Pastor Alph Lukau in Bangalore 2023, India, Cancelled: ‘ಪ್ರೇ ಫಾರ್ ಇಂಡಿಯಾ’ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ರದ್ದು ; ಬೆಂಗಳೂರಿನಲ್ಲಿ ಆಯೋಜಿಸಿದ್ದ ಬೃಹತ್ ಕ್ರೈಸ್ತ ಧರ್ಮ ಪ್ರಚಾರ ಸಭೆ, ಆಫ್ರಿಕನ್ ‘ದೇವಮಾನವ’ನಿಗೆ ವೀಸಾ ನಿರಾಕರಣೆ   

15-12-23 08:07 pm       Kishor, Bengaluru Correspondent   ಕರ್ನಾಟಕ

‘’ಪ್ರೇ ಫಾರ್ ಇಂಡಿಯಾ’’ ಹೆಸರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.16 ಮತ್ತು 17ರಂದು ಆಯೋಜಿಸಲಾಗಿದ್ದ ಆಫ್ರಿಕನ್ ದೇವ ಮಾನವನ ಕ್ರೈಸ್ತ ಧರ್ಮ ಪ್ರಚಾರ ಸಭೆ ಕೊನೆಕ್ಷಣದಲ್ಲಿ ರದ್ದುಗೊಂಡಿದೆ. ದಕ್ಷಿಣ ಆಫ್ರಿಕಾ ಮೂಲದ ಧಾರ್ಮಿಕ ಮತ ಪ್ರಚಾರಕ, ಸ್ವಯಂಘೋಷಿತ ದೇವಮಾನವ ಆಲ್ಫ್ ಲುಕಾವ್ ಎಂಬ ವ್ಯಕ್ತಿ ಬೆಂಗಳೂರಿನ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಎಲ್ಲ ತಯಾರಿ ನಡೆದಿತ್ತು.

ಬೆಂಗಳೂರು, ಡಿ.15: ‘’ಪ್ರೇ ಫಾರ್ ಇಂಡಿಯಾ’’ ಹೆಸರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.16 ಮತ್ತು 17ರಂದು ಆಯೋಜಿಸಲಾಗಿದ್ದ ಆಫ್ರಿಕನ್ ದೇವ ಮಾನವನ ಕ್ರೈಸ್ತ ಧರ್ಮ ಪ್ರಚಾರ ಸಭೆ ಕೊನೆಕ್ಷಣದಲ್ಲಿ ರದ್ದುಗೊಂಡಿದೆ. ದಕ್ಷಿಣ ಆಫ್ರಿಕಾ ಮೂಲದ ಧಾರ್ಮಿಕ ಮತ ಪ್ರಚಾರಕ, ಸ್ವಯಂಘೋಷಿತ ದೇವಮಾನವ ಆಲ್ಫ್ ಲುಕಾವ್ ಎಂಬ ವ್ಯಕ್ತಿ ಬೆಂಗಳೂರಿನ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಎಲ್ಲ ತಯಾರಿ ನಡೆದಿತ್ತು. ಆದರೆ, ಭಾರತದ ವಿದೇಶಾಂಗ ಇಲಾಖೆಯಿಂದ ವೀಸಾ ನಿರಾಕರಿಸಿದ್ದರಿಂದ ಆಲ್ಫ್ ಲುಕಾವ್ ಆಗಮನಕ್ಕೆ ತಡೆ ಬಿದ್ದಿದೆ.

ಆಲ್ಫ್ ಲುಕಾವ್ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ಮೂಲದ ಕ್ರೈಸ್ತ ಮತ ಪ್ರಚಾರಕನಾಗಿದ್ದು, ಭಾರತದಲ್ಲಿಯೂ ಬಹಳಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಮಂಗಳೂರು ಮೂಲದ ಪ್ರಭಾವಿ ವ್ಯಕ್ತಿಯೊಬ್ಬರು ಸೇರಿದಂತೆ ಕೇರಳ, ಕರ್ನಾಟಕದ ಒಂದಷ್ಟು ಅನುಯಾಯಿಗಳು ಸೇರಿಕೊಂಡು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆಲ್ಫ್ ಲುಕಾವ್ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದುದರಿಂದ ‘ಪ್ರೇ ಫಾರ್ ಇಂಡಿಯಾ’ (ಭಾರತಕ್ಕಾಗಿ ಪ್ರಾರ್ಥಿಸಿ) ಎನ್ನುವ ಸ್ಲೋಗನ್  ಮುಂದಿಟ್ಟು ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ದೊಡ್ಡ ಪೋಸ್ಟರ್ ಹಾಕಲಾಗಿತ್ತು. ಟಿವಿ, ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಿ ಕಾರ್ಯಕ್ರಮದ ಬಗ್ಗೆ ಭಾರೀ ಫೋಕಸ್ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಹಿಂದು ಪರ ಸಂಘಟನೆಗಳು ಆಲ್ಫ್ ಲುಕಾವ್ ಆಗಮಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಗಿರೀಶ್ ಭಾರದ್ವಾಜ್ ಎಂಬವರು ಬೆಂಗಳೂರಿನ ವಲಸೆ ಮತ್ತು ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿಯ ಆಯುಕ್ತರಿಗೆ ಪತ್ರ ಬರೆದು, ಆಲ್ಫ್ ಲುಕಾವ್ ಆಗಮಿಸುತ್ತಿರುವ ಉದ್ದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಲ್ಫ್ ಲುಕಾವ್ ಮತ ಪ್ರಚಾರಕನಾಗಿದ್ದು, ಮತ ಪ್ರಚಾರದ ಉದ್ದೇಶದಿಂದಲೇ ಭಾರತಕ್ಕೆ ಬರುತ್ತಿದ್ದಾನೆ. ಭಾರತೀಯ ವೀಸಾ ನಿಯಮದ ಪ್ರಕಾರ, ಮತ ಪ್ರಚಾರದ ಉದ್ದೇಶಕ್ಕೆ ಬರುವ ವಿದೇಶಿ ಪ್ರಜೆಗಳಿಗೆ ವೀಸಾ ನೀಡುವಂತಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಮತ ಪ್ರಚಾರ ಕೈಗೊಳ್ಳುವುದಕ್ಕೆ ಭಾರತದ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ವೀಸಾ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ಗಿರೀಶ್ ಭಾರದ್ವಾಜ್ ಪತ್ರದಲ್ಲಿ ಉಲ್ಲೇಖಿಸಿದ್ದರು.

