‘ನಲ್ವತ್ತು ಶಾಸಕರ’ ಪಟಾಕಿ ಹಾರಿಸಿದ ಸಂತೋಷ್ ; ರಾಜ್ಯ ಬಿಜೆಪಿಯ ಬಣ ರಾಜಕೀಯಕ್ಕೆ ನಿರ್ಲಕ್ಷ್ಯವೇ ಮೋದಿ ಮದ್ದು, ಹೈಕಮಾಂಡ್ ಲೆಕ್ಕವೇ ಬೇರೆ!

01-09-23 03:09 pm       Bangalore Correspondent   ಕರ್ನಾಟಕ

ಅಸೆಂಬ್ಲಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೀನಾಯ ಸೋಲಾದ ಬಳಿಕ ಮೊದಲ ಬಾರಿಗೆ ಎನ್ನುವಂತೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪಕ್ಷದ ಕಚೇರಿಯಲ್ಲಿ ಶಾಸಕರು, ಸಂಸದರು, ಪ್ರಮುಖ ನಾಯಕರ ಸಭೆ ನಡೆಸಿದ್ದಾರೆ.

ಬೆಂಗಳೂರು, ಸೆ.1: ಅಸೆಂಬ್ಲಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೀನಾಯ ಸೋಲಾದ ಬಳಿಕ ಮೊದಲ ಬಾರಿಗೆ ಎನ್ನುವಂತೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪಕ್ಷದ ಕಚೇರಿಯಲ್ಲಿ ಶಾಸಕರು, ಸಂಸದರು, ಪ್ರಮುಖ ನಾಯಕರ ಸಭೆ ನಡೆಸಿದ್ದಾರೆ. ಆದರೆ ಈ ಸಭೆಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿರುವ ಅತೃಪ್ತರು ಗೈರಾಗಿರುವುದು ನಾನಾ ಸಂಶಯಗಳನ್ನು ಮೂಡಿಸಿದೆ. ಇದೇ ಸಭೆಯಲ್ಲಿ ಆಪರೇಶನ್ ಹಸ್ತದ ಬಗ್ಗೆ ಮಾತನಾಡಿದ್ದ ಸಂತೋಷ್, ಆ ಬಗ್ಗೆ ಯಾರು ಕೂಡ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮಗೆ ಅದಕ್ಕಿಂತ ದೊಡ್ಡ ಮಟ್ಟದ ಆಪರೇಶನ್ ನಡೆಸೋದಕ್ಕೆ ಗೊತ್ತಿದೆ. ನಮ್ಮ ಜೊತೆಗೂ ಕಾಂಗ್ರೆಸಿನ 40ರಷ್ಟು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿ ಪಟಾಕಿ ಹಾರಿಸಿದ್ದು ಚರ್ಚೆಗೂ ಗ್ರಾಸವಾಗಿದೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿ.ಎಲ್ ಸಂತೋಷ್ ನಡೆಸಿರುವ ಸಭೆಯನ್ನು ಕಾಂಗ್ರೆಸ್ ಟೀಕಿಸಿದ್ದು, ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ತಾನೇ ನಾಯಕ ಎನ್ನುವ ರೀತಿ ತೋರಿಸಿಕೊಳ್ಳಲು ಸಂತೋಷ್ ಸಭೆ ನಡೆಸಿದ್ದಾರೆ. ನಾಲ್ಕು ಮತಗಳನ್ನು ಸೆಳೆಯಲಾಗದ, ಜನಪ್ರತಿನಿಧಿ ಆಗಲು ಯೋಗ್ಯತೆ ಇಲ್ಲದವರು ಸಭೆ ನಡೆಸಿರುವುದು ಬಿಜೆಪಿಯ ದುರ್ಗತಿ ಎಂದು ಗೇಲಿ ಮಾಡಿತ್ತು.  ಸಂತೋಷ್ ನಡೆಸಿರುವ ಈ ಸಭೆಯಲ್ಲಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಶಂಕರ್ ಪಾಟೀಲ್ ಮುನೇನಕೊಪ್ಪ, ರೇಣುಕಾಚಾರ್ಯ ಸೇರಿದಂತೆ ಕೆಲವರು ಭಾಗವಹಿಸಿಲ್ಲ. ಈಗಾಗಲೇ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಕದ ಬಡಿದಿದ್ದಾರೆ ಎನ್ನಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿರುವ ಫೋಟೋಗಳು ಹರಿದಾಡಿದ್ದವು.

