Madhu Bangarappa and Pranavananda swamiji fight: ಪ್ರಣವಾನಂದ ಶ್ರೀಗಳಿಗೆ ಮದುವೆಯಾಗಿದೆ, ಅವರಿಗೆ ಸ್ವಾಮೀಜಿ ದೀಕ್ಷೆ ಕೊಟ್ಟಿದ್ದು ಯಾರು ;  ನಾನು ಮದುವೆಯಾಗಿದ್ದೇನೆ, ಹಾಗಂತ ನನ್ನ ಹೆಂಡತಿಯನ್ನು ಕರೆದುಕೊಂಡು ನಿಮ್ಮ ಮನೆಗೆ ಬಂದಿಲ್ಲ.! ಬಂಗಾರಪ್ಪ VS ಪ್ರಣವಾನಂದ ಫೈಟ್ 

16-09-23 11:05 pm       Bangalore Correspondent   ಕರ್ನಾಟಕ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ನನಗೆ ಜೀವ ಬೆದರಿಕೆ ಇದೆ. ಅವರ ಬೆಂಬಲಿಗರು ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು, ಸೆ.16: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ನನಗೆ ಜೀವ ಬೆದರಿಕೆ ಇದೆ. ಅವರ ಬೆಂಬಲಿಗರು ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಗ್ಗಟ್ಟಾಗುತ್ತಿರುವ ಅತಿ ಹಿಂದುಳಿದ ಸಮುದಾಯಗಳ ಶಕ್ತಿಯನ್ನು ನೋಡಿ ಹೆದರಿ ಈ ರೀತಿ ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಇಂಥ ಬೆದರಿಕೆಗಳಿಂದ ನನ್ನನ್ನು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡುವುದು ಸಾಧ್ಯವಿಲ್ಲ ಎಂದೂ ಸವಾಲು ಹಾಕಿದ್ದಾರೆ.

ಶ್ರೀ ಪ್ರಣವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತಳಸಮುದಾಯದ ನಾಯಕರ ಸಭೆಯೊಂದನ್ನು ಆಯೋಜಿಸಿದ್ದರು. ಅದರಲ್ಲಿ ಪ್ರಣವಾನಂದ ಶ್ರೀಗಳು ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ಅವರಿಗೆ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದಲ್ಲದೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಇದೇ ಕಾರ್ಯಕ್ರಮದಲ್ಲಿ ಬಿ.ಕೆ ಹರಿಪ್ರಸಾದ್‌ ಕೂಡಾ ಸಿದ್ದರಾಮಯ್ಯ ಅವರ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.

Karnataka News: Congress leader BK Hariprasad challenges CM Siddaramaiah,  says 'I know how to bring down…' | Mint

Congress leader BK Hariprasad's veiled critique targets Karnataka Chief  Minister Siddaramaiah | Mint

ಇದಾದ ಬಳಿಕ ಮಧು ಬಂಗಾರಪ್ಪ ಅವರ ಅಭಿಮಾನಿಗಳು ಪ್ರಣವಾನಂದ ಶ್ರೀ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಪ್ರಣವಾನಂದ ಶ್ರೀಗಳು ಸಮುದಾಯವನ್ನು ಒಡೆಯುತ್ತಿದ್ದಾರೆ, ಸಮುದಾಯವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದಾರೆ ಮಧು ಬಂಗಾರಪ್ಪ ಅವರ ಅಭಿಮಾನಿಗಳು ನಿಂದಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಪ್ರಣವಾನಂದ ಶ್ರೀಗಳಿಗೆ ಮದುವೆಯಾಗಿದೆ, ಅವರಿಗೆ ಸ್ವಾಮೀಜಿ ದೀಕ್ಷೆ ಕೊಟ್ಟಿದ್ದು ಯಾರು ಎನ್ನುವ ಪ್ರಶ್ನೆಗಳನ್ನು ಎತ್ತಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಣವಾನಂದ ಶ್ರೀಗಳು ಖಂಡಿಸಿದ್ದು, ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಮಧು ಬಂಗಾರಪ್ಪ ಅವರು ನಾಲಿಗೆ ಹರಿಬಿಡುವುದನ್ನು ನಿಲ್ಲಿಸಬೇಕು ಎಂದು ಅವರು ಕಾಂಗ್ರೆಸ್‌ ನಾಯಕರನ್ನೂ ಒತ್ತಾಯಿಸಿದ್ದಾರೆ. ಒಂದು ವೇಳೆ ಮಧು ಬಂಗಾರಪ್ಪ ಅವರನ್ನು ನಿಯಂತ್ರಿಸದಿದ್ದರೆ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕದಂತೆ ಸಮುದಾಯಕ್ಕೆ ಕರೆ ಕೊಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಚಿವ ಮಧು ಬಂಗಾರಪ್ಪ ಬೆಂಬಲಿಗರಿಂದ ಜೀವ ಬೆದರಿಕೆ: ಪ್ರಣವಾನಂದ ಸ್ವಾಮೀಜಿ ಆರೋಪ

