವ ಮೂಲಕ ಗಮನಸೆಳೆದಿದೆ. Itel P40 ಎಂಬ ಹೆಸರಿನಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಇದು ಬರೋಬ್ಬರಿ 57 ದಿನಗಳ ಸ್ಟ್ಯಾಂಡ್‌ಬೈ ಟೈಮ್‌ ಹೊಂದಿರುವ 6,000mAh ಸಾಮರ್ಥ್ಯದ ಬ್ಯಾಟರಿ, 6.6 ಇಂಚಿನ ಹೆಚ್‌ಡಿ + ಐಪಿಎಸ್ ವಾಟರ್‌ಡ್ರಾಪ್ ಡಿಸ್‌ಪ್ಲೇ ಮತ್ತು ರಿಯರ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ದೇಶದ ಮಾರುಕಟ್ಟೆಗೆ ಹೊಸದಾಗಿ ಪರಿಚಯಗೊಂಡಿರುವ ಈ Itel P40 ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಹೊಸ Itel P40 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು.
ದೇಶದಲ್ಲಿ ಬಿಡುಗಡೆಯಾಗಿರುವ ಹೊಸ Itel P40 ಸ್ಮಾರ್ಟ್‌ಫೋನ್ ನೋಡಲು ಪೊಕೊ ಪೋನ್‌ಗಳ ಶೈಲಿಯಲ್ಲಿದೆ. ಹಿಂಭಾಗದಲ್ಲಿ ಬಾಕ್ಸ್ ಆಕಾರದ ಡ್ಯುಯಲ್‌ ‌ಕ್ಯಾಮೆರಾ ಸೆಟಪ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಜೊತೆಗೆ ಅತ್ಯುತ್ತಮ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಗ್ರಾಹಕರನ್ನು ಸೆಳೆಯುವಂತೆ ಕಾಣುತ್ತಿದೆ. ಈ ಸ್ಮಾರ್ಟ್‌ಫೋನಿನಲ್ಲಿ 6.6 ಇಂಚಿನ ಹೆಚ್‌ಡಿ + ಐಪಿಎಸ್ ವಾಟರ್‌ಡ್ರಾಪ್ ಡಿಸ್‌ಪ್ಲೇ ಅಳವಡಿಸಲಾಗಿದ್ದು, ಇದು ಕೇವಲ 1612 X 720 ಪಿಕ್ಸೆಲ್‌ ರೆಸಲ್ಯೂಶನ್‌ ಮತ್ತು 120 Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, 6GB RAM ಮತ್ತು 64GB ಸ್ಟೋರೇಜ್‌ ಜೊತೆಗೆ ಸಂಯೋಜಿಸಲಾದ ಆಕ್ಟೋ ಕೋರ್ SC9863A ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 (ಗೋ ಎಡಿಷನ್) ನಲ್ಲಿ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ ವಿಭಾಗದಲ್ಲಿ, Itel P40 ಸ್ಮಾರ್ಟ್‌ಫೋನ್ ಎಲ್‌ಇಡಿ ಪ್ಲ್ಯಾಶ್‌ನೊಂದಿಗೆ ಡ್ಯುಯಲ್‌ ರಿಯರ್ ‌ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 13 ಮೆಗಾಪಿಕ್ಸೆಲ್ ವೀಡಿಯೊ ಗ್ರಾಫಿಕ್ಸ್ ಅರೇ (VGA) ಕ್ಯಾಮೆರಾದೊಂದಿಗೆ ಶಕ್ತವಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗೆ 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನ ಪ್ರಮುಖ ವಿಶೇಷತೆಯಾಗಿ, Itel P40 ಸ್ಮಾರ್ಟ್‌ಫೋನ್ 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರುವ 6000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದರ ಸ್ಟ್ಯಾಂಡ್‌ಬೈ ಟೈಮ್‌ 57 ದಿನಗಳು ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ, ರಿಯರ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಹಾಗೂ ಫೇಸ್‌ ಅನ್‌ಲಾಕ್‌, 4G, ಮೆಮೊರಿ ಫ್ಯೂಷನ್ ತಂತ್ರಜ್ಞಾನ, ಹೆಸರಿಸದ ಬ್ಲೂಟೂತ್, ವೈ-ಫೈ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳಿವೆ.

Itel P40 ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ.
ಭಾರತದಲ್ಲಿ ಈ ಹೊಸ Itel P40 ಸ್ಮಾರ್ಟ್‌ಫೋನನ್ನು 7,999 ರೂ. ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ಈಗಾಗಲೇ ಐಟೆಲ್ ಕಂಪೆನಿಯ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಲು ಲಭ್ಯವಿರುವ ಈ ಸ್ಮಾರ್ಟ್‌ಫೋನನ್ನು ಗ್ರಾಹಕರು ಫೋರ್ಸ್ ಬ್ಲಾಕ್, ಡ್ರೀಮಿ ಬ್ಲೂ ಮತ್ತು ಐಷಾರಾಮಿ ಗೋಲ್ಡ್ ಮೂರು ವಿಶೇಷ ಬಣ್ಣಗಳಲ್ಲಿ ಖರೀದಿಸಬಹುದು.

itel p40 with 6000 mah battery launched in india price and features.