ಸದನದಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರತಿಧ್ವನಿ ; ಡಿಕೆಶಿ ಹೇಳಿಕೆ ಬಗ್ಗೆ ಚರ್ಚೆಗೆ ಒತ್ತಾಯಿಸಿದ ಸಿಟಿ ರವಿ, ಕಾಂಗ್ರೆಸ್- ಬಿಜೆಪಿ ನಾಯಕರ ವಾಕ್ಸಮರ

23-12-22 02:41 pm       HK News Desk   ಕರ್ನಾಟಕ

ಮಂಗಳೂರಿನಲ್ಲಿ ನಡೆದಿರುವ ಕುಕ್ಕರ್‌ ಬಾಂಬ್‌ ಸ್ಫೋಟ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆ ಕುರಿತು ನೀಡಿದ್ದ ಹೇಳಿಕೆ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ಬೆಳಗಾವಿ, ಡಿ.23: ಮಂಗಳೂರಿನಲ್ಲಿ ನಡೆದಿರುವ ಕುಕ್ಕರ್‌ ಬಾಂಬ್‌ ಸ್ಫೋಟ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆ ಕುರಿತು ನೀಡಿದ್ದ ಹೇಳಿಕೆ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ, ಡಿಕೆಶಿ ಹೆಸರೆತ್ತದೆ ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತೋರಿದ್ದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿದರು.‌

ನಮ್ಮ ದೇಶ ಭಯೋತ್ಪಾದನೆ ಕಾರಣಕ್ಕೆ ಸಾಕಷ್ಟು ತೊಂದರೆ ಅನುಭವಿಸಿದೆ. ಒಬ್ಬರು ಹಾಲಿ ಪ್ರಧಾನಿ ಹಾಗೂ ಇನ್ನೊಬ್ಬರು ಮಾಜಿ ಪ್ರಧಾನಿಯನ್ನು ಕಳೆದುಕೊಂಡಿದ್ದೇವೆ. ಭಯೋತ್ಪಾದಕರು ಅಥವಾ ಭಯೋತ್ಪಾದನೆ ಕೃತ್ಯದ ಬಗ್ಗೆ ಸಹಾನುಭೂತಿ ತೋರುವುದು ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟಂತೆಯೇ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸ್ಫೋಟದ ದಿನ ಮುಖ್ಯಮಂತ್ರಿ ಕಾರ್ಯಕ್ರಮ ಅಲ್ಲಿತ್ತು. ಪ್ರಾಥಮಿಕ ತನಿಖೆ ಪ್ರಕಾರ ಮುಖ್ಯಮಂತ್ರಿ ಕಾರ್ಯಕ್ರಮ, ಶಾಲಾ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ವಿಧ್ವಂಸಕ ಕೃತ್ಯ ಎಸಗುವ ಉದ್ದೇಶವಿತ್ತು ಎಂದು ಹೇಳಲಾಗಿದೆ. ಹೀಗಿದ್ದರೂ ಪಕ್ಷವೊಂದರ ರಾಜ್ಯಾಧ್ಯಕ್ಷರು, ವಿಧಾನಸಭೆಯ ಹಿರಿಯ ಸದಸ್ಯರು ಭಯೋತ್ಪಾದಕನ ಬಗ್ಗೆ ಸಹಾನುಭೂತಿ ತೋರಿ ಮಾತನಾಡಿದ್ದಾರೆ. ದೇಶದ ಭದ್ರತೆಗೆ ಇಂತಹ ಹೇಳಿಕೆ ಅಪಾಯಕಾರಿಯಾಗಿದ್ದು ಯಾರೂ ಇಂತಹ ಮಾತು ಆಡಬಾರದು. ಭಯೋತ್ಪಾದನೆ ಮಟ್ಟ ಹಾಕುವ ಸಂಬಂಧ ಚರ್ಚೆಗೆ ಅವಕಾಶ ಕೊಡಿ ಎಂದು ಕೋರಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಿ.ಟಿ.ರವಿ ನಮ್ಮ ಪಕ್ಷದ ಅಧ್ಯಕ್ಷರನ್ನು ಕುರಿತು ಹೇಳಿದ್ದಾರೆ. ಆದರೆ, ಅವರು ಸದನದಲ್ಲಿಲ್ಲ. ಹೀಗಿರುವಾಗ ನೋಟಿಸ್‌ ಕೊಟ್ಟು ವಿಷಯ ಪ್ರಸ್ತಾಪಿಸಬೇಕೆಂದು ಆಕ್ಷೇಪ ವ್ಯಕ್ತಪಡಿಸಿದರು. ಭಯೋತ್ಪಾದನೆ ಕೃತ್ಯ ಯಾರೂ ಸಮರ್ಥಿಸಿಕೊಳ್ಳಬಾರದು, ಅಂತಹ ಕೃತ್ಯ ಎಸಗಿದವರಿಗೆ ಗಲ್ಲು ಸೇರಿ, ಕಠಿಣ ಶಿಕ್ಷೆ ನೀಡಬೇಕು. ನನಗೆ ಇರುವ ಮಾಹಿತಿ ಪ್ರಕಾರ, ನಮ್ಮ ಅಧ್ಯಕ್ಷರು ಭಯೋತ್ಪಾದಕನಿಗೆ ಸಹಾನುಭೂತಿ ತೋರಿಲ್ಲ ಎಂದು ಸಮರ್ಥಿಸಿಕೊಂಡರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಭಯೋತ್ಪಾದಕ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಆತನ ಮನೆ ಮೇಲೆ ದಾಳಿ ನಡೆಸಲಾಗಿದೆ. ಮುಖ್ಯಮಂತ್ರಿ ಕಾರ್ಯಕ್ರಮ ಅಥವಾ ಶಾಲಾ ವಿದ್ಯಾರ್ಥಿ ಕೇಂದ್ರೀಕರಿಸಿ ಸ್ಫೋಟ ಆಗಿದ್ದರೆ ಎಂತಹ ಅನಾಹುತ ಆಗುತ್ತಿತ್ತು ಎಂದು ಪ್ರಶ್ನಿಸಿದರು.

