ಕಾರಿಗೆ ಗುದ್ದಿ ಪರಾರಿಯಾಗಲು ಯತ್ನ : ಹಿಡಿಯಲು ಹೋಗಿದ್ದಕ್ಕೆ  ಅರ್ಧ ಕಿ.ಮೀ. ಎಳೆದೊಯ್ದ ವಾಹನ ಸವಾರ  ; ಪೊಲೀಸರ ವಶಕ್ಕೆ 

17-01-23 04:56 pm       Bangalore Correspondent   ಕರ್ನಾಟಕ

ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಸ್ಕೂಟರ್‌ಗೆ ಜೋತುಬಿದ್ದ ಚಾಲಕರೊಬ್ಬರನ್ನು ರಸ್ತೆಯಲ್ಲಿ ಸವಾರ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಬೆಂಗಳೂರು, ಜ.17 : ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಸ್ಕೂಟರ್‌ಗೆ ಜೋತುಬಿದ್ದ ಚಾಲಕರೊಬ್ಬರನ್ನು ರಸ್ತೆಯಲ್ಲಿ ಸವಾರ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಮುತ್ತಪ್ಪ (71) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಕೂಟರ್‌ನಲ್ಲಿ ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ್ದ ಆರೋಪಿ ಸಾಹಿಲ್‌ನನ್ನು (25) ಗೋವಿಂದರಾಜನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಬಗ್ಗೆ ಆಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಮುತ್ತಪ್ಪ, ‘ನನ್ನ ಬೊಲೆರೊ ಕಾರು ಚಲಾಯಿಸಿಕೊಂಡು ಚಂದ್ರಾಲೇಔಟ್‌ನಲ್ಲಿರುವ ಕುವೆಂಪು ಭಾಷಾ ಪ್ರಾಧಿಕಾರ ಕಚೇರಿಗೆ ಹೊರಟಿದ್ದೆ. ಪಶ್ಚಿಮ ಕಾರ್ಡ್‌ ರಸ್ತೆಯ ಎಸ್‌ಬಿಐ ವೃತ್ತದ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತ ಅತೀ ವೇಗವಾಗಿ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದ ಸಾಹಿಲ್, ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದ. ಕಾರಿನಿಂದ ಇಳಿದಿದ್ದ ನಾನು, ಆತನನ್ನು ತಡೆದು ಪ್ರಶ್ನಿಸಲು ಮುಂದಾಗಿದ್ದೆ.’

‘ತನ್ನದೇನು ತಪ್ಪಿಲ್ಲವೆಂದು ಆತ ವಾದಿಸಿದ್ದ. ನಂತರ, ಸ್ಕೂಟರ್ ಸಮೇತ ಸ್ಥಳದಿಂದ ಪರಾರಿಯಾಗಲು ಮುಂದಾದ. ಆಗ ನಾನು ಆತನ ಸ್ಕೂಟರ್‌ ಹಿಂದಿನಿಂದ ಹಿಡಿದುಕೊಂಡಿದ್ದೆ. ಆಗ ಆತ ಸ್ಕೂಟರ್‌ ನಿಲ್ಲಿಸದೇ ಅರ್ಧ ಕಿ.ಮೀ. ಎಳೆದೊಯ್ದ. ರಸ್ತೆಯಲ್ಲಿ ಹೊರಟಿದ್ದ ಜನರೇ ಆತನನ್ನು ತಡೆದರು. ಘಟನೆಯಿಂದ ನನ್ನ ಸೊಂಟ ಹಾಗೂ ಕೈಗೆ ಗಾಯವಾಗಿದೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Hit and run accident in Bangalore, old man dragged half kilometer for questioning biker.