ಸ್ವದೇಶಿ ಮ್ಯಾಪ್‌ ಸೇವೆ ಒದಗಿಸಲು ಜಂಟಿಯಾದ ಇಸ್ರೊ ಮತ್ತು ಮ್ಯಾಪ್‌ ಮೈ ಇಂಡಿಯಾ!

13-02-21 02:59 pm       Source: GIZBOT Manthesh   ಡಿಜಿಟಲ್ ಟೆಕ್

ಗೂಗಲ್ ಮ್ಯಾಪ್‌ ಅಪ್ಲಿಕೇಶನ್‌ಗೆ ಬದಲಾಗಿ ಸ್ವದೇಶಿ ಮ್ಯಾಪ್‌ ಸೇವೆ ಅಭಿವೃದ್ಧಿ ಪಡಿಸಲು ISRO ಮತ್ತು ಮ್ಯಾಪ್‌ ಮೈ ಇಂಡಿಯಾ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.

ಗೂಗಲ್ ಮ್ಯಾಪ್‌ ಅಪ್ಲಿಕೇಶನ್‌ಗೆ ಬದಲಾಗಿ ಸ್ವದೇಶಿ ಮ್ಯಾಪ್‌ ಸೇವೆ ಅಭಿವೃದ್ಧಿ ಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮತ್ತು ಮ್ಯಾಪ್‌ ಮೈ ಇಂಡಿಯಾ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.

ಸ್ವದೇಶಿ ಮ್ಯಾಪ್ ಸೇವೆ ಅಭಿವೃದ್ಧಿಯಿಂದ ಮ್ಯಾಪ್‌, ಜಿಯೊ ಲೊಕೇಶನ್‌, ನ್ಯಾವಿಗೇಷನ್‌ ಸೇರಿದಂತೆ ಮ್ಯಾಪ್‌ ಸೇವೆಗಳಿಗೆ ವಿದೇಶಿ ಕಂಪನಿಗಳನ್ನು ಅವಲಂಬಿಸುವುದು ತಪ್ಪುತ್ತದೆ. ಇಸ್ರೊದ ಭೂ ಪರಿವೀಕ್ಷಣೆ ಡೇಟಾ, ಸ್ಯಾಟಲೈಟ್‌ ಫೋಟೊಗಳನ್ನು ಬಳಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮ್ಯಾಪ್‌ ಸೇವೆ ನೀಡಲು ಸಾಧ್ಯವಾಗುತ್ತದೆ. ಆತ್ಮನಿರ್ಭರ ಭಾರತ ಹಾದಿಯಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದು ಮ್ಯಾಪ್‌ ಮೈ ಇಂಡಿಯಾ ಸಿಇಒ ರೋಹನ್‌ ವರ್ಮಾ ಹೇಳಿದ್ದಾರೆ.



ಮ್ಯಾಪ್‌ ಮೈ ಇಂಡಿಯಾ ಮಾಲೀಕತ್ವ ಹೊಂದಿರುವ ಸಿ.ಇ. ಇನ್ಫೋ ಸಿಸ್ಟಮ್ಸ್‌ ಪ್ರೈ.ಲಿ. ಮತ್ತು ಬಾಹ್ಯಾಕಾಶ ಇಲಾಖೆ ಫೆ.11ರಂದು ಒಪ್ಪಂದ ಮಾಡಿಕೊಂಡಿವೆ ಎಂದು ಇಸ್ರೊ ತಿಳಿಸಿದೆ. ಭೂ ಪರಿವೀಕ್ಷಣೆ ಡೇಟಾಗಾಗಿ ಇಸ್ರೊದ 'NavIC', 'ವೆಬ್‌ ಸೇವೆಗಳು', 'API', 'ಮ್ಯಾಪ್‌ ಮೈ ಇಂಡಿಯಾ', 'ಭುವನ್‌', 'VEDAS' ಮತ್ತು 'MOSDAC 'ಗಳನ್ನು ಬಳಸಿಕೊಂಡು ಜಂಟಿಯಾಗಿ ಸ್ಥಳಗಳ ವಿವರ ಒದಗಿಸುವ ಉತ್ತಮ ಮ್ಯಾಪ್‌ ಸೇವೆ ಒದಗಿಸಲು ಮ್ಯಾಪ್‌ ಮೈ ಇಂಡಿಯಾ ಜೊತೆಗಿನಒಪ್ಪಂದ ನೆರವಾಗುತ್ತದೆ ಎಂದು ಇಸ್ರೊ ತಿಳಿಸಿದೆ.

ಕೇಂದ್ರ ಸರಕಾರದ ಅಧಿಕೃತ ಮ್ಯಾಪ್‌ ಬಳಸುವ ಮ್ಯಾಪ್‌ ಮೈ ಇಂಡಿಯಾ, ಭಾರತದ ನೈಜ ಸಾರ್ವಭೌಮತೆಯನ್ನು ಪ್ರದರ್ಶಿಸುವ ಭಾರತೀಯ ಕಂಪನಿಯಾಗಿದೆ. ಮ್ಯಾಫ್ಸ್‌, ಆ್ಯಫ್ಸ್‌ ಮತ್ತು ಸೇವೆಗಳು ಇನ್ನು ಮುಂದೆ ಇಸ್ರೊದ ಬೃಹತ್‌ ಛಾಯಾಚಿತ್ರ ಮತ್ತು ಭೂಪರೀಕ್ಷಣೆ ಸ್ಯಾಟಲೈಟ್‌ ಡೇಟಾ ಜತೆ ಏಕೀಕರಣಗೊಳ್ಳಲಿವೆ ಎಂದು ಮ್ಯಾಪ್‌ ಮೈ ಇಂಡಿಯಾ ತಿಳಿಸಿದೆ.



ವಿದೇಶಿ ಸಂಸ್ಥೆಯಗಳು ಉಚಿತ ಸೇವೆ ಹೆಸರಿನಲ್ಲಿ ಬಳಕೆದಾರರ ಖಾಸಗಿ ಮಾಹಿತಿ, ಓಡಾಟ ಮತ್ತು ಲೊಕೇಶನ್‌ ಅನ್ನು ಮಾರಿಕೊಳ್ಳುತ್ತವೆ. ಖಾಸಗಿತನಕ್ಕೆ ಧಕ್ಕೆ ತರುವ ದೃಷ್ಠಿಯಿಂದ ಇದು ಒಳ್ಳೆಯ ಕ್ರಮವಲ್ಲ. ಆದರೆ, ನಮ್ಮದು ಖಾಸಗಿತನಕ್ಕೆ ಧಕ್ಕೆಯಾಗದಂತೆ ಜಾಹೀರಾತು ಬಿಸಿನೆಸ್‌ ಮಾಡೆಲ್‌ ಒಳಗೊಂಡಿರದ ಸುರಕ್ಷಿತ ಮ್ಯಾಪ್‌ ಆಗಿದೆ ಎಂದು ಮ್ಯಾಪ್‌ ಮೈ ಇಂಡಿಯಾ ಸಿಇಒ ರೋಹನ್‌ ವರ್ಮಾ ಹೇಳಿದ್ದಾರೆ.

This News Article is a Copy of GIZBOT