ಕನ್ನಡ ಭಕ್ತಿಗೀತೆ 'ಪೂಜಿಸಲೆಂದೇ ಹೂಗಳ ತಂದೆ' ಹಾಡಿಗೆ ಮೋದಿ ಮೆಚ್ಚುಗೆ ; ಯೌಟ್ಯೂಬ್ ಲಿಂಕ್ ಶೇರ್ ಮಾಡಿದ ಪ್ರಧಾನಿ, ಇದು ಸ್ವತಃ ಶ್ರೀರಾಮನ ಆಶೀರ್ವಾದ ಎಂದ ಗಾಯಕಿ ಶಿವಶ್ರೀ

16-01-24 10:07 pm       Bangalore Correspondent   ಕರ್ನಾಟಕ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಶ್ರೀರಾಮನ ಕುರಿತ ಕನ್ನಡದ ಹಾಡೊಂದಕ್ಕೆ ತಲೆದೂಗಿದ್ದಾರೆ.

ಬೆಂಗಳೂರು, ಜ 16: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಶ್ರೀರಾಮನ ಕುರಿತ ಕನ್ನಡದ ಹಾಡೊಂದಕ್ಕೆ ತಲೆದೂಗಿದ್ದಾರೆ. ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್​ ಅವರು ಹಾಡಿರುವ 'ಪೂಜಿಸಲೆಂದೇ ಹೂಗಳ ತಂದೆ..' ಕನ್ನಡ ಹಾಡಿನ ಲಿಂಕ್​ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೆಚ್ಚಿಕೊಂಡಿದ್ದಾರೆ.

ಯೂಟ್ಯೂಬ್​ ಲಿಂಕ್​ ಶೇರ್​ ಮಾಡಿರುವ ಮೋದಿ, "ಶಿವಶ್ರೀ ಸ್ಕಂದ ಪ್ರಸಾದ್​ ಅವರು ಹಾಡಿದ ಹಾಡು ಪ್ರಭು ಶ್ರೀರಾಮನ ಮೇಲಿನ ಭಕ್ತಿ ಭಾವವನ್ನು ಸುಂದರವಾಗಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸುತ್ತವೆ" ಎಂದಿದ್ದಾರೆ. ಇದರ ಜೊತೆಗೆ, #ShriRamBhajan ಎಂಬ ಹ್ಯಾಶ್​ಟ್ಯಾಗ್​ ಬಳಸಿದ್ದಾರೆ.

ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್​ ಸಂತಸ ವ್ಯಕ್ತಪಡಿಸಿದ್ದು, "ತುಂಬಾ ಧನ್ಯವಾದಗಳು ಸರ್. ಇದು ಕಲ್ಪನೆಗೂ ಮೀರಿದ ಗೌರವ. ನಿಮಗೆ ನನ್ನ ಪ್ರಣಾಮಗಳು" ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ. "ನನಗಿದು ತುಂಬಾ ಸಂತೋಷದ ಕ್ಷಣ. ನಾನೀಗ ಅನುಭವಿಸುತ್ತಿರುವ ಭಾವನೆಯನ್ನು ವರ್ಣಿಸಲು ಪದಗಳೇ ಇಲ್ಲ. ಮೈ ರೋಮಾಂಚನಗೊಳ್ಳುವ ಕ್ಷಣ. ಇದು ಭಗವಾನ್​ ರಾಮನ ಆಶೀರ್ವಾದ. ನನ್ನ ಹಾಡಿಗೆ ಇಷ್ಟೊಂದು ಮನ್ನಣೆ ಸಿಗುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ" ಎಂದು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪೂಜಿಸಲೆಂದೇ ಹೂಗಳ ತಂದೆ, ದರುಶನ ಕೋರಿ ನಾ ನಿಂದೆ.. ತೆರೆಯೋ ಬಾಗಿಲನು ರಾಮ.." ಇದು ಮೂಲತಃ ಡಾ.ರಾಜ್​ಕುಮಾರ್​ ಹಾಗೂ ಮಿನುಗುತಾರೆ ಕಲ್ಪನಾ ಅಭಿನಯದ 'ಎರಡು ಕನಸು' ಸಿನಿಮಾದ ಹಾಡು. ದೊರೈ-ಭಗವಾನ್​ ಜೋಡಿ ನಿರ್ದೇಶನದ ಈ ಸಿನಿಮಾ 1974ರಲ್ಲಿ ತೆರೆಕಂಡು, ಸಿನಿಪ್ರಿಯರ ಮನಸ್ಸುಗೆದ್ದಿತ್ತು. ಇಂದಿಗೂ ಈ ಹಾಡು ಮಾತ್ರವಲ್ಲ, ಸಿನಿಮಾ ಕೂಡ ಕನ್ನಡಿಗರ ಮನಸಲ್ಲಿ ಅಜರಾಮರವಾಗಿದೆ. ಚಿ.ಉದಯಶಂಕರ್​ ಬರೆದಿದ್ದ ಸಾಹಿತ್ಯಕ್ಕೆ ರಾಜನ್​ ನಾಗೇಂದ್ರ ಸಂಗೀತ ಸಂಯೋಜನೆ ಮಾಡಿದ್ದರು. ಗಾನ ಸರಸ್ವತಿ ಎಸ್. ಜಾನಕಿ ಅದ್ಭುತವಾಗಿ ಹಾಡಿದ್ದರು. ಸಿನಿಮಾದಲ್ಲಿ ನಾಯಕಿ ಕಲ್ಪನಾ ಶ್ರೀರಾಮನ ಪೂಜೆಗೆಂದು ಹಾಡುವ ಈ ಹಾಡು ಇದೀಗ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್​ ತಮ್ಮದೇ ಶೈಲಿಯಲ್ಲಿ ಹಾಡಿ, ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ.

A Kannada song from the 1974 Rajkumar starrer Eradu Kanasu was trending on social media platforms on Tuesday after Prime Minister Narendra Modi posted a video of Chennai-based vocalist Sivasri Skandaprasad singing it.