ಲಿಂಗಾಯತ ಪ್ರಾಬಲ್ಯದ ಬೆಳಗಾವಿ ; ರಮೇಶ್ ಜಾರಕಿಹೊಳಿಯನ್ನೇ ನಂಬಿಕೊಂಡ ಬಿಜೆಪಿ, ಒಂದೆರಡು ಕುಟುಂಬದ ಹಿಡಿತದಲ್ಲಿ 18 ಕ್ಷೇತ್ರಗಳ ರಾಜಕಾರಣ ! 

07-05-23 11:33 am       HK News Desk   ಕರ್ನಾಟಕ

ಬೆಂಗಳೂರು ನಗರ ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿ. 18 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ರಾಜಕೀಯದಲ್ಲಿ ಜಾರಕಿಹೊಳಿ ಸಹೋದರರು ಮತ್ತು ಕತ್ತಿ ಕುಟುಂಬದ ಪ್ರಾಬಲ್ಯವೇ ಅಧಿಕ. 

ಬೆಳಗಾವಿ, ಮೇ 7 : ಬೆಂಗಳೂರು ನಗರ ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿ. 18 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ರಾಜಕೀಯದಲ್ಲಿ ಜಾರಕಿಹೊಳಿ ಸಹೋದರರು ಮತ್ತು ಕತ್ತಿ ಕುಟುಂಬದ ಪ್ರಾಬಲ್ಯವೇ ಅಧಿಕ. 

ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದರೆ, ಅವರ ಹಿರಿಯ ಸಹೋದರ ಸತೀಶ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿದ್ದು ಇಡೀ ಜಿಲ್ಲೆಯಲ್ಲಿ ಪಕ್ಷದ ಹಿಡಿತ ಹೊಂದಿದ್ದಾರೆ. ಒಂದೇ ಕುಟುಂಬದವರಾದರೂ, ಈ ಮೂವರೂ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಲ್ಲಿ ಸಚಿವರಾಗಿದ್ದರು. ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಮತ್ತು ಅರಭಾವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ, ಸತೀಶ್ ಯಮಕನಮರಡಿಯಿಂದ ಸ್ಪರ್ಧಿಸುತ್ತಿದ್ದಾರೆ.

Ex-Karnataka Dy CM Laxman Savadi quits BJP over ticket denial, says not one  to go around with begging bowl - India Today 

ಈ ಬಾರಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತನಗೆ ಟಿಕೆಟ್ ಸಿಗದ ಸಿಟ್ಟಿನಲ್ಲಿ ಬಿಜೆಪಿ ತೊರೆದಿದ್ದು, ಇದಕ್ಕೆ ರಮೇಶ್ ಜಾರಕಿಹೊಳಿ ಅವರ ಶಕ್ತಿಯೇ ಕಾರಣ ಎನ್ನಲಾಗುತ್ತಿದೆ. ಸವದಿ ಅವರು ಈಗ ಅಥಣಿಯಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದರೆ‌, ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ಮಹೇಶ್ ಕುಮಠಳ್ಳಿ, ರಮೇಶ್ ಜಾರಕಿಹೊಳಿ ಆಪ್ತರು. ಜಾರಕಿಹೊಳಿಯೇ ಕುಮಟಳ್ಳಿಗೆ ಪಟ್ಟು ಹಿಡಿದು ಸೀಟು ಕೊಡಿಸಿದ್ದರು. 

ಜಾರಕಿಹೊಳಿ ಸಹೋದರರು ಸಕ್ಕರೆ ಉದ್ಯಮಿಗಳಾಗಿದ್ದು, ಈ ಕ್ಷೇತ್ರದಲ್ಲಿ ವರ್ಣರಂಜಿತ ಇತಿಹಾಸವನ್ನು ಹೊಂದಿದ್ದಾರೆ. ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿದವರಾಗಿದ್ದರೂ, ಮೀಸಲು ಕ್ಷೇತ್ರ ಹೊರತಾಗಿಯೂ ಸ್ಪರ್ಧಿಸಿ ಗೆದ್ದಿದ್ದು ಇಡೀ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವುದು ಕುಟುಂಬದ ಗಟ್ಟಿತನ‌. ಒಡಹುಟ್ಟಿದವರೇ ಆಗಿದ್ದರೂ ವಿರೋಧಿ ಪಕ್ಷಗಳಲ್ಲಿದ್ದು ತಂತ್ರ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಇವರ ಹಣ ಮತ್ತು ತೋಳ್ಬಲವು ಈ ಸಲದ ಚುನಾವಣೆ ಮೇಲೆ ಪ್ರಭಾವ ಬೀರುತ್ತಿದೆ. 

