Kasargod man sits on chair, protest: ಹೆದ್ದಾರಿ ಮಧ್ಯೆ ಸ್ಟೂಲ್ ಇಟ್ಟು ಕುಳಿತ ಉದ್ಯಮಿ ! ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ಸನ್ನೇ ಹಿಂದಕ್ಕೆ ಕಳಿಸಿದ ವಿಡಿಯೋ ವೈರಲ್

11-11-23 07:00 pm       HK News Desk   ಕರ್ನಾಟಕ

ಕರ್ನಾಟಕ ಗಡಿಭಾಗ ತಲಪಾಡಿಯಿಂದ ಕೇರಳದ ಕಾಸರಗೋಡಿನಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದೇ ವೇಳೆ, ತಲಪಾಡಿ, ಮಂಜೇಶ್ವರ ಭಾಗದಲ್ಲಿ ಬಹುತೇಕ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದು ಹೊಸ ರಸ್ತೆಯಲ್ಲಿ ಬಸ್ಸು, ಇನ್ನಿತರ ವಾಹನಗಳು ಓಡಾಟ ಆರಂಭಿಸಿವೆ.

ಮಂಜೇಶ್ವರ, ನ.11: ಕರ್ನಾಟಕ ಗಡಿಭಾಗ ತಲಪಾಡಿಯಿಂದ ಕೇರಳದ ಕಾಸರಗೋಡಿನಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದೇ ವೇಳೆ, ತಲಪಾಡಿ, ಮಂಜೇಶ್ವರ ಭಾಗದಲ್ಲಿ ಬಹುತೇಕ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದು ಹೊಸ ರಸ್ತೆಯಲ್ಲಿ ಬಸ್ಸು, ಇನ್ನಿತರ ವಾಹನಗಳು ಓಡಾಟ ಆರಂಭಿಸಿವೆ. ಆದರೆ ಇಲ್ಲೊಬ್ಬರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ಸಿಗೆ ಅಡ್ಡಲಾಗಿ ಕುಳಿತು ಬಸ್ಸನ್ನೇ ಹಿಂದಕ್ಕೆ ಕಳಿಸಿರುವ ಪ್ರಸಂಗದ ವಿಡಿಯೋ ವೈರಲ್ ಆಗಿದೆ.

ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹೊಸ ಹೆದ್ದಾರಿಯ ಮಧ್ಯದಲ್ಲೇ ಸಾಗುತ್ತಿತ್ತು. ಬಸ್ ಇಕ್ಕೆಲದಲ್ಲಿ ನಿರ್ಮಿಸಿರುವ ಸರ್ವಿಸ್ ರಸ್ತೆಯಲ್ಲಿ ಸಾಗದೇ ಇದ್ದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಕುಂಜತ್ತೂರಿನ ಉದ್ಯಮಿ ಹಸೈನಾರ್ ಎಂಬವರು ರಸ್ತೆ ಮಧ್ಯೆ ಸ್ಟೂಲ್ ಇಟ್ಟು ಕುಳಿತು ಬಸ್ಸನ್ನೇ ಹಿಂದಕ್ಕೆ ಕಳಿಸಿದ್ದಾರೆ. ಇದರ ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಿನಿಮೀಯ ಶೈಲಿಯಲ್ಲಿ ಆ ವ್ಯಕ್ತಿ ಕುರ್ಚಿಯಿಂದ ಎದ್ದು ಬಸ್ಸಿನ ಎದುರಿನಲ್ಲಿ ನಡೆದು ಸಾಗುವ ವಿಡಿಯೋ ಜನಮೆಚ್ಚುಗೆ ಗಳಿಸಿದೆ.

ತಲಪಾಡಿಯಿಂದ ಕಾಸರಗೋಡು- ಕಣ್ಣೂರಿನ ವರೆಗೆ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಲ್ಲಿ ನಡುವೆ ಸಾಗುವ ವಾಹನಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಸಾಗುವಂತೆ ಪ್ರತ್ಯೇಕ ರಸ್ತೆಯನ್ನು ಮಾಡಲಾಗಿದೆ. ಇದರಿಂದಾಗಿ ಸ್ಥಳೀಯ ಪ್ರಯಾಣಿಕರು, ಜನಸಾಮಾನ್ಯರು ಹೆದ್ದಾರಿಯನ್ನು ಆಚೀಚೆ ದಾಟುವುದಕ್ಕೂ ಆಗಲ್ಲ. ಒಂದೆಡೆ ಸ್ಥಳೀಯರಿಗೆ ಸಮಸ್ಯೆ ಆಗುತ್ತಿದ್ದರೂ, ನೇರವಾಗಿ ಸಾಗುವ ವಾಹನ ಪ್ರಯಾಣಿಕರಿಗೆ ಯಾವುದೇ ಕಿರಿಕಿರಿ ಇಲ್ಲದೆ ಸಾಗಬಹುದಾಗಿದೆ. ಸ್ಥಳೀಯ ವಾಹನಗಳು, ಸಾರಿಗೆ ಬಸ್ ಗಳು ಸಾಗುವುದಕ್ಕೆ ಸರ್ವಿಸ್ ರಸ್ತೆಯನ್ನು ಮಾಡಲಾಗಿದೆ. ಆದರೆ ಕೆಲವೊಮ್ಮೆ ನೇರ ರಸ್ತೆಯಲ್ಲೇ ಬಸ್ಸುಗಳು ಸಾಗುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಈ ರೀತಿ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ.

Kasargod man sits on chair in the middle of National Highway between Mangalore and kerala.