ಬೆಂಗಳೂರಿಗೆ ಬಂದಿಳಿದ 9 ಜನರಲ್ಲಿ ಕೊರೊನಾ ಬಿಎಫ್ 7 ವೈರಸ್ ಪತ್ತೆ ; ನಾಲ್ವರು ಐಸೊಲೇಶನ್ ವಾರ್ಡಿಗೆ ಶಿಫ್ಟ್ 

26-12-22 12:44 pm       HK News Desk   ಕರ್ನಾಟಕ

ಚೀನಾದಿಂದ ರಾಜ್ಯಕ್ಕೆ ಆಗಮಿಸಿರುವ ಒಬ್ಬ ವ್ಯಕ್ತಿ ಸೇರಿದಂತೆ ಹೈರಿಸ್ಕ್ ದೇಶಗಳಿಂದ ಬೆಂಗಳೂರಿಗೆ ಬಂದಿರುವ 9 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರೂಪಾಂತರಿ ವೈರಸ್ ಬಿಎಫ್ 7 ಆತಂಕ ಹೆಚ್ಚಾಗಿದೆ.

ಬೆಳಗಾವಿ, ಡಿ.26 : ಚೀನಾದಿಂದ ರಾಜ್ಯಕ್ಕೆ ಆಗಮಿಸಿರುವ ಒಬ್ಬ ವ್ಯಕ್ತಿ ಸೇರಿದಂತೆ ಹೈರಿಸ್ಕ್ ದೇಶಗಳಿಂದ ಬೆಂಗಳೂರಿಗೆ ಬಂದಿರುವ 9 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರೂಪಾಂತರಿ ವೈರಸ್ ಬಿಎಫ್ 7 ಆತಂಕ ಹೆಚ್ಚಾಗಿದೆ.

ಈ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಳೆದ ಮೂರು ದಿನಗಳಲ್ಲಿ 9 ಜನ ಪ್ರಯಾಣಿಕರಲ್ಲಿ ಕೋವಿಡ್ ದೃಢಪಟ್ಟಿದೆ. ಬೆಂಗಳೂರಿನ ಏರ್ ಪೋರ್ಟ್ ಗೆ ಬಂದಿಳಿದ ಪ್ರಯಾಣಿಕರಿಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಅವರಲ್ಲಿ 9 ಜನರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

9 ಜನರು ಕೂಡ ಹೈರಿಸ್ಕ್ ದೇಶಗಳಿಂದ ಬಂದವರಾಗಿದ್ದಾರೆ. ಚೀನಾದಿಂದ ಬಂದ 35 ವರ್ಷದ ವ್ಯಕ್ತಿ ಸೇರಿದಂತೆ ನಾಲ್ಕು ಜನರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸೋಲೇಟ್ ಮಾಡಲಾಗಿದೆ. ಉಳಿದವರನ್ನು ಹೋಂ ಕ್ವಾರಂಟೈನ್ ಮಾಡಿ ನಿಗಾ ವಹಿಸಲಾಗಿದೆ. ಎಲ್ಲರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.

ಕೊರೊನಾ ಸೋಂಕಿನ ಬಗ್ಗೆ ಯಾರೂ ಗಾಬರಿಪಡುವ ಅಗತ್ಯವಿಲ್ಲ. ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ, ಸರ್ಕಾರ ಕೂಡ ಮುನ್ನೆಚ್ಚರಿಕೆ ವಹಿಸುತ್ತಿದೆ. ಮಾಸ್ಕ್ ಧರಿಸಿ, ಲಸಿಕೆಗಳನ್ನು ಪಡೆಯುವಂತೆ ಸಚಿವರು ತಿಳಿಸಿದ್ದಾರೆ.

Bangalore seven international travellers detected with BF7 covid virus.