ಉಡುಪಿ, ದಕ್ಷಿಣ ಕನ್ನಡದಲ್ಲಿ ಎರಡಲ್ಲ, 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ; ಶಾಂತಿ ಕದಡಿರುವುದನ್ನು ಬಿಜೆಪಿಯವ್ರೇ ಒಪ್ಪಿದ್ದಾರೆ 

11-02-23 02:22 pm       Bangalore Correspondent   ಕರ್ನಾಟಕ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಫೆ.11 : ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆ ತಪ್ಪು ಮಾಹಿತಿ ಬಂದಿದೆ. ನಮ್ಮ ವರದಿಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರು ಪ್ರವಾಸ ಮಾಡುತ್ತಿದ್ದಾರೆ. ಆದರೆ ಮಂಗಳೂರಿನಲ್ಲಿ ರೋಡ್ ಶೋವನ್ನು ಕಾನೂನು ಸುವ್ಯವಸ್ಥೆ ಕಾರಣದಿಂದ ರದ್ದು ಮಾಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕೇಂದ್ರ ಗೃಹ ಸಚಿವರಿಗೆ ಕಾನೂನು ರಕ್ಷಣೆ ಇಲ್ಲ ಎಂದರೆ ಜನ ಸಾಮಾನ್ಯರ ಪರಿಸ್ಥಿತಿ ಏನಾಗಬೇಕು? ಎಂದು ರಾಜ್ಯದ ಜನರಿಗೆ ಕೇಳಬಯಸುತ್ತೇನೆ. ರಾಜ್ಯಕ್ಕೆ ಇದಕ್ಕಿಂತ ದೊಡ್ಡ ಅಪಮಾನ ಬೇರೆ ಏನು ಬೇಕು? 

Earlier, UP Investor Summit took place elsewhere: Amit Shah attacks SP govt  - The Economic Times

ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಆದ ಕಾರ್ಯಕ್ರಮ ರೂಪಿಸಿದೆ. ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಈ ಭಾಗದ ಹಿಂದುಳಿದ ವರ್ಗಗಳಾದ ಮೊಗವೀರರು, ಬಂಟರು, ಬಿಲ್ಲವರು, ಕುಲಾಲ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಮಾಡಿ, ಈ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಾಗುವುದು. 

ಕರಾವಳಿ ಭಾಗದಲ್ಲಿ ಹತ್ಯೆ ನಡೆದಾಗ ಬಿಜೆಪಿ ಕಾರ್ಯಕರ್ತರು ಮಂತ್ರಿ ಹಾಗೂ ಬಿಜೆಪಿ ಅಧ್ಯಕ್ಷರ ವಿರುದ್ಧ ಹೇಗೆ ಪ್ರತಿಭಟನೆ ನಡೆಸಿದರು ಎಂದು ನಿಮಗೆ ಗೊತ್ತೇ ಇದೆ. ಹಿಂದುತ್ವದ ಹೆಸರಿನ ಹೋರಾಟದಲ್ಲಿ ಬಿಜೆಪಿ ನಾಯಕರ ಮಕ್ಕಳು ಬಲಿಯಾಗಿಲ್ಲ. ಬಡವರ ಮಕ್ಕಳನ್ನು ಬಲಿ ಪಡೆಯುತ್ತಿದ್ದಾರೆ. ಈ ಬಗ್ಗೆ ಜನರಿಗೆ ಉತ್ತರ ನೀಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳಿಗೆ ಬಿಡುತ್ತೇನೆ ಎಂದು ತಿಳಿಸಿದರು.

