Arvind Bellad, Chaithra Kundapura, BJP: ಚೈತ್ರಾ ರೀತಿಯ ಜನ ಎಲ್ಲ ಪಕ್ಷದಲ್ಲು ಇರ್ತಾರೆ, ಜನರನ್ನು ಮೋಸ ಮಾಡೋದು ಇವ್ರ ಕೆಲಸ ; ಬಿಜೆಪಿ ಶಾಸಕ ಅರವಿಂದ ಬೆಲ್ಲದ 

18-09-23 05:31 pm       HK News Desk   ಕರ್ನಾಟಕ

ಚೈತ್ರಾ ಕುಂದಾಪುರ ರೀತಿಯ ಜನ ಎಲ್ಲಾ ಪಕ್ಷದಲ್ಲಿ ಇರುತ್ತಾರೆ. ದುಡ್ಡು ಮಾಡೋದು, ಜನರಿಗೆ ಮೋಸ ಮಾಡೋದು ಅವರ ಕೆಲಸ.

ಹುಬ್ಬಳ್ಳಿ, ಸೆ.18: ಚೈತ್ರಾ ಕುಂದಾಪುರ ರೀತಿಯ ಜನ ಎಲ್ಲಾ ಪಕ್ಷದಲ್ಲಿ ಇರುತ್ತಾರೆ. ದುಡ್ಡು ಮಾಡೋದು, ಜನರಿಗೆ ಮೋಸ ಮಾಡೋದು ಅವರ ಕೆಲಸ. ಇದು ಮೊದಲ ಘಟನೆ ಅಲ್ಲ. ಮೋಸ ಹೋಗುವವರು ಇರೋವರೆಗೂ ಇದು ಕೊನೆ ಆಗಲ್ಲ ಎಂದು ಬಿಜೆಪಿ ಹಿರಿಯ ಮುಖಂಡ, ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.‌

ಈ ಬಗ್ಗೆ ನಮ್ಮ ಪಕ್ಷ ಮೊದಲೆ ತಿಳಿಸಿತ್ತು. ಎಲ್ಲೆಲ್ಲೋ ದುಡ್ಡು ಮಾಡಿದವರು, ಹೇಗೆ ರಾಜಕೀಯ ಮಾಡಬೇಕು ಅಂತ ಗೊತ್ತಿಲ್ಲದವರು  ಈ ರೀತಿ ಮೋಸ ಹೋಗುತ್ತಾರೆ. ಇಂತಹ ಡಮ್ಮಿ ವ್ಯಕ್ತಿಗಳ ಜೊತೆಗೆ ಮೋಸ ಹೋಗುತ್ತಾರೆ. ಚೈತ್ರಾ ಕುಂದಾಪುರ ಬಿಜೆಪಿ ಪಕ್ಷದವರಲ್ಲ. ಪಕ್ಷ ಸಿದ್ಧಾಂತದ ಬಗ್ಗೆ ಮಾತನಾಡಿದ ತಕ್ಷಣ ಬಿಜೆಪಿಯವರಾಗಲ್ಲ. ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. 

ಟಿಕೇಟ್ ಪಡೆಯಲು ಒಂದು ಪದ್ದತಿಯಿದೆ. ಯಾವ ರಾಜಕೀಯ ಪಕ್ಷಗಳು ಇಂತಹ ಟೋಪಿ ಹಾಕುವವರನ್ನು ಬೆಳೆಸುವುದಿಲ್ಲ.‌ ಟಿಕೇಟ್ ಆಕಾಂಕ್ಷಿಗಳ ಅಡ್ವಾಂಟೇಜ್ ತೆಗೆದುಕೊಳ್ಳುವ ಜನ ಇವರು ಎಂದು ಬೆಲ್ಲದ ಅವರು ಮೂದಲಿಸಿದ್ದಾರೆ. 

ಜಗದೀಶ್ ಶೆಟ್ಟರ್ ಚೈತ್ರಾ ಡೀಲಿಂಗ್ ವಿಷಯದ ಬಗ್ಗೆ ವ್ಯಂಗ್ಯ ಮಾಡಿರುವ ಪ್ರಶ್ನೆಗೆ, ಶೆಟ್ಟರ್ ಈಗ ಕಾಂಗ್ರೆಸ್ ಸೇರಿದ್ದಾರೆ. ಅವರು ಕಾಂಗ್ರೆಸ್ ಬಗ್ಗೆ ಯೋಚನೆ ಮಾಡೋದು ಒಳ್ಳೆಯದು. ಬಿಜೆಪಿ ಬಗ್ಗೆ ದಿನಾ ಮಾತಾಡೋದು ನೋಡಿದ್ರೆ ಶೆಟ್ಟರ್ ಮನಸ್ಸು ಇನ್ನೂ ಬಿಜೆಪಿಯಲ್ಲಿದೆ ಅನ್ನಸ್ತೆ. ಅವರ ಬಗ್ಗೆ ಹೆಚ್ಚಿಗೆ ಮಾತನಾಡಲು ಹೋಗಲ್ಲ.‌ ಅದರ ಅವಶ್ಯಕತೆನೂ ಇಲ್ಲ ಎಂದು ಹೇಳಿದ್ದಾರೆ.

Arvind Bellad slams Chaithra Kundapura says there are fraudsters like this in all politically parties.