ಪ್ರಣವಾನಂದ ಶ್ರೀಗಳ ಆಕ್ರೋಶದ ಮಾತುಗಳು ಇವು ;

ಸಚಿವ ಮಧು ಬಂಗಾರಪ್ಪ ಅವರಿಂದ ಜೀವ ಬೆದರಿಕೆ ಇದೆ. ಅವರ ಅಭಿಮಾನಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ನೀಡುತ್ತೇನೆ. ಜತೆಗೆ ಪೊಲೀಸರಿಗೂ ದೂರು ನೀಡುತ್ತೇನೆ. ಮುಖ್ಯಮಂತ್ರಿಗಳು, ಸ್ಪೀಕರ್‌ಗೂ ದೂರು ನೀಡುತ್ತೇನೆ.

ಮಧು ಅವರು ಈಡಿಗ ಸಮುದಾಯದ ನಾಯಕರಲ್ಲ. ದಿ. ಬಂಗಾರಪ್ಪನವರ ಹೆಸರು ಹೇಳಿಕೊಂಡು ಈಗ ಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಮಧು ಅವರು ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಂಡತಿ ಮಕ್ಕಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಾನು ಮದುವೆಯಾಗಿದ್ದು ಕದ್ದುಮುಚ್ಚಿ ಅಲ್ಲ. ಶರಣ ಬಸವೇಶ್ವರರ ಸನ್ನಿಧಾನದಲ್ಲಿ ಎಲ್ಲ ಮುಂದೆ ಮದುವೆ ಆಗಿದ್ದೇನೆ. ಮದುವೆ ಆದ್ಮೇಲೆ ಮಕ್ಕಳು ಮಾಡದೆ ಬೇರೇನು ಮಾಡಲಿಕ್ಕಾಗುತ್ತದೆ? ನಾನು ಮದುವೆಯಾಗಿದ್ದೇನೆ. ಹಾಗಂತ ನನ್ನ ಹೆಂಡತಿಯನ್ನು ಕರೆದುಕೊಂಡು ನಿಮ್ಮ ಮನೆಗೆ ಬಂದಿಲ್ಲ.

ನನಗೆ ದೀಕ್ಷೆ ಕೊಟ್ಟ ಸ್ವಾಮೀಜಿ ಯಾರು ಎಂದು ಕೇಳಿದ್ದಾರೆ. ನಾನು ಕೇರಳದವನು. ನಾರಾಯಣಗುರುಗಳ ಊರಿನವನು. ನನ್ನ ಹಿನ್ನೆಲೆಯನ್ನು ತನಿಖೆ ಮಾಡಿಸಿ. ನನಗೆ ನಿಮ್ಮ ಸರ್ಟಿಫಿಕೇಟ್‌ ಬೇಕಾಗಿಲ್ಲ.

ನಾನು ಸಮುದಾಯದ ಹೆಸರು ಹೇಳಿ ದುಡ್ಡು ಮಾಡಿದ್ದೇನೆ ಎಂದು ಹೇಳಿದ್ದಾರೆ. ನಾನು ಒಂದು ಮಠ ಕಟ್ಟಿಲ್ಲ, ಆಸ್ತಿ ಮಾಡಿಲ್ಲ. ನಾನು ಸಮುದಾಯದ ಭೂಮಿ ಕೊಳ್ಳೆಹೊಡೆದಿಲ್ಲ. ಸೈಟ್ ಮಾಡಿ ಮಾರಾಟ ಮಾಡಿಲ್ಲ. ಇವತ್ತು ನಾನು ಓಡಾಡುವ ಕಾರು ಕೂಡಾ ಬೇರೆ ಸಮುದಾಯದವರು ಕೊಟ್ಟಿದ್ದು. ನನ್ನ ಬಗ್ಗೆಯೂ ತನಿಖೆ ಮಾಡಿಸಲಿ.