ಈ ಮಧ್ಯೆ, ಜಾರಕಿಹೊಳಿ ಕುಟುಂಬದಷ್ಟೇ ಪ್ರಾಬಲ್ಯ ಹೊಂದಿರುವ ಲಿಂಗಾಯತ ಸಮುದಾಯದ ರಮೇಶ್ ಕತ್ತಿ ಅವರದ್ದೂ ಪ್ರಬಲ ಕುಟುಂಬವಾಗಿದೆ. ಆದರೆ, ಎಂಟು ಅವಧಿಯ ಶಾಸಕ ಮತ್ತು ಆರು ಬಾರಿ ಸಚಿವರಾಗಿದ್ದ ಉಮೇಶ್ ಕತ್ತಿ ಅವರ ನಿಧನವು ಈ ಕುಟುಂಬದ ಪ್ರಭಾವವನ್ನು ಕುಗ್ಗಿಸಿದೆ. ಉಮೇಶ್ ಕತ್ತಿ ಅವರ ಸಹೋದರ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ಅವರು ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ. ಉಮೇಶ ಕತ್ತಿ ಅವರ ಅವರ ಪುತ್ರ ನಿಖಿಲ್ ತಮ್ಮ ತಂದೆ ಪ್ರತಿನಿಧಿಸಿದ್ದ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.  

ಈ ಭಾಗದಲ್ಲಿ ಜೊಲ್ಲೆ ಕುಟುಂಬವೂ ಪ್ರಬಲವಾಗಿದ್ದು, ಧಾರ್ಮಿಕ ಮತ್ತು ದತ್ತಿ ಸಚಿವೆ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಜನಾದೇಶ ಬಯಸಿದ್ದಾರೆ. ಅವರ ಪತಿ ಆನಂದ ಜೊಲ್ಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಸಂಸದರಾಗಿದ್ದಾರೆ.

ಬೆಳಗಾವಿ ಜಿಲ್ಲೆ 18 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಅದರಲ್ಲಿ 13 ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದೆ. ಆದರೆ ಕೇಂದ್ರ ರೈಲ್ವೆ ಖಾತೆ ಮಾಜಿ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಉಮೇಶ ಕತ್ತಿ ನಿಧನದಿಂದಾಗಿ ಸಮುದಾಯವು ತನ್ನ ಇಬ್ಬರು ಪ್ರಬಲ ನಾಯಕರನ್ನು ಕಳೆದುಕೊಂಡಿದೆ. ಹೀಗಾಗಿ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಕೇವಲ ರಮೇಶ್ ಜಾರಕಿಹೊಳಿ ಮತ್ತು ರಮೇಶ್ ಕತ್ತಿ ಅವರನ್ನಷ್ಟೇ ನಂಬಿಕೊಂಡಿದೆ. ಬೆಳಗಾವಿ ಹಿಂದೆ ಬಿಜೆಪಿ ಭದ್ರಕೋಟೆಯಾಗಿತ್ತು. ಈ ಬಾರಿ ಲಕ್ಷ್ಮಣ ಸವದಿ ಅವರ ಪಕ್ಷಾಂತರ ಸೇರಿದಂತೆ ಲಿಂಗಾಯತ, ಪಂಚಮಸಾಲಿಗಳ ನಿರಾಸಕ್ತಿ ಕೇಸರಿ ಪಕ್ಷಕ್ಕೆ ಪರಿಸ್ಥಿತಿ ಕಠಿಣವಾಗಲು ಕಾರಣವಾಗಿವೆ.

Lingayat dominated Belgaum; 18 constituency are under the control of Ramesh jarkiholi family.