Chaitra Kundapura arrest, latest News: ಚೈತ್ರಾ ಡೀಲ್ ಪ್ರಕರಣ ; ಎಂಟೆಕರೆ ಜಮೀನು ಖರೀದಿಸಿ ಕಬ್ಬು ಬೆಳೆದಿದ್ದ ಸ್ವಾಮೀಜಿ, ಹಿರೇಹಡಗಲಿಯಲ್ಲಿ ಪೆಟ್ರೋಲ್ ಪಂಪ್ ಉದ್ಯಮಕ್ಕೆ ಹಣ ಹೂಡಿಕೆ

14-09-23 10:40 pm       Bangalore Correspondent   ಕರ್ನಾಟಕ

ಚೈತ್ರಾ ಕುಂದಾಪುರ ಡೀಲ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಅಭಿನವ ಹಾಲಶ್ರೀ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.

ಬೆಂಗಳೂರು, ಸೆ.14: ಚೈತ್ರಾ ಕುಂದಾಪುರ ಡೀಲ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಅಭಿನವ ಹಾಲಶ್ರೀ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ, ಸ್ವಾಮೀಜಿ ಇತ್ತೀಚೆಗೆ ಹೈಫೈ ಜೀವನ ನಡೆಸಿಕೊಂಡಿದ್ದರು. ಅಲ್ಲದೆ, ಬೇರೆ ಬೇರೆ ಕಡೆ ಆಸ್ತಿ ಖರೀದಿಸಿದ್ದರು ಅನ್ನುವ ವಿಚಾರ ಬೆಳಕಿಗೆ ಬಂದಿದೆ.

ಉದ್ಯಮಿ ಗೋವಿಂದ ಬಾಬು ಪೂಜಾರಿ ಬಳಿಯಿಂದ ಸ್ವಾಮೀಜಿ ಒಂದೂವರೆ ಕೋಟಿ ಹಣ ಪಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ವಂಚನೆ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಮೂರನೇ ಆರೋಪಿಯಾಗಿದ್ದಾರೆ. ಸ್ವಾಮೀಜಿ, ಹಿರೇಹಡಗಲಿ ಬಳಿಯಲ್ಲಿ ಎಂಟು ಎಕರೆ ಜಮೀನು ಖರೀದಿಸಿದ್ದು ಆ ಜಾಗದಲ್ಲಿ ಕಬ್ಬು ಬೆಳೆದಿದ್ದಾರೆ. ಆ ಜಮೀನಿಗೆ 68 ಲಕ್ಷ ಹಣ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದಲ್ಲದೆ, ಪತ್ನಿಯ ತಂದೆಯಾದ ಮಲ್ಲಯ್ಯ ತುಂಬಿನಕೇರ ಅವರ ಹೆಸರಿನಲ್ಲಿ 40 ಲಕ್ಷ ರೂ. ಹಣ ನೀಡಿ ಜಾಗ ಖರೀದಿಸಿದ್ದು, ಅಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ಚಂದ್ರಪ್ಪ ಎಂಬವರ ಹೆಸರಿನಲ್ಲಿದ್ದ ಜಾಗವನ್ನು ಖರೀದಿಸಲಾಗಿತ್ತು. ಹಿರೇಹಡಗಲಿ ರಸ್ತೆಯ ಬದಿಯಲ್ಲಿ ಎಚ್ ಪಿ ಪೆಟ್ರೋಲ್ ಪಂಪ್ ನಿರ್ಮಾಣ ಆಗಿದ್ದು ಇದನ್ನು ಸ್ವಾಮೀಜಿ ಅವರೇ ನಿರ್ವಹಿಸುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ನೀಡಿದ್ದ ಹಣದಲ್ಲಿಯೇ ಸ್ವಾಮೀಜಿ ಹೂಡಿಕೆ ಮಾಡಿದ್ದು, ಉದ್ಯಮ ಆರಂಭಿಸಿದ್ದರು.

ಆಬಳಿಕ ಗೋವಿಂದ ಬಾಬು ಪೂಜಾರಿ ತನ್ನ ಹಣವನ್ನು ವಾಪಸ್ ಕೇಳಿದಾಗ, ಪೇಚಿಗೆ ಸಿಲುಕಿದ್ದ ಸ್ವಾಮೀಜಿ ಸ್ವಲ್ಪ ಹಣ ಕೊಟ್ಟು ಸಂಭಾಳಿಸಲು ಯತ್ನಿಸಿದ್ದರು. ಇದಕ್ಕಾಗಿ ಹತ್ತು ಲಕ್ಷ ಸಾಲವನ್ನು ತನ್ನ ಪರಿಚಿತರ ಬಳಿ ಸ್ವಾಮೀಜಿ ಕೇಳಿದ್ದರಂತೆ. ಸಾಲ ಪಡೆದು ಉದ್ಯಮಿಗೆ ಹಣ ನೀಡಲು ಮುಂದಾಗಿದ್ದರು ಎನ್ನಲಾಗುತ್ತಿದೆ. ಹಣ ಹಿಂತಿರುಗಿಸುವಂತೆ ಕೇಳಿಕೊಂಡರೂ ನೀಡದೇ ಇರುವುದರಿಂದ ಗೋವಿಂದ ಬಾಬು ಪೂಜಾರಿ ಪೊಲೀಸ್ ಕೇಸು ದಾಖಲಿಸಿದ್ದರು. ಈ ನಡುವೆ, ಗೋವಿಂದ ಬಾಬು ಪೂಜಾರಿ ಹಾಗೂ ಚೈತ್ರಾ ಕುಂದಾಪುರ ಅವರು ಅಭಿನವ ಹಾಲಶ್ರೀ ಅವರ ಮಠಕ್ಕೆ ಬಂದು ಸ್ವಾಮೀಜಿಯ ಆಶೀರ್ವಾದ ಪಡೆಯುವ ಫೋಟೋಗಳು ಹೊರಬಂದಿದ್ದು, ವೈರಲ್ ಆಗಿವೆ.

Chaitra Kundapura arrest, absconding swamiji purchased 8 acres land to grow sugarcane,  shocking details emerged. While Kundapura was arrested from Udupi late on Tuesday, the five accused have been held from different locations in the state. Police are on the lookout for a seer named Abhinava Halasri Swamiji and another accomplice.