ಕೊಲಿಜಿಯಂ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ದುರುದ್ದೇಶದ್ದು ; ನ್ಯಾಯಾಂಗದ ಸ್ವಾಯತ್ತೆಗೆ ಧಕ್ಕೆ ಎಂದ ಸಂತೋಷ್ ಹೆಗ್ಡೆ 

25-01-23 01:42 pm       HK News Desk   ಕರ್ನಾಟಕ

ನ್ಯಾಯಮೂರ್ತಿಗಳ ನೇಮಕಾತಿ ವ್ಯವಸ್ಥೆ 'ಕೊಲಿಜಿಯಂ'ನಲ್ಲಿ ತನ್ನ ಪ್ರತಿನಿಧಿ ಇರಬೇಕು ಎನ್ನುವ ಕೇಂದ್ರ ಸರ್ಕಾರದ ನಿಲುವು ದುರುದ್ದೇಶಪೂರಿತ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೈಸೂರು, ಜ.25 : ನ್ಯಾಯಮೂರ್ತಿಗಳ ನೇಮಕಾತಿ ವ್ಯವಸ್ಥೆ 'ಕೊಲಿಜಿಯಂ'ನಲ್ಲಿ ತನ್ನ ಪ್ರತಿನಿಧಿ ಇರಬೇಕು ಎನ್ನುವ ಕೇಂದ್ರ ಸರ್ಕಾರದ ನಿಲುವು ದುರುದ್ದೇಶಪೂರಿತ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನ್ಯಾಯಾಂಗವನ್ನು ಹಿಡಿತದಲ್ಲಿಡಲು ಬಯಸುವವರು ಕೊಲಿಜಿಯಂ ಅನ್ನು ವಿರೋಧಿಸುವ ಮೂಲಕ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಅಪಾಯಕಾರಿ ನಡೆ ಖಂಡನೀಯ' ಎಂದು ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಪ್ರತಿಪಾದಿಸಿದರು.

ನ್ಯಾಯಾಂಗದಲ್ಲೂ ನ್ಯೂನತೆಗಳಿದ್ದು, ಸುಧಾರಣೆಯಾಗಬೇಕು. ಆದರೆ ಹೊರಗಿನವರಿಗೆ ಲಗಾಮು ನೀಡಬೇಕು ಎನ್ನುವ ಸರ್ಕಾರದ ಯೋಜನೆ ನ್ಯಾಯಾಂಗದ ಸ್ವಾಯತ್ತತೆಗೆ ಧಕ್ಕೆ ತರುವಂಥದ್ದು ಎಂದು ಅಭಿಪ್ರಾಯಪಟ್ಟರು.

ಕೊಲಿಜಿಯಂ ಶಿಫಾರಸ್ಸು ಮಾಡಿದ ಬಳಿಕ ನ್ಯಾಯಮೂರ್ತಿಗಳ ವೈಯಕ್ತಿಕ ವಿಚಾರಗಳನ್ನು ಪರಿಗಣಿಸಿ ಕೇಂದ್ರ ನಿರಾಕರಿಸಿರುವುದು ತಪ್ಪು. ಒಬ್ಬ ಮನುಷ್ಯನ ವೈಯಕ್ತಿಕ ಜೀವನವನ್ನು ಆಡಳಿತ ದೃಷ್ಟಿಯಲ್ಲಿ ನೋಡಲಾಗದು. ಪ್ರಚಂಡ ಬಹುಮತವುಳ್ಳ ಸರ್ಕಾರದ ತಪ್ಪು ನಿರ್ಧಾರಗಳನ್ನು ಪ್ರಶ್ನಿಸಲು, ಸಂವಿಧಾನವನ್ನು ಎತ್ತಿಹಿಡಿಯಲು ನ್ಯಾಯಾಂಗಕ್ಕೆ ತನ್ನದೇ ಆಯ್ಕೆ ಪ್ರಕ್ರಿಯೆ ಮುಖ್ಯ' ಎಂದರು.

'ಸಚಿವರನ್ನು ನೇಮಿಸಿಕೊಳ್ಳುವ ಪ್ರಧಾನಿಯನ್ನು ಯಾರಾದರೂ ಪ್ರಶ್ನಿಸುತ್ತಾರೆಯೇ? ಆದರೆ, ಕೊಲಿಜಿಯಂನಲ್ಲಿ ನ್ಯಾಯಾಧೀಶರ ಗುಂಪು ಬಹುಮತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುತ್ತದೆ. ಅಷ್ಟರ ಮಟ್ಟಿಗೆ ಅದು ಪಾರದರ್ಶಕ ಹಾಗೂ ಉತ್ತಮ ವ್ಯವಸ್ಥೆ ಎಂದು ಹೇಳಿದರು.

It is absolutely arbitrary: Ex-HC judge on collegium system says Santosh Hedge in Mysuru.