ನಿಮ್ಮ ಮೊಬೈಲೇ ನೀಡಲಿದೆ ಭೂಕಂಪನದ ಎಚ್ಚರಿಕೆ!

12-08-20 05:36 pm       Headline Karnataka News Network   ಡಿಜಿಟಲ್ ಟೆಕ್

ಭೂಕಂಪನದ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಮೊಬೈಲ್ ಫೀಚರ್ ಒಂದನ್ನು ಬಳಕೆಗೆ ತರುವ ಕುರಿತು ಗೂಗಲ್ ಮಾಹಿತಿ ನೀಡಿದೆ. ಈಗಾಗಲೇ ಆ್ಯಂಡ್ರಾಯ್ಡ್ ಆಧಾರಿತ ಭೂಕಂಪನ ಪತ್ತೆ ಹಚ್ಚುವ ಫೀಚರ್ ಅನ್ನು ಆಯ್ದ ಸ್ಮಾರ್ಟ್ ಫೋನ್ ಗಳಲ್ಲಿ ಜಾರಿಗೊಳಿಸಲಾಗಿದೆ.

ನವದೆಹಲಿ, ಆಗಸ್ಟ್ 12: ಭೂಕಂಪನದ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಮೊಬೈಲ್ ಫೀಚರ್ ಒಂದನ್ನು ಬಳಕೆಗೆ ತರುವ ಕುರಿತು ಗೂಗಲ್ ಮಾಹಿತಿ ನೀಡಿದೆ. ಈಗಾಗಲೇ ಆ್ಯಂಡ್ರಾಯ್ಡ್ ಆಧಾರಿತ ಭೂಕಂಪನ ಪತ್ತೆ ಹಚ್ಚುವ ಫೀಚರ್ ಅನ್ನು ಆಯ್ದ ಸ್ಮಾರ್ಟ್ ಫೋನ್ ಗಳಲ್ಲಿ ಜಾರಿಗೊಳಿಸಲಾಗಿದೆ.

ಆ್ಯಂಡ್ರಾಯ್ಡ್ ಪೋನ್ ಗಳು ಭೂಕಂಪನ ಅಲರ್ಟ್ ಸಿಸ್ಟಮ್ ಅನ್ನು ಒಳಗೊಂಡಿರಲಿದ್ದು, ಈ ಸೌಲಭ್ಯ  ಜಗತ್ತಿನಾದ್ಯಂತ  ಜನರಿಗೆ ದೊರೆಯುತ್ತದೆ. ಇದರ ಪ್ರಕಾರ ಪ್ರತಿ ಆ್ಯಂಡ್ರಾಯ್ಡ್ ಫೋನ್ ಗಳು ಮಿನಿ ಸಿಸ್ಮೋಮೀಟರ್ ಆಗಿ ಬದಲಾಗುತ್ತದೆ. ಆ ಮೂಲಕ ಜಗತ್ತಿನ ಅತೀ ದೊಡ್ಡ ಭೂಕಂಪನ  ಕುರಿತ ಎಚ್ಚರಿಕೆ ನೀಡುವ ನೆಟ್ ವರ್ಕ್ ಇದಾಗಿರಲಿದೆ ಎಂದು ಗೂಗಲ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ, ಈ ಫೀಚರ್ ಅನ್ನು ಮೊದಲು ಕ್ಯಾಲಿಪೋರ್ನಿಯಾದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು 700 ಸಿಸ್ಮೋ ಮೀಟರ್ ಗಳನ್ನು ವಿವಿಧೆಡೆ ಅಳವಡಿಸಲಾಗಿತ್ತು. ಈ ಸಮಯದಲ್ಲಿ ಭೂಕಂಪವಾಗುವ 5 ಸೆಕೆಂಡುಗಳಿಗೂ ಮೊದಲು ಭೂಮಿ ಕಂಪಿಸುತ್ತಿರುವ ತರಂಗಾಂತರಗಳನ್ನು ಸಿಸ್ಮೋಮೀಟರ್ ಗಳು ರವಾನಿಸುತ್ತಿದ್ದವು. ಈ 5 ಸೆಕೆಂಡುಗಳು ಜನರ ಪ್ರಾಣ ಉಳಿಸಲು ನೆರವಾಗುವ ಸಾಧ್ಯತೆಯೂ ಇದೆ ಎಂದು ಗೂಗಲ್ ಅಭಿಪ್ರಾಯಪಟ್ಟಿದೆ.

ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್ ಪೋನ್ ಗಳೂ ಅತೀ ಸಣ್ಣದಾದ  ಆ್ಯಕ್ಸಲರೋ ಮೀಟರ್ ಅನ್ನು ಒಳಗೊಂಡಿದ್ದು ಭೂಮಿ ಕಂಪಿಸುವಾಗ ಸಿಗ್ನಲ್ ಗಳನ್ನು ಪಡೆಯಲು ನೆರವಾಗುತ್ತದೆ.  ಮಾತ್ರವಲ್ಲದೆ ಯಾವ ಸ್ಥಳದಲ್ಲಿ ಭೂಮಿ ಕಂಪಿಸುತ್ತಿದೆ ಎಂಬ ಮಾಹಿತಿಯನ್ನು ತಿಳಿಯಲು ಸಹಾಯಕವಾಗುತ್ತದೆ. ಈ ಫೀಚರ್ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲಾ ರಾಷ್ಟ್ರಗಳ ಆ್ಯಂಡ್ರಾಯ್ಡ್ ಪೋನ್ ಗಳಿಗೆ ಲಭ್ಯವಾಗುತ್ತದೆ ಎಂದು ಗೂಗಲ್ ತಿಳಿಸಿದೆ.