ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ ; ಅವರಿಗೆ ಮಾನಸಿಕ ಸ್ಥಿಮಿತತೆ ಇಲ್ಲ ಎಂದ ಸಿದ್ದು , ಟ್ವಿಟರ್ ನಲ್ಲಿ  ಸಿಎಂ VS  ಕುಮಾರಸ್ವಾಮಿ ಫೈಟ್ 

08-08-23 07:10 pm       Bangalore Correspondent   ಕರ್ನಾಟಕ

ಕೃಷಿ ಸಚಿವ ಚಲುವರಾಯ ಸ್ವಾಮಿ ಅವರ ವಿರುದ್ಧ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಈ ಪತ್ರವೇ ನಕಲಿ ಎಂದು ಹೇಳಿದ್ದರು.

ಬೆಂಗಳೂರು, ಆಗಸ್ಟ್ 8: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವೆ ಟ್ವೀಟ್ ವಾರ್‌  ಜೋರಾಗಿದೆ. ಸೋಮವಾರ ಮಧ್ಯರಾತ್ರಿ ಕಾಂಬೋಡಿಯಾಕ್ಕೆ  ಪ್ರಯಾಣ ಬೆಳೆಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ನಕಲಿ ಸಂವಿಧಾನ ತಜ್ಞ ಎಂದು ಕರೆದಿದ್ದರೆ, ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೃಷಿ ಸಚಿವ ಚಲುವರಾಯ ಸ್ವಾಮಿ ಅವರ ವಿರುದ್ಧ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಈ ಪತ್ರವೇ ನಕಲಿ ಎಂದು ಹೇಳಿದ್ದರು. ಇದಕ್ಕೆ ಆಕ್ರೋಶದಿಂದ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಮಾನಗೇಡಿ ಕೃತ್ಯಗಳನ್ನು ಸಮರ್ಥಿಸುವ ಲಜ್ಜೆಗೇಡಿ ಮುಖ್ಯಮಂತ್ರಿ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಅವರು ಮಾನಸಿಕ ಅಸ್ವಸ್ಥತೆಯಿಂದ ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

ಸಿದ್ದರಾಮಯ್ಯ ಅವರ ಮೇಲೆ ಎಚ್‌.ಡಿ.ಕೆ. ಮಾಡಿದ ವಾಗ್ದಾಳಿ ಏನೇನು?

  • ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ!! ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ 'ಸಿದ್ದಕಲೆ' ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ.
  • ನಕಲಿ ಪತ್ರ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ? ಸುಳ್ಳಿನ ಪತ್ರಕ್ಕೆ ಮಾನ್ಯ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ? ರಾಜಧರ್ಮದ ಪ್ರವಚನಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದು ತರವೇ? ಸ್ವಯಂ ಘೋಷಿತ ನಕಲಿ ಸಂವಿಧಾನ ತಜ್ಞನಿಗೆ ಇದು ಭೂಷಣವಲ್ಲ.
  • ಕಂಡೋರ ಭುಜದ ಮೇಲೆ ಬಂದೂಕಿಟ್ಟು ಇನ್ನೊಬ್ಬರ ರಾಜಕೀಯ ಜೀವನ ಎತ್ತಿಬಿಡುವ ನಿಮ್ಮಂಥ 'ಎತ್ತುವಳಿ ಗಿರಾಕಿ'ಗೆ ನಕಲಿಪತ್ರಗಳ ಸೃಷ್ಟಿ ಬೆಣ್ಣೆ ಕಡಿದಷ್ಟೇ ಸಲೀಸು. ಮತ್ತೊಬ್ಬರ ಶ್ರಮದ ಬೆವರೇ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹವಿಸ್ಸು.
  • ನಿಮ್ಮ ಸಚಿವರ ವಿರುದ್ಧ ನಿಮ್ಮ@INCKarnataka ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ 'ನಕಲಿರಾಮ'ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ 'ಅಸಲಿ'ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ?
  • ನಿಮ್ಮ ರಾಜಕೀಯ ಬದುಕಿಗೆ ಬ್ಲ್ಯಾಕ್'ಮೇಲೇ ಬಂಡವಾಳ. ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ 'ಅಪ್ಪಯ್ಯ ಮತ್ತು ಅತೀಂದ್ರನ ಆಟಾಟೋಪ' ಕಂಡು ಹೌಹಾರಿದವರು ಯಾರು? ವರ್ಗಾವಣೆ ಪಟ್ಟಿಗೆ ಅಲ್ಲಿ ಬಿದ್ದ ಟಿಕ್ಕುಗಳ ಲೆಕ್ಕ ಹೇಳಬೇಕಾ ಟಿಕ್ ಟಿಕ್ ಸಿದ್ದರಾಮಯ್ಯ??

ಇದಕ್ಕೆ ಸಿದ್ದರಾಮಯ್ಯ ಅವರು ನೀಡಿದ ಪ್ರತಿಕ್ರಿಯೆ ಏನು?

ಸನ್ಮಾನ್ಯ @hd_kumaraswamy ಅವರೇ, ಇತ್ತೀಚೆಗೆ ನೀವು ನನ್ನ ವಿರುದ್ಧ ಮಾಡುತ್ತಿರುವ ವೈಯಕ್ತಿಕ ಮಟ್ಟದ ಆರೋಪಗಳು ಮತ್ತು ಬಳಸುತ್ತಿರುವ ಭಾಷೆಯನ್ನು ಗಮನಿಸಿದರೆ ಚುನಾವಣಾ ಸೋಲಿನ ಆಘಾತದಿಂದಾಗಿ ನೀವು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಶೀಘ್ರವಾಗಿ ಗುಣಮುಖರಾಗಿ ಎಂದಷ್ಟೇ ನಾನು ಹಾರೈಸಬಲ್ಲೆ. ಇನ್ನು ನೀವು ಪ್ರಸ್ತಾಪಿಸಿರುವ ಶಾಸಕರ ಪತ್ರದ ನಕಲಿ-ಅಸಲಿ ವಿಚಾರ ಶೀಘ್ರದಲ್ಲಿಯೇ ತನಿಖೆಯಿಂದ ಹೊರಬೀಳಲಿದೆ.

Tweet War Between Siddaramaiah and HD Kumaraswamy Continues.