Karnataka polls: No Modi factor, expect Muslims to back Congress, says  Siddaramaiah- The New Indian Express

DK Shivakumar's name dropped from advocates' conference over pending cases  | Bengaluru - Hindustan Times

ಇದಲ್ಲದೆ, ಬಿಜೆಪಿ ಸಭೆಯಲ್ಲಿ ಆಪರೇಶನ್ ಹಸ್ತ ಎನ್ನುವುದು ಗುಮ್ಮ ಅಷ್ಟೇ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಸಂತೋಷ್ ಹೇಳಿದ್ದಲ್ಲದೆ, ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ವರಿಷ್ಠರು ನೇಮಕ ಮಾಡಲಿದ್ದಾರೆ. ಆ ಕುರಿತ ಚಿಂತೆ ಬಿಟ್ಟು ಪಕ್ಷದ ನಾಯಕರು ಸಂಘಟನೆಯತ್ತ ಚಿತ್ತ ಹರಿಸುವಂತೆ ಸಲಹೆ ಮಾಡಿದ್ದಾರೆ. ಇದಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಆನಂತರ ರಾಜ್ಯ ಸರಕಾರದ ಸ್ಥಿತಿ ಏನಾಗುತ್ತೆ ಕಾದು ನೋಡಿ ಎನ್ನುವ ಮೂಲಕ ಪಕ್ಷದ ನಾಯಕರಲ್ಲಿ ಕುತೂಹಲ ಮೂಡಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದವರನ್ನು ಬಾಂಬೆ ಬಾಯ್ಸ್ ಎಂದು ಕಾಂಗ್ರೆಸ್ ಗೇಲಿ ಮಾಡುತ್ತಿರುವುದನ್ನು ಸಂತೋಷ್ ಉಲ್ಲೇಖಿಸಿದ್ದು ಹಾಗೆಂದು ಕರೆಯುವ ಮೂಲಕ ಅವರನ್ನು ಅವಮಾನಿಸಬೇಡಿ. ಅವರು ಪಕ್ಷ ಸೇರಿದ ಬಳಿಕ ನಮ್ಮವರೇ ಆಗಿರುತ್ತಾರೆ ಎಂದು ಓಲೈಸುವ ತಂತ್ರಗಾರಿಕೆ ಮಾಡಿದ್ದಾರೆ. ಇವೇನಿದ್ದರೂ, ಲೋಕಸಭೆ ಚುನಾವಣೆ ವೇಳೆಗೆ ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದಿದ್ದ 16 ಮಂದಿಯ ಪೈಕಿ ಹಲವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ವದಂತಿಯಂತೂ ದಟ್ಟವಾಗಿದೆ.

