Halashree swamiji arrest story: ವೇಷ ಮರೆಸಿ ಕಾಶಿಗೆ ಹೊರಟಿದ್ದ ಹಾಲಶ್ರೀ ; ಪಕ್ಕಾ ಪ್ರವಾಸಿಗನ ಸೋಗಿನಲ್ಲಿ ಬರ್ಮುಡಾ ತೊಟ್ಟಿದ್ದ ಸ್ವಾಮೀಜಿ, ಕಾರು ಚಾಲಕನ ಫೋನ್ ನೀಡಿತ್ತು ಸುಳಿವು, ಒಡಿಶಾ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ ! 

19-09-23 10:42 pm       Bangalore Correspondent   ಕರ್ನಾಟಕ

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಡೀಲ್ ಹೆಸರಲ್ಲಿ ವಂಚಿಸಿ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಗ್ಯಾಂಗ್‍ನ ಮೂರನೇ ಆರೋಪಿ ಅಭಿನವ ಹಾಲಶ್ರೀ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ.

ಬೆಂಗಳೂರು, ಸೆ.19: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಡೀಲ್ ಹೆಸರಲ್ಲಿ ವಂಚಿಸಿ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಗ್ಯಾಂಗ್‍ನ ಮೂರನೇ ಆರೋಪಿ ಅಭಿನವ ಹಾಲಶ್ರೀ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ. ಬರ್ಮುಡಾ ಹಾಗೂ ಟೀ ಶರ್ಟ್ ಧರಿಸಿದ್ದ ಸ್ವಾಮೀಜಿ, ಆಗಾಗ ವೇಷ ಬದಲಿಸುತ್ತಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಆದರೆ ಕಡೆಗೂ ತನ್ನ ಪ್ಲಾನ್ ಕೈಕೊಟ್ಟಿತ್ತು.

Let Swamiji be caught, Names of 'big people' will come out: Chaitra  Kundapura- The New Indian Express 

ಪ್ರಕರಣ ದಾಖಲಾದ ಬೆನ್ನಲ್ಲೇ ಸ್ವಾಮೀಜಿಯೂ ಹಿರೇಹಡಗಲಿ ಮಠದಿಂದ ನಾಪತ್ತೆಯಾಗಿದ್ದರು. ಅಲ್ಲದೆ, ಸಿಸಿಬಿ ಕುಣಿಕೆಯಿಂದ ಜಾರಿಕೊಳ್ಳಲು ಭಾರೀ ಪ್ಲಾನ್ ಮಾಡಿಕೊಂಡಿದ್ದರು. ಪರಾರಿ ಆಗೋದಕ್ಕು ಮೊದಲು ಸಾಕಷ್ಟು ಪ್ಯಾಂಟ್, ಟೀ ಶರ್ಟ್, ಬರ್ಮುಡಾಗಳನ್ನು ಖರೀದಿಸಿದ್ದರು. ಅಲ್ಲದೆ, ನಾಲ್ಕು ಸಿಮ್, ಎರಡು ಪ್ರತ್ಯೇಕ ಮೊಬೈಲ್ಗಳನ್ನು ಖರೀದಿಸಿ ಎರಡು ಸಿಮ್ ಅನ್ನು ತನ್ನ ಕಾರು ಚಾಲಕನಿಗೆ ನೀಡಿದ್ದರು.‌

Karnataka High Court declares charge sheet filed by CCB invalid declaring  it not a police station. | Lawsisto Legal News

ಕಾರಿನಲ್ಲಿ ಹೋದರೆ ಸಿಕ್ಕಿಬೀಳಬಹುದು ಎಂದು ಬಸ್, ರೈಲನ್ನೇ ಪ್ರಯಾಣಕ್ಕೆ ಬಳಸಿಕೊಂಡಿದ್ದರು. ಇತ್ತ ಕಾರು ಚಾಲಕ ಸಿಕ್ಕಿಬೀಳುತ್ತಿದ್ದಂತೆ, ಹಾಲಶ್ರೀ ಹೈದರಾಬಾದ್ ಕಡೆಗೆ ತೆರಳಿದ್ದು ಪೊಲೀಸರಿಗೆ ಗೊತ್ತಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಆ ದಾರಿಯಲ್ಲಿ ಹುಡುಕಾಟ ನಡೆಸಿದ್ದರು. ಈ ನಡುವೆ, ಹಾಲಶ್ರೀ ಪ್ರತಿ ಬಾರಿ ತನ್ನ ಚಾಲಕನ ಜೊತೆಗೆ ಸಂಪರ್ಕಿಸಿ ಮಾತನಾಡುತ್ತಿದ್ದರು. ಈ ಮೊಬೈಲ್ ನಂಬರ್ ಬೇರೆ ಯಾರಲ್ಲೂ ಇಲ್ಲ ಎನ್ನುವ ಧೈರ್ಯದಲ್ಲಿ ಮಾತಾಡಿ, ಆಗುತ್ತಿರುವ ಬೆಳವಣಿಗೆ ತಿಳಿದುಕೊಳ್ಳುತ್ತಿದ್ದರು.‌ ಆದರೆ ಫೋನ್ ಸಂಪರ್ಕವೇ ಸ್ವಾಮೀಜಿ ಸುಳಿವನ್ನು ಪೊಲೀಸರಿಗೆ ನೀಡಿತ್ತು.

