ಅಯೋಧ್ಯೆ ರಾಮನ ಮೂರ್ತಿಯ ಶಿಲೆ ಸಿಕ್ಕಿದ ಮೈಸೂರಿನ ಹಾರೋಹಳ್ಳಿಯಲ್ಲೇ ರಾಮ ಮಂದಿರ ; ಜಿಟಿ ದೇವೇಗೌಡ ಘೋಷಣೆ 

20-01-24 10:31 pm       HK News Desk   ಕರ್ನಾಟಕ

ಅಯೋಧ್ಯೆಯಲ್ಲಿ ಪ್ರತಿಷ್ಠೆಯಾಗಲಿರುವ ಅಪೂರ್ವ ರಾಮಲಲ್ಲಾನ ಮೂರ್ತಿ ಮೈಸೂರಿನಲ್ಲಿ ಕೆತ್ತಿದ ಶಿಲೆಯಿಂದ ಆಗಿದೆ ಎನ್ನುವ ಸುದ್ದಿ ಮೈಸೂರಿನ ಜನರಲ್ಲಿ ಪುಳಕ ಸೃಷ್ಟಿಸಿದೆ.

ಮೈಸೂರು, ಜ.20: ಅಯೋಧ್ಯೆಯಲ್ಲಿ ಪ್ರತಿಷ್ಠೆಯಾಗಲಿರುವ ಅಪೂರ್ವ ರಾಮಲಲ್ಲಾನ ಮೂರ್ತಿ ಮೈಸೂರಿನಲ್ಲಿ ಕೆತ್ತಿದ ಶಿಲೆಯಿಂದ ಆಗಿದೆ ಎನ್ನುವ ಸುದ್ದಿ ಮೈಸೂರಿನ ಜನರಲ್ಲಿ ಪುಳಕ ಸೃಷ್ಟಿಸಿದೆ. ಈಗ ರಾಮನ ಮೂರ್ತಿಯ ಕೃಷ್ಣ ಶಿಲೆ ಸಿಕ್ಕಿದ ಜಾಗದಲ್ಲಿ ರಾಮನ ಮಂದಿರ ನಿರ್ಮಿಸಲು ಜನರು ಮುಂದಾಗಿದ್ದಾರೆ. 

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಈ ಘೋಷಣೆ ಮಾಡಿದ್ದಾರೆ. ಜನವರಿ 22ರಂದು ಶಿಲೆ ಸಿಕ್ಕ ಜಾಗದಲ್ಲಿ ಭೂಮಿ ಪೂಜೆ ಮಾಡುತ್ತೇವೆ. ನಂತರ ಎಲ್ಲಾ ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಮಂದಿರ ನಿರ್ಮಾಣ ಮಾಡುತ್ತೇವೆ. ಇದಕ್ಕೆ ಜಮೀನು ಮಾಲೀಕ ರಾಮದಾಸ್ ಕೂಡ ಒಪ್ಪಿದ್ದಾರೆ ಎಂದು ಜಿಟಿ ದೇವೇಗೌಡ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದೆ. ದೇಶದ ಜನರು ಎದುರು ನೋಡುತ್ತಿರುವ ಬಾಲ ರಾಮನ ವಿಗ್ರಹ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯ ದಲಿತ ಸಮುದಾಯದ ಮುಖಂಡ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕ ಕೃಷ್ಣ ಶಿಲೆಯಿಂದ ಆಗಿದೆ. ಇದು ನಮಗೆಲ್ಲ ಸಂತೋಷ. ನಮ್ಮ ದಲಿತ ಬಾಂಧವರ ಜಮೀನಿನಲ್ಲಿ ಮೂಡಿ ಬಂದಿರುವ ಶಿಲೆ ಎಂಬುದು ಹೆಮ್ಮೆ. ‌

ಈ ಶಿಲೆಯನ್ನ ಕೆತ್ತನೆ ಮಾಡಿರುವವರು ನಮ್ಮ ಮೈಸೂರಿನವರು. ಕೃಷ್ಣ ಶಿಲೆಯನ್ನ ಹುಡುಕಿದ್ದ ಶ್ರೀನಿವಾಸ್ ಕೂಡ ನಮ್ಮ ಮೈಸೂರಿನವರು. ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಮಲಲ್ಲಾ ಮೂರ್ತಿಗೆ ಶಿಲೆ ಸಿಕ್ಕಿದೆ. ಜ. 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತದೆ. ಅದೇ ವೇಳೆ ಕೃಷ್ಣ ಶಿಲೆ ಸಿಕ್ಕ ಸ್ಥಳದಲ್ಲಿ ವಿಶೇಷ ಪೂಜೆ ನಡೆಸಲಾಗುವುದು. ರಾಮನ ಮಂದಿರಕ್ಕಾಗಿ ಅಡಿಗಲ್ಲು ಹಾಕುತ್ತೇವೆ ಎಂದು ತಿಳಿಸಿದ್ದಾರೆ.

The news that the statue of Apoorva Ram Lalla, who will be installed in Ayodhya, is made of stone carved in Mysuru has created a sensation among the people of Mysuru. Now, people have come forward to build a Ram temple at the site where the Krishna stone of the idol of Lord Ram was found.