PM Modi to join Chandrayaan landing programme virtually from South Africa

ರಾಜ್ಯ ನಾಯಕರನ್ನು ಕಡೆಗಣಿಸಿದ್ದ ಮೋದಿ

ಇವೆಲ್ಲದರ ನಡುವೆ, ಮೊನ್ನೆ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿ ರಾಜ್ಯ ಬಿಜೆಪಿಯನ್ನೇ ಕಡೆಗಣಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯ ಬಿಜೆಪಿ ನಾಯಕರು ಬೀದಿಯಲ್ಲಿ ನಿಂತು ಮೋದಿ ಅವರಿಗೆ ಕೈಬೀಸಿದ್ದ ಫೋಟೋ ರಾಜ್ಯ ನಾಯಕರ ದೈನೇಸಿ ಸ್ಥಿತಿಯನ್ನು ತೋರಿಸಿದಂತಿತ್ತು. ಬೀದಿಗೆ ಬಿದ್ದ ರಾಜ್ಯ ನಾಯಕರು ಎನ್ನುವ ರೀತಿ ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಸ್ತೆ ಬದಿಯ ಬ್ಯಾರಿಕೇಡಲ್ಲಿ ಜನರ ನಡುವೆ ನಿಂತು ಕೈಬೀಸುವಂತಾಗಿದ್ದು, ಪ್ರಧಾನಿಯನ್ನು ಸ್ವಾಗತಿಸಲು ಹತ್ತಿರಕ್ಕೂ ಬಿಟ್ಟುಕೊಡದಿರುವುದು ಮೋದಿ ಇವರನ್ನು ದೂರ ಇಟ್ಟಿರುವುದನ್ನ ತೋರಿಸಿತ್ತು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೀವಿ ಎಂದು ಮೇಲಿನವರ ಕಿವಿ ತುಂಬಿರುವುದು, ಸುಳ್ಳು ಮಾಹಿತಿ ಕೊಟ್ಟು ರಾಜ್ಯದ ಸ್ಥಿತಿಗತಿ ಬಗ್ಗೆ ವಾಸ್ತವಾಂಶ ಮರೆ ಮಾಚಿರುವುದು ಪ್ರಧಾನಿ ಮೋದಿ ಸಿಟ್ಟಿಗೆ ಕಾರಣ ಎನ್ನುವ ಮಾತುಗಳು ಕೇಳಿಬಂದಿದ್ದವು.

Ex-Karnataka CM Bommai demands immediate halt to release of Cauvery water |  Bengaluru - Hindustan Times

Karnataka CM B S Yediyurappa Tests Positive For Covid-19 Again, To Be  Shifted To Bengaluru's Manipal

ಬಣ ರಾಜಕೀಯಕ್ಕೆ ನಿರ್ಲಕ್ಷ್ಯವೇ ಮದ್ದು

ಅದೇ ಸಿಟ್ಟಿನಲ್ಲಿ ರಾಜ್ಯ ಬಿಜೆಪಿಯನ್ನೇ ಮೋದಿ ಕಡೆಗಣಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೂ ಭರ್ತಿ ಮಾಡದೆ ಸಿಟ್ಟು ತೋರಿಸಿದ್ದಾರೆ ಎನ್ನಲಾಗಿತ್ತು. ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಸಂತೋಷ್ ತಮ್ಮದೇ ಬಣಗಳನ್ನು ಕಟ್ಟಿಕೊಂಡಿರುವುದು, ತಮ್ಮವರನ್ನೇ ಈ ಎರಡು ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಬೇಕೆಂದು ವರಿಷ್ಠರಿಗೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಇವರಿಬ್ಬರು ಕೊಟ್ಟ ಹೆಸರುಗಳನ್ನೂ ಒಬ್ಬರಿಗೊಬ್ಬರ ವಿರೋಧ ಹಿನ್ನೆಲೆಯಲ್ಲಿ ಮೇಲಿನವರು ಫೈನಲ್ ಮಾಡಿಲ್ಲ. ಇದೇ ವೇಳೆ, ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಮಾತು ಕೇಳದೆ ಅಭ್ಯರ್ಥಿ ಬದಲಾವಣೆ ಸೇರಿದಂತೆ ಎಲ್ಲವನ್ನೂ ಸಂತೋಷ್ ಅಣತಿಯಂತೇ ಮಾಡಲಾಗಿತ್ತು. ಇದೇ ಕಾರಣದಿಂದ ಪಕ್ಷಕ್ಕೆ ಹಿನ್ನಡೆಯಾಗಿತ್ತು ಎಂಬ ಅಂಶವನ್ನೂ ಯಡಿಯೂರಪ್ಪ ಕಡೆಯವರು ಹೈಕಮಾಂಡ್ ಬಳಿಗೆ ತಲುಪಿಸಿದ್ದಾರೆ. ಈ ಕಾರಣದಿಂದ ಬಿಎಲ್ ಸಂತೋಷ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿದ್ದರೂ ಇವರ ಮಾತನ್ನು ಅಮಿತ್ ಷಾ ಮತ್ತು ಮೋದಿ ಪೂರ್ತಿಯಾಗಿ ಕೇಳುವ ಸ್ಥಿತಿಯಲ್ಲಿ ಇಲ್ಲ.

