ಉಡುಪಿಗೆ ಮುಸ್ಲಿಂ ರಾಜ ಭೂಮಿ ನೀಡಿದ್ದಲ್ಲ, ಗಂಗಾ ತೀರದಲ್ಲಿ ಮಧ್ವಾಚಾರ್ಯರಿಗೆ ಭೂಮಿ ನೀಡಿದ್ದರು ; ವಿವಾದಕ್ಕೆ ತೆರೆಎಳೆದ ಪೇಜಾವರ ಶ್ರೀ 

08-03-23 04:38 pm       HK News Desk   ಕರ್ನಾಟಕ

ಉಡುಪಿ ಕೃಷ್ಣ ಮಠದ ಜಾಗವನ್ನು ಮುಸ್ಲಿಂ ರಾಜರು ಕೊಟ್ಟಿದ್ದು ಎಂಬ ಕಾಂಗ್ರೆಸ್‌ ನಾಯಕ ಮಿಥುನ್ ರೈ ವಿವಾದಕ್ಕೆ ತಿರುಗುತ್ತಲೇ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದು, ವಿವಾದಕ್ಕೆ ತೆರೆ ಎಳೆದಿದ್ದಾರೆ.

ತುಮಕೂರು, ಮಾ.8: ಉಡುಪಿ ಕೃಷ್ಣ ಮಠದ ಜಾಗವನ್ನು ಮುಸ್ಲಿಂ ರಾಜರು ಕೊಟ್ಟಿದ್ದು ಎಂಬ ಕಾಂಗ್ರೆಸ್‌ ನಾಯಕ ಮಿಥುನ್ ರೈ ವಿವಾದಕ್ಕೆ ತಿರುಗುತ್ತಲೇ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದು, ವಿವಾದಕ್ಕೆ ತೆರೆ ಎಳೆದಿದ್ದಾರೆ. ಗುರುಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ. 

ತುಮಕೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಪೇಜಾವರ ಶ್ರೀಗಳು, ಯಾರು ಕೂಡ ಯಾವ ಹೇಳಿಕೆಯನ್ನಾದರೂ ಕೊಡಬಹುದು. ಆದರೆ ಹೇಳಿಕೆಯ ಜೊತೆಗೆ ಯುಕ್ತವಾದ ಆಧಾರವನ್ನ ಕೊಟ್ರೆ ಆ ಮಾತಿಗೆ ಬೆಲೆ ಇರುತ್ತದೆ. ಆಧಾರ ರಹಿತ ಮಾತನ್ನು ಇಟ್ಕೊಂಡು ಚರ್ಚೆ ಬೆಳೆಸ್ತಾರೆ ಅಂತಾದ್ರೆ ಅದಕ್ಕೆ ಅರ್ಥವಿಲ್ಲ ಎಂದು ಹೇಳಿದರು. ಉಡುಪಿಯ ಅನಂತೇಶ್ವರ ಸನ್ನಿಧಾನ ಇರಬಹುದು, ಕೃಷ್ಣ ಮಠದ ಸನ್ನಿಧಾನ ಇರಬಹುದು, ಅಲ್ಲಿನ ಭೂಮಿಯನ್ನು ರಾಮಭೋಜ ಎಂಬ ಅರಸ ದಾನ ನೀಡಿರೋದಕ್ಕೆ ಆಧಾರಗಳಿವೆ ಎಂದು ಹೇಳಿದರು. 

ಪೇಜಾವರ ಮಠದ ಹಿಂದಿನ ಸ್ವಾಮೀಜಿ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ ಒಂದು ವಿಚಾರವನ್ನು ತಪ್ಪಾಗಿ ಗ್ರಹಿಸಿ ಅದನ್ನು ಉಡುಪಿಗೆ ಜೋಡಿಸಲಾಗುತ್ತಿದೆ. ಮಧ್ವಾಚಾರ್ಯರ ಕಾಲದಲ್ಲಿ ಆ ರೀತಿಯ ಘಟನೆ ನಡೆದಿತ್ತು. ಆದರೆ ಅದು ಉಡುಪಿಯಲ್ಲಿ ಅಲ್ಲ, ಉತ್ತರ ಪ್ರದೇಶದ ಗಂಗಾ ನದಿ ತೀರದಲ್ಲಿ. ಗುರುಗಳು ಆ ಕುರಿತು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ. 

Udupi Sri Krishna Matha - Wikipedia

ಆ ಘಟನೆಯೇ ಬೇರೆ, ಈ ಘಟನೆಯೇ ಬೇರೆ ! 

