Rss, Priyank Kharge: ಶಿಕ್ಷಣ ಸಂಸ್ಥೆ, ಪೊಲೀಸ್ ಠಾಣೆಯೊಳಗಿನ ಆರೆಸ್ಸೆಸ್ ಶಾಖೆಗಳನ್ನು ಬಂದ್ ಮಾಡಿಸ್ತೀವಿ ; ಸಚಿವ ಪ್ರಿಯಾಂಕ ಖರ್ಗೆ 

17-09-23 11:32 am       HK News Desk   ಕರ್ನಾಟಕ

ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದ ಶಿಕ್ಷಣ ಸಂಸ್ಥೆಗಳು, ಪೊಲೀಸ್‌ ಠಾಣೆಗಳಲ್ಲಿ ಆರ್‌ಎಸ್‌ಎಸ್‌ ಶಾಖೆಗಳು ನಡೆಯುತ್ತಿವೆ. ಇನ್ನು ಮುಂದೆ ಅವುಗಳನ್ನು ಬಂದ್‌ ಮಾಡಿಸಲಾಗುವುದು ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

ಕಲಬುರಗಿ, ಸೆ.17: ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದ ಶಿಕ್ಷಣ ಸಂಸ್ಥೆಗಳು, ಪೊಲೀಸ್‌ ಠಾಣೆಗಳಲ್ಲಿ ಆರ್‌ಎಸ್‌ಎಸ್‌ ಶಾಖೆಗಳು ನಡೆಯುತ್ತಿವೆ. ಇನ್ನು ಮುಂದೆ ಅವುಗಳನ್ನು ಬಂದ್‌ ಮಾಡಿಸಲಾಗುವುದು ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

ಹಲವು ಶಿಕ್ಷಣ ಸಂಸ್ಥೆಗಳು, ಪೊಲೀಸ್‌ ಠಾಣೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದು ಕಂಡುಬಂದಿದೆ. ಇನ್ನು ಮುಂದೆ ಅವೆಲ್ಲವೂ ಬಂದ್‌ ಆಗಲಿವೆ. ನಮ್ಮ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿ ಎಂದು ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ತರಲಾಗಿದೆ. ಆದರೆ, ಅಲ್ಲಿ ಹೆಚ್ಚಿನ ರಾಜಕೀಯ ನಡೆಯುತ್ತಿದೆ. ಅಲ್ಲಿ ಶಿಕ್ಷಣ ಹೊರತುಪಡಿಸಿ ಬೇರೆಲ್ಲ ನಡೆದಿದೆ. ಕಳೆದ ವರ್ಷ ಆರ್‌ಎಸ್‌ಎಸ್‌ ಮಾರ್ಚ್ ಮಾಡಲಾಗಿದೆ. ಏನೇ ಆದರೂ ಅಲ್ಲಿ ಆರ್‌ಎಸ್‌ಎಸ್‌ ಕಚೇರಿ ತೆರೆಯಲು ಬಿಡುವುದಿಲ್ಲ ಎಂದು ಗುಡುಗಿದರು.

ಆರ್‌ಎಸ್‌ಎಸ್‌ ಸಿದ್ಧಾಂತದಿಂದ ಯಾರು ಉದ್ಧಾರ ಆಗಿದ್ದಾರೆ ಎಂದು ಪ್ರಶ್ನಿಸಿದ ಅವರು ಆರ್‌ಎಸ್‌ಎಸ್‌ ತತ್ವದ ಬಗ್ಗೆ ಮಾತಾಡೋದಕ್ಕೆ ಹೆದರಿಕೆಯೂ ಇಲ್ಲ. ಕೇಂದ್ರೀಯ ವಿವಿ, ಜೆಎನ್‌ಯು ವಿವಿ ಆಗುತ್ತಿದೆ ಎನ್ನುತ್ತಾರೆ. ಆದರೆ ಅದೇ ಜೆಎನ್‌ಯುನಿಂದ ನಿಮ್ಮ ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್‌ ಹೊರ ಬಂದಿಲ್ಲವೇ. ತಪ್ಪು ಯಾರೇ ಮಾಡಿದರೂ ತಪ್ಪೇ. ವಿವಿ ಶೈಕ್ಷಣಿಕ ಕೇಂದ್ರವಾಗಬೇಕು ಹೊರತು ರಾಜಕೀಯ ಅಡ್ಡೆಯಾಗಬಾರದು ಎಂದು ಪರೋಕ್ಷವಾಗಿ ಬಿಜೆಪಿಯನ್ನು ತಿವಿದಿದ್ದಾರೆ. 
 
ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್‌ ಮೈತ್ರಿಯಿಂದ ಬಹುದೊಡ್ಡ ಸಾಧನೆ ಮಾಡ್ತೀವಿ ಅಂತ ಹೊರಟಿದ್ದಾರೆ. ಅವರ ಮೈತ್ರಿಯಿಂದ ಕಾಂಗ್ರೆಸ್‌ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. ಮೊದಲು ಜೆಡಿಎಸ್‌ನವರು ಯಾರ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಿಕೊಳ್ಳಲಿ. ಜೆಡಿಎಸ್‌ನವರು ಬಿಜೆಪಿಯ ಬಿ ಟೀಮ್‌ ಅಷ್ಟೇ ಎಂದರು.

ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿ ಸೀಟು ಮಾರಾಟಕ್ಕಿದೆ ಎಂದು ಹೇಳಿದವರು ಯಾರು, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ರಾಜಕೀಯವಾಗಿ ಮುಗಿಸುತ್ತಿದ್ದಾರೆಂದು ದಿನಂಪ್ರತಿ ಅಲ್ಲಲ್ಲಿ ಒದರಾಡಿದವರು ಯಾರು, ಇಂತಹವರ ಜೊತೆ ಮೈತ್ರಿ ಮಾಡಲು ಹೊರಟವರು ತಮ್ಮ ಪಕ್ಷದ ಸಿದ್ಧಾಂತ ಏನೆಂದು ನೆನಪಿಸಿಕೊಳ್ಳಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಗ್ಗೆ ಪರೋಕ್ಷವಾಗಿ ಟಾಂಗ್ ಇಟ್ಟಿದ್ದಾರೆ.

Rss units inside Educaiton institutions and police stations will be removed soon says Minister Priyank Kharge.