ರಾಜ್ಯ ಬಿಜೆಪಿ ನಾಯಕರು ಬೀದಿಗೆ! ಹತ್ತಿರಕ್ಕೂ ಬಿಟ್ಟುಕೊಳ್ಳದ ಪ್ರಧಾನಿ ಮೋದಿ ; ಬ್ಯಾರಿಕೇಡ್ ಬಳಿ ನಿಂತು ಕೈಬೀಸಿದ ನಾಯಕರು, ರಾಜ್ಯ ಬಿಜೆಪಿ ಅಬ್ಬೇಪಾರಿ ಎಂದು ಕಾಂಗ್ರೆಸ್ ಟೀಕೆ 

26-08-23 01:51 pm       Bangalore Correspondent   ಕರ್ನಾಟಕ

ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಬರಲು ಅವಕಾಶ ಕೊಟ್ಟಿಲ್ಲ.

ಬೆಂಗಳೂರು, ಆಗಸ್ಟ್ 26: ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಬರಲು ಅವಕಾಶ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮಾಜಿ ಸಚಿವ ಅಶೋಕ್ ಆದಿಯಾಗಿ ಎಲ್ಲರೂ ಜನರ ನಡುವೆ ಬೀದಿಯಲ್ಲಿ ನಿಂತು ಮೋದಿಗೆ ಕೈಬೀಸುವ ಫೋಟೊ ವೈರಲ್ ಆಗಿದೆ. ರಾಜ್ಯ ಕಾಂಗ್ರೆಸ್, ಇದೇ ಫೋಟೊ ಮುಂದಿಟ್ಟು ಬಿಜೆಪಿ ರಾಜ್ಯ ನಾಯಕರನ್ನು ಮೋದಿ ಬೀದಿಗೆ ತಳ್ಳಿದ್ದಾರೆ ಎಂದು ಟೀಕೆ ಮಾಡಿದೆ. 

ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವ ವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆಯೂ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ!ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ!  @BJP4Karnataka ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. 

ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವರುಗಳು, ಹಾಲಿ ಶಾಸಕರುಗಳು, ಹೀಗೆ ಬೀದಿಪಾಲಾಗಿದ್ದಾರೆ ಎಂದರೆ "ಸರ್ವಾಧಿಕಾರಿ"ಯ ಮೊದಲ ಬಲಿಪಶುಗಳು ಬಿಜೆಪಿಗರೇ ಅಲ್ಲವೇ? ಆತ್ಮ ಗೌರವ, ಸ್ವಾಭಿಮಾನವಿಲ್ಲದೆ ಕೈಬೀಸುತ್ತಿದ್ದಾರೆ ಎಂದರೆ ಗುಲಾಮಗಿರಿಯ ಪರಮಾವಧಿಗೆ ತಲುಪಿದ್ದಾರೆ ಎಂದರ್ಥವಲ್ಲವೇ @BJP4Karnataka ? ಎಂದು ಮೊನಚು ಮಾತುಗಳಿಂದ ವ್ಯಂಗ್ಯ ಮಾಡಿದೆ. 

ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿ, ರಾಜಕೀಯವಾಗಿ, ಸೈದ್ಧಾಂತಿಕವಾಗಿ ವಿರೋಧಿಗಳಾಗಿದ್ದರೂ @BJP4Karnataka ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ! ಪ್ರಧಾನಿ ಮುಂದೆ ಬ್ಯಾರಿಕೇಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವವನ್ನು ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ. ಹೈಕಮಾಂಡ್‌ನಿಂದ ಇಷ್ಟೊಂದು ತಿರಸ್ಕಾರಕ್ಕೆ ಒಳಪಟ್ಟಿರುವಾಗ "ವಿರೋಧ ಪಕ್ಷದ ನಾಯಕ"ನ ಆಯ್ಕೆ ಸಾಧ್ಯವಾಗುವುದೇ?

"ಈಗ ಸ್ವತಃ ಬಿಜೆಪಿಗರೂ ಸರ್ವಾಧಿಕಾರದ ಸಂತ್ರಸ್ತರಾಗಿದ್ದಾರೆ" ಬೀದಿಯಲ್ಲಿ ನಿಂತ ಬಿಜೆಪಿ ನಾಯಕರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಲ್ಲ, ಇದು ಮತ ನೀಡಿದ ಮತದಾರರಿಗೆ ಅವಮಾನ, ಕನ್ನಡಿಗರಿಗೆ ಅವಮಾನ, ಕಾರ್ಯಕರ್ತರಿಗೆ ಅವಮಾನ ಎಂದು ಹೀಗಳೆದಿದ್ದಾರೆ. 

ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, ISRO ವಿಜ್ಞಾನಿಗಳನ್ನು ಅಭಿನಂದಿಸಲು ಆಗಮಿಸಿದ್ದ ಮೋದಿಯವರನ್ನು ಸ್ವಾಗತಿಸಲು ಸ್ವತಃ ರಾಜ್ಯ BJP ನಾಯಕರಿಗೂ ಅವಕಾಶ ಕೊಟ್ಟಿಲ್ಲ. ರಾಜ್ಯಾಧ್ಯಕ್ಷ ⁦@nalinkateel⁩, ಬೊಮ್ಮಾಯಿಯವರನ್ನು ಕೂಡ ಹತ್ತಿರಕ್ಕೆ ಬಿಟ್ಟು ಕೊಳ್ಳಲಿಲ್ಲ. ರಾಜ್ಯ BJP ನಾಯಕರಿಗೆ ಇದಕ್ಕಿಂತ ಅಪಮಾನವುಂಟೆ? BJP ನಾಯಕರಿಗೆ ಕಿಂಚಿತ್ತಾದರೂ ಆತ್ಮಗೌರವ ಬೇಡವೆ? ಎಂದು ತಿವಿದಿದ್ದಾರೆ. 

ಶಿಷ್ಟಾಚಾರಕ್ಕೂ ರಾಜ್ಯ ನಾಯಕರನ್ನು ಕರೆದಿರಲಿಲ್ಲ..! 

ಶಿಷ್ಟಾಚಾರ ಪ್ರಕಾರ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಬೆಂಗಳೂರಿನ ಮೇಯರ್ ಪ್ರಧಾನಿ ಅವರನ್ನು ಸ್ವಾಗತಿಸಲು ಹೋಗಬೇಕಿತ್ತು. ಆದರೆ ಶಿಷ್ಟಾಚಾರ ಪಾಲನೆಗೂ ಇವರನ್ನು ಬರಹೇಳಿ ಪ್ರಧಾನಿ ಕಾರ್ಯಾಲಯದಿಂದ ರಾಜ್ಯದ ನಾಯಕರಿಗೆ ಆಹ್ವಾನ ಬರಬೇಕು. ಮುಖ್ಯಮಂತ್ರಿ, ರಾಜ್ಯಪಾಲರ ಕಚೇರಿಗೆ ಅಂತಹ ಆಮಂತ್ರಣ ಬಂದಿರಲಿಲ್ಲವಾದ್ದರಿಂದ ನಿನ್ನೆಯೇ ರಾಜ್ಯದ ನಾಯಕರು ಹೋಗುವುದಿಲ್ಲ ಎನ್ನುವುದು ದಿಟವಾಗಿತ್ತು. ಜೊತೆಗೆ ರಾಜ್ಯದ ಯಾವೊಬ್ಬ ಬಿಜೆಪಿ ನಾಯಕನಿಗೂ ಮೋದಿ ಸ್ವಾಗತ‌ ಕೋರಲು ಪ್ರಧಾನಿ ಸಚಿವಾಲಯದಿಂದ ಸೂಚನೆ ಬಂದಿರಲಿಲ್ಲ. ಹೀಗಾಗಿ ಮೋದಿ ಬರುವಾಗ ಬೀದಿಯಲ್ಲೇ ನಿಂತು ರಾಜ್ಯದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿ ಎಲ್ಲರೂ ಕೈಬೀಸಿದ್ದಾರೆ. ಇದರ ಫೋಟೊ ಜಾಲತಾಣದಲ್ಲಿ ವೈರಲ್ ಆಗಿದ್ದು ರಾಜ್ಯ ಬಿಜೆಪಿ ನಗೆಪಾಟಲಿಗೆ ಕಾರಣವಾಗಿದ್ದು ಕಾಂಗ್ರೆಸ್ ಇದನ್ನೇ ಟೀಕೆ ಮಾಡಿದ್ದಾರೆ. ರಾಜ್ಯ ಬಿಜೆಪಿಯನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದು ಎದ್ದು ಕಂಡಿದೆ. 

ಮುಖ್ಯಮಂತ್ರಿ, ರಾಜ್ಯಪಾಲರನ್ನು ಕರೆದಲ್ಲಿ ಬಿಜೆಪಿ ನಾಯಕರನ್ನೂ ಕರೆಯಬೇಕಾಗುತ್ತೆ. ರಾಜ್ಯ ಬಿಜೆಪಿ ನಾಯಕರನ್ನು ಮೂಲೆಗುಂಪು ಮಾಡಿದ್ದಾಗಿ ತೋರಿಸಲೆಂದೇ ಪ್ರಧಾನಿ ಮೋದಿ ಈ ನಡೆ ಇಟ್ಟಿದ್ದಾರೆಂದು ವಿಶ್ಲೇಷಣೆ ಮಾಡಲಾಗಿದೆ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ನೇಮಕ ಮಾಡದೆ ಅಸಡ್ಡೆ ತೋರಿದ್ದು ಇದೀಗ ಒಟ್ಟು ತಂಡವನ್ನೇ ಬದಿಗೆ ಸರಿಸಿದ್ದನ್ನು ಪರೋಕ್ಷವಾಗಿ ಮೋದಿ ತೋರಿಸಿದ್ದಾರೆ.

Modi in Bangalore to ISRO, BJP leaders outside Barricade, Photo viral, Congress mocks says pathetic condition of BJP leaders after major failure of elections in karnataka.