ಹಾಲಶ್ರೀ ತಾನೊಬ್ಬ ಸ್ವಾಮೀಜಿ ಎಂಬುದು ಜನರಿಗೆ ತಿಳಿಯದಂತೆ ಸಾಮಾನ್ಯರ ವೇಷದಲ್ಲಿ ರೈಲಿನಲ್ಲಿ ಸಂಚರಿಸುತ್ತಿದ್ದರು. ಪ್ಯಾಂಟ್, ಟೀ ಶರ್ಟ್, ಕೆಲವೊಮ್ಮೆ ಬರ್ಮುಡಾ ಹಾಕಿಕೊಂಡು ಸಾಮಾನ್ಯ ಪ್ರವಾಸಿಗರ ರೀತಿ ಬಿಂಬಿಸಿಕೊಳ್ಳುತ್ತಿದ್ದರು. ಒಡಿಶಾ ತೆರಳಿ ಅಲ್ಲಿಂದ ನೇರವಾಗಿ ಕಾಶಿಗೆ ತೆರಳಲು ತಯಾರಿ ನಡೆಸಿದ್ದಾಗಲೇ ಸಿಕ್ಕಿಬಿದ್ದಿದ್ದಾರೆ.  

ಮೊದಲಿಗೆ ಮೈಸೂರು, ಆನಂತರ ಹೈದ್ರಾಬಾದ್, ಪುರಿ ಗಂಜಾಮ್, ಕಟಕ್ ಮಾರ್ಗವಾಗಿ ಕಾಶಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಒಡಿಶಾದ ಕಟಕ್‍ನಲ್ಲಿದ್ದಾಗಲೇ ಸಿಸಿಬಿ ಖೆಡ್ಡಾಕ್ಕೆ ಸ್ವಾಮೀಜಿ ಬಿದ್ದಿದ್ದಾರೆ. ಒಡಿಶಾ ಪೊಲೀಸರ ಸಹಾಯದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಸಿಸಿಬಿ ಬಂಧಿಸಿದೆ. ಆರೋಪಿ ಜೊತೆಯಲ್ಲಿದ್ದ ಮತ್ತೋರ್ವ ವ್ಯಕ್ತಿಯನ್ನು ಸಹ ಅಧಿಕಾರಿಗಳು ಬಂಧಿಸಿದ್ದಾರೆ. ಹಾಲಶ್ರೀ ಪೊಲೀಸರ ಕಣ್ಣು ತಪ್ಪಿಸಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ರೈಲಿನಲ್ಲೇ ಪ್ರಯಾಣ ಮಾಡುತ್ತಿದ್ದರು. ಅಲ್ಲದೇ ನಾಲ್ಕು ಬೇಸಿಕ್ ಫೋನ್‍ಗಳನ್ನು ಬಳಕೆ ಮಾಡುತ್ತಿದ್ದರು. ಕೊನೆಯ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಹಾಲಶ್ರೀ ಬರ್ಮುಡಾದಲ್ಲಿದ್ದರು. ಇತ್ತ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟಿಗೆ ಸಲ್ಲಿಕೆಯಾಗಿದ್ದು ಜಾಮೀನು ಸಿಗೋ ವರೆಗೆ ತಲೆಮರೆಸಿಕೊಳ್ಳಲು ಪ್ಲಾನ್ ಮಾಡಿದ್ದರು. 

ಎರಡು ದಿನಗಳ ಹಿಂದೆ ಚೈತ್ರಾ, ಸ್ವಾಮೀಜಿ ಅರೆಸ್ಟ್ ಆದರೆ ದೊಡ್ಡ ದೊಡ್ಡವರ ಹೆಸರು ಹೊರ ಬರುತ್ತದೆ ಎಂದು ಹೇಳಿಕೆ ನೀಡಿದ್ದು ಭಾರೀ ಕುತೂಹಲ ಕೆರಳಿಸಿತ್ತು. ಇದೀಗ ಸ್ವಾಮೀಜಿ ಬಂಧನ ಆಗುತ್ತಿದ್ದಂತೆ ಹೊಸ ಬೆಳವಣಿಗೆ ಆಗಲಿದೆಯಾ, ದೊಡ್ಡವರು ಸಿಕ್ಕಿಬೀಳುತ್ತಾರೆಯೇ ಎಂಬ ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದೆ.

Chaitra kundapur case, master mind accused Thrilling story of how halashree swamiji was arrestes by CCB police in Odisha.