No reinvestigation of Sowjanya murder and rape case: ಸೌಜನ್ಯಾ ಪ್ರಕರಣ ಮುಗಿದ ಅಧ್ಯಾಯ, ಮರು ತನಿಖೆ ಪ್ರಸ್ತಾಪ ಇಲ್ಲ ಎಂದ ಗೃಹ ಸಚಿವ ಪರಮೇಶ್ವರ್ 

19-08-23 04:30 pm       Bangalore Correspondent   ಕರ್ನಾಟಕ

ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಮರು ತನಿಖೆಯ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. 

ಬೆಂಗಳೂರು, ಆಗಸ್ಟ್ 19:  ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಮರು ತನಿಖೆಯ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. 

ಧಾರವಾಡಕ್ಕೆ ಭೇಟಿ  ನೀಡಿದ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಕೊಲೆ ಪ್ರಕರಣವು ಕಾನೂನು ನೆಲೆಯಲ್ಲಿ ಪೂರ್ಣಗೊಂಡಿದೆ. ಮರು ತನಿಖೆ ಆಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ. ಸಾರ್ವಜನಿಕ ವಲಯದಲ್ಲಿ ಪರ- ವಿರೋಧ ಇದ್ದೇ ಇರುತ್ತದೆ. ಸದ್ಯಕ್ಕೆ ಈ ಪ್ರಕರಣ ಮುಗಿದ ಅಧ್ಯಾಯ. ಸರಕಾರ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ. 

ಪಿಎಸ್ಐ ನೇಮಕಾತಿ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಮರು ಪರೀಕ್ಷೆ ನಡೆಸಬಾರದು ಎಂದು ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸರಕಾರ ಈ ಬಗ್ಗೆ ತನ್ನ ನಿಲುವು ತಿಳಿಸುವಂತೆ ನ್ಯಾಯಾಲಯ ಹೇಳಿತ್ತು. ನಾವು ಮರು ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದೇವೆ ಎಂದು ಆ ಕುರಿತ ಪ್ರಶ್ನೆಗೆ ಉತ್ತರಿಸಿದರು. 

ಸೌಜನ್ಯಾ ಕೊಲೆ ಪ್ರಕರಣದಲ್ಲಿ ರಾಜ್ಯದೆಲ್ಲೆಡೆ ಪ್ರತಿಭಟನೆ, ಮರು ತನಿಖೆಯಾಗಬೇಕೆಂದು ಆಗ್ರಹ ಕೇಳಿಬರುತ್ತಿದ್ದರೂ, ಆ ಬಗ್ಗೆ ನಿರ್ಲಕ್ಷ್ಯ ಸೂಚಿಸುವ ರೀತಿ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಪ್ರಕರಣ ಮುಗಿದು ಹೋದ ಅಧ್ಯಾಯ ಎನ್ನುವ ಮೂಲಕ ಮರು ತನಿಖೆಗೆ ಆದೇಶ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಕರಾವಳಿ ಭಾಗದಲ್ಲಿ ದಿನಕ್ಕೊಂದು ಕಡೆ ಪ್ರತಿಭಟನೆ ನಡೆಯುತ್ತಿದ್ದರೂ, ಮರು ತನಿಖೆ ಆಗಬೇಕೆಂದು ಬೆಳ್ತಂಗಡಿಯ ಹಾಲಿ ಶಾಸಕರು, ಮಾಜಿ ಶಾಸಕರು, ಧರ್ಮಸ್ಥಳದ ಕಡೆಯವರೆಲ್ಲ ಆಗ್ರಹ ಮಾಡಿದರೂ ಕಾಂಗ್ರೆಸ್ ಸರ್ಕಾರ ಮಾತ್ರ ನಗಣ್ಯ ಮಾಡಿರುವುದು ಕುತೂಹಲ ಮೂಡಿಸಿದೆ.

No reinvestigation of Sowjanya murder and rape case says home minister Parmeshwar.