ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಸಿ, ಡಿ ದರ್ಜೆಯ ಹುದ್ದೆ ಕನ್ನಡಿಗರಿಗೆ ಮೀಸಲು ; ಪರಿಷತ್ತಿನಲ್ಲಿ ಖಾಸಗಿ ಮಸೂದೆ ಮಂಡನೆ

23-12-22 09:57 pm       HK News Desk   ಕರ್ನಾಟಕ

ರಾಜ್ಯದಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಇಲಾಖಾ ಕಚೇರಿಗಳಲ್ಲಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಲ್ಲಿ `ಸಿ' ಹಾಗೂ `ಡಿ' ದರ್ಜೆಯ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿರಿಸಬೇಕು ಎಂದು ಸದಸ್ಯ ಯು.ಬಿ. ‌ವೆಂಕಟೇಶ ಅವರು ಮಂಡಿಸಿದ ಖಾಸಗಿ ನಿರ್ಣಯಕ್ಕೆ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರಕಿದೆ.‌

ಬೆಳಗಾವಿ, ಡಿ.23: ರಾಜ್ಯದಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಇಲಾಖಾ ಕಚೇರಿಗಳಲ್ಲಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಲ್ಲಿ `ಸಿ' ಹಾಗೂ `ಡಿ' ದರ್ಜೆಯ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿರಿಸಬೇಕು ಎಂದು ಸದಸ್ಯ ಯು.ಬಿ. ‌ವೆಂಕಟೇಶ ಅವರು ಮಂಡಿಸಿದ ಖಾಸಗಿ ನಿರ್ಣಯಕ್ಕೆ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರಕಿದೆ.‌

ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ 1947 ರಿಂದ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರಗಳು, ಅನೇಕ ರಾಜ್ಯಗಳಲ್ಲಿ ಹಲವಾರು ಪ್ರಕಾರಗಳಲ್ಲಿ ಉದ್ಯಮಗಳನ್ನು, ಬ್ಯಾಂಕುಗಳನ್ನು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿವೆ. ಇವುಗಳಲ್ಲಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸುವ ಸಂದರ್ಭದಲ್ಲಿ ಸ್ಥಳೀಯ ಭಾಷೆ ಮಾತನಾಡುವ ಆಯಾ ರಾಜ್ಯದ ಜನರಿಗೆ ತಾಂತ್ರಿಕೇತರ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಮೀಸಲಿಡುವ ಯಾವುದೇ ರೀತಿಯ ನಿಯಮಗಳನ್ನು ಕಾನೂನಾತ್ಮಕವಾಗಿ ರೂಪಿಸದಿರುವ ಕಾರಣದಿಂದ ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ.

ಬಹುತೇಕ ಕೇಂದ್ರ ಸರ್ಕಾರದ ಹುದ್ದೆಗಳು ನಮ್ಮ ಕರ್ನಾಟಕ ರಾಜ್ಯದಲ್ಲಂತೂ ಅನ್ಯ ಭಾಷಿಗರ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರ ಉಭಯ ಸದನಗಳಲ್ಲಿ ಒಂದು ನಿರ್ಣಯವನ್ನು ಸಂವಿಧಾನದ ತಿದ್ದುಪಡಿಗಾಗಿ ಮಂಡಿಸಿ ಅನುಮೋದಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಯುಬಿ ವೆಂಕಟೇಶ ವಿಷಯ ಮಂಡಿಸಿದರು.

ಇಂತಹ ನಿರ್ಣಯಗಳು ದೇಶದ ಎಲ್ಲಾ ರಾಜ್ಯಗಳಲ್ಲೂ ಆಯಾಯ ಸದನದಲ್ಲಿ ಮಂಡಿಸಲು, ನಾವು ಮಾದರಿಯಾಗಬೇಕು. ಎಲ್ಲಾ ರಾಜ್ಯಗಳಿಂದ ಒತ್ತಡ ತರುವುದರ ಜೊತೆಗೆ ನಮ್ಮ ರಾಜ್ಯದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಆಯಾಯ ರಾಜ್ಯದವರಿಗೆ ಶೇ.80 ರಷ್ಟು ಮೀಸಲಿಡುವ ಉದ್ದೇಶಕ್ಕಾಗಿ ಸಂವಿಧಾನ ತಿದ್ದುಪಡಿಗೆ ಒತ್ತಾಯಿಸಬೇಕು ಎಂಬ ವಿಷಯವನ್ನು ಕೂಡ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.

ಸಂವಿಧಾನ ತಿದ್ದುಪಡಿಯಾಗದ ಹೊರತು ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನ್ನಡಿಗರಿಗೆ ಹುದ್ದೆ ಎಂಬ ಕನ್ನಡ ಪರ ಹೋರಾಟಗಾರರ ಒತ್ತಾಯಗಳು ಕಾನೂನಾತ್ಮಕವಾಗಿ ಪರಿಣಾಮವನ್ನು ಬೀರಲು ಸಾಧ್ಯವಾಗದು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರೇ ಅಧಿಕವಾಗಿದ್ದಾರೆ. ಕನ್ನಡ ಭಾಷೆ ತಿಳಿಯದ ಕಾರಣ ನಾವೇ ಅವರ ಭಾಷೆಯನ್ನು ಕಲಿಯುವಂತಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಸಾಮಾನ್ಯ ಕ್ಲರಿಕಲ್ ಹುದ್ದೆಗಳನ್ನು ಕನ್ನಡಿಗರಿಗೇ ಮೀಸಲಿಡಲು ಕಾನೂನು ತರಬೇಕು ಎಂಬ ಅಭಿಪ್ರಾಯವನ್ನು ವೆಂಕಟೇಶ ಸದನದಲ್ಲಿ ವ್ಯಕ್ತಪಡಿಸಿದರು.

1983ರಲ್ಲಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಶೇ.80 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವ ಸಂಬಂಧ ವರದಿಯನ್ನು ನೀಡಲು ಡಾ. ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದರು. ಡಾ.ಮಹಿಷಿ ವರದಿ ಇಲ್ಲಿಯವರೆಗೂ ಅನುಷ್ಠಾನಗೊಂಡಿಲ್ಲ, ಹಲವಾರು ಬಾರಿ ಪರಿಸ್ಥಿತಿಗೆ ಅನುಗುಣವಾಗಿ ಮಹಿಷಿ ವರದಿ ಪರಿಷ್ಕರಣೆಯೂ ಆಗಿದೆ. ಆದರೆ, ಇಲ್ಲಿಯ ವರೆಗೂ ಸರೋಜಿನಿ ಮಹಿಷಿ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ ಎಂದು ವೆಂಕಟೇಶ ಸದನದ ಗಮನ ಸೆಳೆದರು.

C and D grade posts are reserved for Kannadigas in government and semi-government organizations