ನಾನು ಇಲ್ಲಿನವನಲ್ಲ. ಕೇರಳದವನು. ನನ್ನಲ್ಲಿ ಹರಿಯುತ್ತಿರುವುದು ಈಡಿಗ ರಕ್ತ. ನಾನು ಸಮುದಾಯದ ಸ್ವಾಮೀಜಿ ಆಗಿದ್ದು ಕೇವಲ ಮೂರು ವರ್ಷದ ಹಿಂದೆ. ನಾನು ಸಮುದಾಯದಿಂದ ಯಾವುದೇ ಲಾಭ ಪಡೆದಿಲ್ಲ. ನಾನು ಸಮುದಾಯಕ್ಕಾಗಿ 900 ಕಿ.ಮೀ. ಪಾದಯಾತ್ರೆ ಮಾಡಿ ನಾರಾಯಣ ಗುರು ನಿಗಮ ಸ್ಥಾಪನೆಗೆ ಕಾರಣನಾಗಿದ್ದೇನೆ.

ನಾನು ವಿಶ್ವ ಹಿಂದೂ ಪರಿಷತ್‌ ಸದಸ್ಯ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾನು ಯಾವುದೇ ಸಂಘಟನೆ, ಪಕ್ಷದ ಸದಸ್ಯನಲ್ಲ. ಕೆಲವೊಂದು ಸಂಘಟನೆಗಳ ಜತೆ ಸಮ ಅಭಿಪ್ರಾಯ ಇರಬಹುದು ಅಷ್ಟೆ. ನನ್ನನ್ನು ಪ್ರಶ್ನೆ ಮಾಡುವ ಮಧು ಯಾವ ಪಕ್ಷದಲ್ಲಿದ್ದರು? ಕಾಂಗ್ರೆಸ್‌ಗೆ ಬಂದು ಎಷ್ಟು ಸಮಯವಾಯಿತು? ಮಧು ಅವರು ನನ್ನನ್ನು ಮತ್ತು ಸಮುದಾಯವನ್ನು ನಿಂದಿಸುವ ಕೆಲಸ ಮಾಡುತ್ತಿರುವುದು ಇದು ಮೊದಲಲ್ಲ. ಒಂದುವರೆ ವರ್ಷದ ಹಿಂದಿನಿಂದಲೇ ನಮ್ಮ ಹೋರಾಟ, ಪಾದಯಾತ್ರೆಗಳನ್ನೇ ನಿಂದನೆ ಮಾಡಿದ್ದರು. ನೀವು ನನ್ನನ್ನು ನಿಂದಿಸುವ ಮೂಲಕ ರಾಜ್ಯದಲ್ಲಿ ಆರಂಭವಾಗಿರುವ ಅತಿ ಹಿಂದುಳಿದ ವರ್ಗಗಳ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದೀರಿ. ಮಧು ಅವರು ಮಾಡುತ್ತಿರುವ ಕುತಂತ್ರ ಬುದ್ಧಿ ಫಲಿಸುವುದಿಲ್ಲ.

ಹರಿಪಸ್ರಾದ್ ಅವರು ಹಿಂದುಳಿದ ವರ್ಗದವರು. ಅವರಿಗೆ ಸ್ಥಾನಮಾನ ಕೇಳುವುದರಲ್ಲಿ ಏನು ತಪ್ಪಿದೆ? ಬೇರೆ ಸಮುದಾಯದವರು ಹೋರಾಟ ‌ಮಾಡಿದ್ದರಲ್ವಾ? ಮಧು ಬಂಗಾರಪ್ಪ ಅವರಿಗೆ ಈಗ ಅತಿ ಹಿಂದುಳಿದ ವರ್ಗಗಳ ಹೋರಾಟದಿಂದ ಹೆದರಿಕೆಯಾಗಿದೆ. ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿ ಬೇರೆಯವರಿಗೆ ಕೊಟ್ಟರೆ ಏನು ಗತಿ ಎನ್ನುವುದು ಅವರಿಗೆ ಭಯ ಶುರುವಾಗಿದೆ. ಕಾಂಗ್ರೆಸ್‌ ಪಕ್ಷ ಮಧು ಅವರನ್ನು ಕಂಟ್ರೋಲ್‌ ಮಾಡಬೇಕು. ಇಲ್ಲವಾದರೆ ಕೇವಲ ಸೊರಬ, ಶಿವಮೊಗ್ಗ ಅಲ್ಲ, ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಮತ ಹಾಕುವಂತೆ ಹೇಳಬೇಕಾದೀತು.

Madhu Bangarappa and Pranavananda swamiji fight, says have life threat. Madhu Bangarappa alleges that Pranavananda is married, for which Pranavananda has stated that i haven't married secretly.