IT Raid Bangalore, Update: ಬೆಂಗಳೂರಿನಲ್ಲಿ ಮುಂದುವರಿದ ಐಟಿ ರೈಡ್, ಬಿಲ್ಡರ್‌ ಅಪಾರ್ಟ್‌ಮೆಂಟ್ ಮೇಲೆ ಐಟಿ ದಾಳಿ ; 40 ಕೋಟಿ ರೂ. ನಗದು ಪತ್ತೆ, 100 ಕೋಟಿ ದಾಟಿದ ಜಪ್ತಿಯ ಮೊತ್ತ !

16-10-23 01:37 pm       Bengalore Correspondeent   ಕರ್ನಾಟಕ

ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ಮುಂದುವರೆದಿದ್ದು, ಕಂತೆ ಕಂತೆ ನಗದು ಹಣ ಪತ್ತೆಯಾಗುತ್ತಲೇ ಇದೆ.

ಬೆಂಗಳೂರು, ಅ.16: ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ಮುಂದುವರೆದಿದ್ದು, ಕಂತೆ ಕಂತೆ ನಗದು ಹಣ ಪತ್ತೆಯಾಗುತ್ತಲೇ ಇದೆ.

ಭಾನುವಾರ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಬಿಲ್ಡರ್‌ವೊಬ್ಬರ ಅಪಾರ್ಟ್‌ಮೆಂಟ್ ಮೇಲೆ ನಡೆಸಿದ ದಾಳಿ ವೇಳೆ 40 ಕೋಟಿ ರೂ.ಗಿಂತ ಅಧಿಕ ನಗದು ಸಿಕ್ಕಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.

ಗುತ್ತಿಗೆದಾರ ಸಂತೋಷ ಕೃಷ್ಣಪ್ಪ ಅವರ ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ ಇಷ್ಟೊಂದು ಹಣ ಪತ್ತೆಯಾಗಿದೆ. ಈ ಹಣ ಪತ್ತೆಯಾಗುತ್ತಿದ್ದಂತೆ 6ಕ್ಕೂ ಹೆಚ್ಚು ಕಾರುಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ವೇಳೆ ಸಂತೋಷ್, ಕಾಂಗ್ರೆಸ್ ಮಾಜಿ ಎಂಎಲ್‌ಸಿಯೊಬ್ಬರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ಹಣದ ಮೂಲ ಕಂಡು ಹಿಡಿಯಲು ಮಾಜಿ ಎಂಎಲ್‌ಸಿ ಸಂಬಂಧಿಕರನ್ನು ಫ್ಲ್ಯಾಟ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಗುತ್ತಿಗೆದಾರ ಸಂತೋಷ ನಿವಾಸದಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು ಇಡೀ ದಿನ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಫ್ಲ್ಯಾಟ್‌ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ದಾಳಿ ಸಂದರ್ಭಗಳಲ್ಲಿ 32 ಬಾಕ್ಸ್‌ಗಳಲ್ಲಿ 40 ಕೋಟಿ ರೂ.ಗಿಂತಲೂ ಅಧಿಕ ಹಣ ಸಿಕ್ಕಿದೆ. ಸಂಜೆ 7 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ಪತ್ತೆಯಾಗಿರುವ ಹಣದ ಕುರಿತು ಮತ್ತಷ್ಟು ಮಾಹಿತಿ ನೀಡುವಂತೆ ಸಂತೋಷ್‌ಗೆ ನೋಟಿಸ್ ನೀಡಿದ್ದಾರೆ. ಇದೇ ವೇಳೆ ಹಲವು ದಾಖಲೆಗಳು, 3 ಟ್ರಂಕ್, 3 ಬ್ಯಾಗ್, 1 ಸೂಟ್‌ಕೇಸ್‌ಗಳಲ್ಲಿ ಹಣವನ್ನು ವಶಕ್ಕೆ ಪಡೆದು ಅಧಿಕಾರಿಗಳು ಕೊಂಡೊಯ್ದಿದ್ದಾರೆ.

IT Raids former Corporator residence recovered Rs 42 crore cash - The  Financial World

ನನಗೂ ಸಂತೋಷ್‌ಗೂ ಸಂಬಂಧವಿಲ್ಲ:

ಗುತ್ತಿಗೆದಾರ ಸಂತೋಷ್, ಕಾಂಗ್ರೆಸ್ ಮಾಜಿ ಎಂಎಲ್‌ಸಿ ಸಿ. ಕಾಂತರಾಜು ಅವರ ಹೆಸರನ್ನು ಪ್ರಸ್ತಾಪಿಸಿದ್ದರಿಂದ ಸ್ಪಷ್ಟೀಕರಣ ನೀಡಿರುವ ಕಾಂತರಾಜು, ಕೇತಮಾರನಹಳ್ಳಿಯಲ್ಲಿ ಐಟಿ ದಾಳಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಬಿಲ್ಡರ್ ಸಂತೋಷ್‌ನನ್ನು ನಾನು ಎಂದಿಗೂ ನೋಡಿಲ್ಲ. ಅವನ ಮನೆಯಲ್ಲಿ ಪತ್ತೆಯಾದ ಹಣಕ್ಕೂ ನನಗೂ ಸಂಬಂಧವಿಲ್ಲ. ನಮ್ಮ ತಂದೆ-ತಾಯಿಗೆ ನಾನೊಬ್ಬನೇ ಮಗ. ನನ್ನ ಹೆಸರನ್ನು ಯಾವುದಕ್ಕೆ ಬಳಸಿದ್ದಾರೆಂಬುದು ಗೊತ್ತಿಲ್ಲ. ದಯವಿಟ್ಟು ಮಾಧ್ಯಮದವರು ನನ್ನ ಹೆಸರನ್ನು ಹಾಗೂ ಫೋಟೋ ಬಳಸಬಾರದೆಂದು ಮನವಿ ಮಾಡಿದರು.