Cyber security integral to national security, says Amit Shah - BusinessToday

ಮೋದಿ- ಷಾ ಜೋಡಿಗೆ ಗೆಲ್ಲುವುದಷ್ಟೇ ಲೆಕ್ಕ  

ಅತ್ತ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಮೋದಿ-ಷಾ ಜೋಡಿ ಲೋಕ ಗೆಲ್ಲುವತ್ತ ಗಮನ ನೆಟ್ಟಿದ್ದಾರೆ. ಬಿ.ಎಲ್ ಸಂತೋಷ್ ಹೋದಲ್ಲೆಲ್ಲ ಸೋಲಾಗಿರುವುದು ಮತ್ತು ಅವರು ಉಸ್ತುವಾರಿಯಾಗಿದ್ದ ರಾಜ್ಯಗಳಲ್ಲಿ ಬಣ ರಾಜಕಾರಣ ಸೃಷ್ಟಿಯಾಗಿರುವುದೂ ಹೈಕಮಾಂಡ್ ಗಮನಕ್ಕೆ ಬಂದಂತಿದೆ. ಇವೆಲ್ಲದರ ನಡುವೆ ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಮಾತನ್ನು ಧಿಕ್ಕರಿಸಿ ಮತ್ತೆ ಕೈಸುಟ್ಟುಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೂ ವರಿಷ್ಠರು ಬಂದಿದ್ದಾರೆ. ಅದಕ್ಕಾಗಿಯೇ ಮೋದಿ ಮೊನ್ನೆ ಬೆಂಗಳೂರಿಗೆ ಬಂದಾಗಲೂ ಸಂತೋಷ್ ಬಣದಲ್ಲಿ ಗುರುತಿಸಿಕೊಂಡ ಈಗಿನ ರಾಜ್ಯ ಬಿಜೆಪಿ ನಾಯಕರನ್ನೇ ದೂರವಿಟ್ಟು ಹೊಸ ಸಂದೇಶ ರವಾನಿಸಿದ್ದಾರೆ. ಹೈಕಮಾಂಡ್ ಅಂದ್ರೆ, ಸಂತೋಷ್ ಅಲ್ಲ, ಪಕ್ಷವೇ ಮುಖ್ಯ ಅನ್ನುವುದನ್ನು ಸೂಚ್ಯವಾಗಿ ತೋರಿಸಿದ್ದಾರೆ. ಇದನ್ನು ಅರಿತುಕೊಂಡ ಸಂತೋಷ್, ಬೆಂಗಳೂರಿನಲ್ಲಿ ದಿಢೀರ್ ಸಭೆ ನಡೆಸಿ ರಾಜ್ಯ ನಾಯಕರ ಮುಂದೆ ತನ್ನ ಛಾಪು ತೋರಿಸಲು ಮುಂದಾಗಿರುವಂತಿದೆ. ನಲ್ವತ್ತು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆಂದು ಹೇಳಿ ತನಗೂ ಸರಕಾರ ರಚಿಸುವ ತಾಕತ್ತು ಇದೆ ಅನ್ನುವ ಸಂದೇಶವನ್ನು ಕೇಂದ್ರಕ್ಕೆ ರವಾನಿಸಿರುವಂತಿದೆ.

Assembly elections 40 MLAs targeted by Modi and BL Santosh in Karnataka, detailed political story by Headline Karnataka.