ಉಪ ನಾಯಕ ಯು.ಟಿ.ಖಾದರ್‌, ಭಯೋತ್ಪಾದನೆ ಬುಡ ಸಮೇತ ಕಿತ್ತುಹಾಕಬೇಕಿದೆ. ದೇಶ, ರಾಜ್ಯದ ಆಂತರಿಕ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಬೇಡ. ಆ ಕುರಿತು ಚರ್ಚೆಯಾಗಲಿ. ಆದರೆ ನೀವು ಪ್ರಸ್ತಾಪಿಸುವ ವಿಷಯದ ಹಿಂದಿನ ಉದ್ದೇಶ ಸರಿ ಇರಬೇಕು ಎಂದು ಹೇಳಿದರು. ಇದಕ್ಕೆ ಬಿಜೆಪಿಯ ಈಶ್ವರಪ್ಪ, ಅರವಿಂದ ಲಿಂಬಾವಳಿ ಸಹಿತ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಯಾವ ರೀತಿಯ ದುರುದ್ದೇಶ ಇರಲು ಸಾಧ್ಯ ಎಂದರು.

ಕೊನೆಗೆ ಸ್ಪೀಕರ್‌ ಕಾಗೇರಿ, ಭಯೋತ್ಪಾದನೆ ನಿಗ್ರಹ ಕುರಿತು ಸದನದಲ್ಲಿ ಚರ್ಚೆಯಾಗಿ ಸಂದೇಶ ರವಾನೆಯಾಗಬೇಕು. ಸಿ.ಟಿ.ರವಿ ಪ್ರಸ್ತಾಪಿಸಿರುವ ವಿಷಯದ ಬಗ್ಗೆ ಸೋಮವಾರದ ನಂತರ ಚರ್ಚೆಗೆ ಅವಕಾಶ ಕೊಡಲಾಗುವುದು ಎಂದು ಹೇಳಿದರು.

Karnataka assembly debates on Mangalore Cooker Blast slaming DK Shivakumar statement