ಆಲ್ ಇಂಡಿಯಾ ಕ್ರಿಸ್ತಿಯನ್ ಫೆಡರೇಶನ್ ಹೆಸರಲ್ಲಿ ಆಲ್ಫ್ ಲುಕಾವ್ ಅನುಯಾಯಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೀಗ ಬೆಂಗಳೂರಿನ ಸಮಾವೇಶ ರದ್ದುಗೊಂಡಿರುವ ಬಗ್ಗೆ ಆಯೋಜಕರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಆಲ್ಫ್ ಲುಕಾವ್ ವೀಸಾ ನಿರ್ಬಂಧಿಸಿರುವ ವಿಚಾರದಲ್ಲಿ ವಿದೇಶಾಂಗ ಇಲಾಖೆ ನಿರ್ಧಾರವನ್ನು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಸ್ ನೀಡುವುದು, ಪ್ರವೇಶ ಟಿಕೆಟ್ ಬುಕ್ಕಿಂಗ್ ಬಗ್ಗೆ ಆನ್ಲೈನ್ ನೋಂದಣಿಯನ್ನೂ ಮಾಡಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಒಟ್ಟು ಕಾರ್ಯಕ್ರಮ ರದ್ದುಗೊಂಡಿರುವುದು ಆಯೋಜಕರಿಗೆ ಹಿನ್ನಡೆ ಆದಂತಾಗಿದೆ.

ಸತ್ತವರನ್ನು ಬದುಕಿಸುತ್ತೇನೆನ್ನುವ ದೇವಮಾನವ ;

ಸ್ವಯಂಘೋಷಿತ ದೇವಮಾನವ ಆಲ್ಫ್ ಲುಕಾವ್ ಬಗ್ಗೆ ಧರ್ಮ ಮತ್ತು ಏಸು ಕ್ರಿಸ್ತನ ಹೆಸರಲ್ಲಿ ಆಫ್ರಿಕಾದ ಜನರಲ್ಲಿ ಮೌಢ್ಯ ಬಿತ್ತುತ್ತಿದ್ದಾರೆ ಎಂಬ ಆರೋಪಗಳಿವೆ. ಇದೇ ಕಾರಣಕ್ಕೆ ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಆತನ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸತ್ತ ವ್ಯಕ್ತಿಗಳನ್ನು ಬದುಕಿಸಿದ್ದೇನೆ ಎಂದು ಹೇಳಿ ಜನರನ್ನು ನಂಬಿಸುವ ಆತನ ವಿಡಿಯೋಗಳ ಬಗ್ಗೆ ಬಿಬಿಸಿ ಸಂಸ್ಥೆ ತನಿಖಾ ವರದಿ ಮಾಡಿದ್ದು ಆತನ ವಿಚಿತ್ರ ರೀತಿಯ ವರ್ತನೆ ತೀವ್ರ ಟೀಕೆಗೊಳಗಾಗಿತ್ತು. ಜೀವಂತ ಇರುವ ವ್ಯಕ್ತಿಯನ್ನೇ ಶವ ಪೆಟ್ಟಿಗೆಯಲ್ಲಿ ಮಲಗಿಸಿ ಎದ್ದು ನಿಲ್ಲುವಂತೆ ಮಾಡಿರುವುದಾಗಿ ಬಿಬಿಸಿ ಸಂಸ್ಥೆ ತನಿಖಾ ವರದಿಯಲ್ಲಿ ಹೇಳಿತ್ತಲ್ಲದೆ, ಈ ಸ್ವಯಂಘೋಷಿತ ದೇವ ಮಾನವನನ್ನು ಜನರು ನಂಬದಂತೆ ದಕ್ಷಿಣ ಆಫ್ರಿಕನ್ನರಿಗೆ ಹೇಳಿತ್ತು. ಸತ್ತ ವ್ಯಕ್ತಿಯನ್ನು ಬದುಕಿಸುತ್ತೇನೆ ಎಂದು ಹೇಳುವ ಆಲ್ಫ್ ಲುಕಾವ್ ವಿಡಿಯೋಗಳ ಬಗ್ಗೆ ಚರ್ಚ್ ಗಳ ಕಡೆಯಿಂದಲೂ ಆಕ್ಷೇಪ ಬಂದಿತ್ತು

Pray for India Conference 2023 in Bangalore, led by Pastor Alph Lukau, was canceled due to infractions of visa regulations. Raju Dsilva and Kannada singer Prakash Halmidi led worship at this prayer session."Pray for India-Conference 2023" will take place on December 16 and 17, from 4 to 9 p.m. However, an activist brought up the fact that, in accordance with Indian visa laws, foreign nationals with any form of visa are not allowed to preach or disseminate their faith in India, leading to the cancellation of the program. The Hindu activist Girish Bharadwaj also filed a "intervening application" to enforce the laws. The organizers even went so far as to petition the High Court to be permitted to hold the gathering and allow the foreign pastor to speak in violation of the law.