500 ವರ್ಷಗಳ ಹಿಂದೆ ಉಡುಪಿಯ ಮಧ್ವಾಚಾರ್ಯರು ಎಲ್ಲ ಶಿಷ್ಯರೊಡನೆ ಸೇರಿಕೊಂಡು ಬದರಿ ಯಾತ್ರೆಗೆ ಹೊರಟಿದ್ದರು. ಯಾತ್ರೆಗೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಿತ್ತು. ನದಿಯ ಆಚೆ ದಡದಲ್ಲಿ ಒಬ್ಬ ತುರ್ಕ ರಾಜನ ಆಳ್ವಿಕೆ ಇತ್ತು. ಆತ ನದಿಯ ಮೂಲಕ ವೈರಿಗಳು ಬರಬಹುದು ಎಂಬ ಕಾರಣಕ್ಕಾಗಿ ಅಲ್ಲಿ ದೋಣಿ ಸಂಚಾರವನ್ನೇ ನಿಲ್ಲಿಸಿದ್ದ. ಆದರೆ, ಸಂಕಲ್ಪದಂತೆ ಮಧ್ವಾಚಾರ್ಯರು ದೋಣಿ ದಾಟಿ ವಾರಣಾಸಿಗೆ ಹೋಗುವುದು ಅನಿವಾರ್ಯವಾಗಿತ್ತು. ಮಧ್ವಾಚಾರ್ಯರು ತಾವು ಈಜಿಯೇ ಆಚೆ ದಡ ಸೇರಲು ನಿರ್ಧರಿಸಿದರು. ತನ್ನ ಶಿಷ್ಯರು ಹಿಂದಿನಿಂದ ಒಬ್ಬರ ಕಾಲನ್ನು ಮತ್ತೊಬ್ಬರು ಹಿಡಿದು ಸಾಗಿ ಬರುವಂತೆ ತಿಳಿಸಿದ್ದು ಅದೇ ರೀತಿ ಮಧ್ವಾಚಾರ್ಯರು ಈ ಕೆಲಸವನ್ನು ನಡೆಸಿಯೇ ಬಿಟ್ಟರು.

ಆದರೆ, ಅವರು ದಡ ದಾಟಿ ಆಚೆ ತೀರಕ್ಕೆ ಹೋಗಿ ನಿಲ್ಲುತ್ತಿದ್ದಂತೆಯೇ ಅತ್ತ ಕಡೆಯಿಂದ ಸೈನಿಕರು ಕತ್ತಿ ಹಿಡಿದುಕೊಂಡು ಓಡಿ ಬಂದರು.  ಸೈನಿಕರನ್ನು ಒಂದು ಕ್ಷಣ ನಿಲ್ಲಲು ಹೇಳಿ, ತಾವು ಬಂದ ಕಾರ್ಯವನ್ನು ಸ್ವಾಮಿಗಳು ತಿಳಿಸಿದರು. ಸ್ವಾಮಿಗಳು ಬಂದಿರುವ ವಿಚಾರವನ್ನು ಸೈನಿಕರು ರಾಜನಿಗೆ ತಿಳಿಸುತ್ತಿದ್ದಂತೆ ಆತನೇ ಅಲ್ಲಿಗೆ ಬಂದು ಮಧ್ವಾಚಾರ್ಯರು ಮತ್ತು ಶಿಷ್ಯರನ್ನು ಗೌರವದಿಂದ ಬರಮಾಡಿಕೊಂಡಿದ್ದ.  ಮಧ್ವಾಚಾರ್ಯರ ಶಕ್ತಿಗೆ, ವ್ಯಕ್ತಿತ್ವಕ್ಕೆ ಮಾರುಹೋದ ತುರ್ಕ ರಾಜ ಸ್ವಾಮಿಗಳು ಮಠ ಕಟ್ಟಿಕೊಳ್ಳಲು ಭೂಮಿಯನ್ನು ದಾನವಾಗಿ ನೀಡಿದ್ದ ಎಂಬ ಉಲ್ಲೇಖ ಇತಿಹಾಸದಲ್ಲಿದೆ. ಇದನ್ನೇ ನಮ್ಮ ಹಿಂದಿನ ಗುರುಗಳು ಉಲ್ಲೇಖ ಮಾಡಿದ್ದಾರೆಯೇ ಹೊರತು ಉಡುಪಿ ಮಠದ ಜಾಗವನ್ನು ಮುಸ್ಲಿಂ ರಾಜರು ನೀಡಿದ್ದು ಅಂತ ಹೇಳಿದ್ದಲ್ಲ. ಇದನ್ನೇ ತಪ್ಪಾಗಿ ತಿಳಿದು ಉಡುಪಿ ಮಠದ ಬಗ್ಗೆ ತಪ್ಪು ಹೇಳಿಕೆ ನೀಡಿದ್ದಾರೆ. ಆಧಾರ ಇಲ್ಲದ ಹೇಳಿಕೆ, ಚರ್ಚೆಯನ್ನು ಮುಂದುವರಿಸುವುದು ಅರ್ಥಹೀನ ಎಂದು ಪೇಜಾವರ ಶ್ರೀಗಳು ಹೇಳಿದರು.

ಉಡುಪಿ ಕೃಷ್ಣ ಮಠಕ್ಕೆ ಮುಸ್ಲಿಂ ರಾಜರಿಂದ ಭೂಮಿ ; ಪೇಜಾವರ ಶ್ರೀಗಳು ಹೇಳಿದ್ದನ್ನು ಉಲ್ಲೇಖಿಸಿದ್ದೇನೆ – ಮಿಥುನ್ ರೈ ಪ್ರತಿಕ್ರಿಯೆ

Udupi Pejawar Mutt seer terms Mithun Rai’s claim of Muslim ruler donating land for Krishna Math as false.