ಟಿಕೆಟ್ ಹಂಚಿಕೆ ವಿಚಾರವಾಗಿ ಸ್ಕ್ರೀನಿಂಗ್ ಕಮಿಟಿ ಸಭೆ ಬಗ್ಗೆ ಕೇಳಿದಾಗ, ನಮ್ಮ ಪಕ್ಷದ ಟಿಕೆಟ್ ಹಂಚಿಕೆಗೆ ನಮ್ಮದೇ ಆದ ಪ್ರಕ್ರಿಯೆ ಇವೆ. ನಾವು ಈಗಾಗಲೇ ಚುನಾವಣಾ ಸಮಿತಿ ಸಭೆ ಮಾಡಿದ್ದು, ಸ್ಕ್ರೀನಿಂಗ್ ಕಮಿಟಿ  ಚರ್ಚೆ ಮಾಡಿ ಶೀಘ್ರದಲ್ಲಿ ಅಭ್ಯರ್ಥಿ ಪಟ್ಟಿ ಪ್ರಕಟ ಮಾಡಲಾಗುವುದು ಎಂದರು. ಬಿಜೆಪಿಯ ಹಿಂದುತ್ವ ಈ ಬಾರಿ ಚುನಾವಣೆಯಲ್ಲಿ ವರ್ಕ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ನಾನು ಶಿವಮೊಗ್ಗಕ್ಕೆ ಹೋಗಿದ್ದಾಗ ಆಯನೂರು ಮಂಜುನಾಥ್ ಅವರು ಮೋದಿ, ಅಮಿತ್ ಶಾ, ಕಟೀಲ್ ಅವರ ಫೋಟೋ ಹಾಕಿಕೊಂಡು ಗೂಂಡಾ, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ, ಕೋಮುಗಲಭೆ, ದಂಗೆ, ರಕ್ತಪಾತ ರಹಿತ, ನಿಷೇದಾಜ್ಞೆ ಮುಕ್ತ ನೆಮ್ಮದಿಯ ಶಿವಮೊಗ್ಗಕ್ಕೆ ಬೆಂಬಲ ನೀಡುವಂತೆ ಬೋರ್ಡ್ ಹಾಕಿಕೊಂಡಿದ್ದಾರೆ. ಅಂದರೆ ಶಿವಮೊಗ್ಗದಲ್ಲಿ ನೆಮ್ಮದಿ, ಶಾಂತಿ ಇಲ್ಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಸಂಸದ, ಎಂಎಲ್ ಸಿ ಆಗಿದ್ದ ಆಯನೂರು ಮಂಜುನಾಥ ಅವರಿಗೆ ನಾವು ಹೇಳುತ್ತಿದ್ದ ಸತ್ಯ ಒಪ್ಪಿರುವುದಕ್ಕೆ ಸೆಲ್ಯೂಟ್ ಮಾಡುತ್ತೇನೆ. ಬಿಜೆಪಿ ಆಡಳಿತದಲ್ಲಿ ಸಾಮಾಜಿಕ ಸೌಹಾರ್ದ ನಾಶವಾಗಿದ್ದು ಮಲೆನಾಡು ಹಾಗೂ ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರವನ್ನು ಕಿತ್ತು ಹಾಕಬೇಕು. ಬಿಜೆಪಿಯವರು ಅಂಬೇಡ್ಕರ್ ಅವರ ಸಂವಿಧಾನದ ಹೆಸರಲ್ಲಿ ಪ್ರತಿಜ್ಞೆ ಮಾಡಿ ಅಧಿಕಾರ ಸ್ವೀಕರಿಸಿ ನಂತರ ಎಲ್ಲಾ ವರ್ಗದ ರಕ್ಷಣೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರ ಜಿಲ್ಲೆ, ಮಲೆನಾಡು, ಕರಾವಳಿ ಭಾಗದಲ್ಲಿ ಇದು ಸಾಧ್ಯವಾಗಿಲ್ಲ ಎಂದು ಅವರ ಪ್ರಣಾಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಮತ್ತೇನು ಬೇಕು? ಎಂದು ತಿಳಿಸಿದರು.

K S Eshwarappa sparks row with expletive against Congress leaders,  apologises later | Deccan Herald

ಶಾಂತಿ ಬಯಸುವುದರಲ್ಲಿ ತಪ್ಪೇನು ಎಂಬ ಈಶ್ವರಪ್ಪ ಹೇಳಿಕೆ ಬಗ್ಗೆ ಕೇಳಿದಾಗ, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅರ್ಹತೆಯನ್ನು ಅವರು ಉಳಿಸಿಕೊಂಡಿಲ್ಲ. ಇಡೀ ಸರ್ಕಾರ ಹಾಗೂ ರಾಜ್ಯಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಇದ್ದರೂ ಮೆರವಣಿಗೆ ಮಾಡಿದ್ದು ಅವರೇ ಅಲ್ಲವೇ? ಬಿಜೆಪಿ ಅವರು ಹೃದಯಪೂರ್ವಕವಾಗಿ ಸತ್ಯ ಒಪ್ಪಿಕೊಂಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Not just Dk and Udupi we will bag victory in 10 constituencies says DK Shivakumar.