ಗುರುವಾರ ಬೆಳಿಗ್ಗೆ ನಗರದ ವಿವಿಧೆಡೆ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶನಿವಾರ ಸಂಜೆಯವರೆಗೆ 45 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಭಾನುವಾರ ಕೂಡ ಹತ್ತಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿಮಾಡಿದ ಐ.ಟಿ ಅಧಿಕಾರಿಗಳು, ಇಡೀ ದಿನ ಶೋಧ ನಡೆಸಿದ್ದಾರೆ.

ಸಂತೋಷ್‌ ಕೃಷ್ಣಪ್ಪ ಕೆಲವು ರಾಜಕೀಯ ಮುಖಂಡರೊಂದಿಗೆ ನಂಟು ಹೊಂದಿದ್ದರು. ಭಾರಿ ಪ್ರಮಾಣದ ನಗದು ಸಂಗ್ರಹಿಸಿ ಇಟ್ಟುಕೊಂಡಿರುವ ಸುಳಿವು ಆಧರಿಸಿ ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಕಬ್ಬಿಣದ ಪೆಟ್ಟಿಗೆಗಳಲ್ಲಿ (ಟ್ರಂಕ್‌) ನಗದು, ಚಿನ್ನಾಭರಣ ಮತ್ತು ದಾಖಲೆಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಎಲ್ಲ ಪೆಟ್ಟಿಗೆಗಳನ್ನೂ ವಶಕ್ಕೆ ಪಡೆದು ಕೊಂಡೊಯ್ದಿರುವ ತನಿಖಾಧಿಕಾರಿಗಳು, ನಗದು ಎಣಿಕೆಯಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾಸ್ತುಶಿಲ್ಪಿಯೊಬ್ಬರ ಮನೆ ಮೇಲೆ ಶನಿವಾರ ಬೆಳಿಗ್ಗೆ ದಾಳಿಮಾಡಿದ್ದ ಐ.ಟಿ ಅಧಿಕಾರಿಗಳು ಶೋಧ ನಡೆಸಿದ್ದರು. ಅಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿತ್ತು. ಆ ಕಾರ್ಯಾಚರಣೆಯಲ್ಲಿ ಲಭಿಸಿದ ಸುಳಿವನ್ನು ಆಧರಿಸಿ ಕೇತಮಾರನಹಳ್ಳಿಯ ಫ್ಲ್ಯಾಟ್‌ ಮೇಲೆ ದಾಳಿ ನಡೆಸಲಾಗಿತ್ತು.

ಮತ್ತಷ್ಟು ಕಡೆ ಶೋಧ ;

ಗುತ್ತಿಗೆದಾರರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಸುತ್ತಿರುವವರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸರಣಿಯೋಪಾದಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ಗುರುವಾರ ಆರಂಭವಾದ ದಾಳಿಯಲ್ಲಿ ಸಿಕ್ಕ ಸುಳಿವುಗಳನ್ನು ಆಧರಿಸಿ ಕಾರ್ಯಾಚರಣೆ ಮುಂದುವರಿಯುತ್ತಲೇ ಇದೆ.

ನಗರದಲ್ಲಿ ಗುರುವಾರದಿಂದ ಆರಂಭವಾದ ಐ.ಟಿ ಶೋಧ ಭಾನುವಾರವೂ ಮುಂದುವರಿಯಿತು. ನಾಲ್ಕು ದಿನಗಳ ನಿರಂತರ ಕಾರ್ಯಾಚರಣೆಯಲ್ಲಿ ಗುತ್ತಿಗೆದಾರರು, ಉದ್ಯಮಿಗಳು, ವಾಸ್ತುಶಿಲ್ಪಿಗಳ ಮನೆಗಳಿಂದ 100 ಕೋಟಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ, ಮುಂಬೈ, ಚೆನ್ನೈ, ಗೋವಾ ಸೇರಿದಂತೆ ದೇಶದ ವಿವಿಧೆಡೆಯಿಂದ ಆದಾಯ ತೆರಿಗೆ ಇಲಾಖೆಯ ನೂರಾರು ಅಧಿಕಾರಿಗಳು ಬುಧವಾರವೇ ಬೆಂಗಳೂರು ತಲುಪಿದ್ದರು. ಗುರುವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ಆರಂಭಿಸಿದ್ದರು. ಇನ್ನೂ ಅವರೆಲ್ಲರೂ ನಗರದಲ್ಲೇ ಬೀಡುಬಿಟ್ಟಿದ್ದಾರೆ.

In a continuation of the raids since Thursday, Income Tax (I-T) officials on Sunday searched an apartment in Kethamaranahalli at Rajajinagar belonging to a city-based builder and allegedly recovered cash worth several crores and incriminating documents from him.