BJP-JDS alliance, Legislative Council elections: ಬಿಜೆಪಿ- ಜೆಡಿಎಸ್ ಮೈತ್ರಿ ಬಳಿಕ ಮೊದಲ ಸಭೆ ; ವಿಧಾನ ಪರಿಷತ್ ಚುನಾವಣೆ ಬಗ್ಗೆ ಚರ್ಚಿಸಿದ ನಾಯಕರು, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಫೈನಲ್ 

22-01-24 07:38 pm       Bangalore Correspondent   ಕರ್ನಾಟಕ

 ಬಿಜೆಪಿ ವರಿಷ್ಠ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಬೆಂಗಳೂರು ನಿವಾಸದಲ್ಲಿ ಜೆಡಿಎಸ್ ನಾಯಕರು ಭೇಟಿಯಾಗಿ ಚರ್ಚಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಅಧಿಕೃತ ಚಟುವಟಿಕೆ ಆರಂಭಗೊಂಡಿದೆ.

ಬೆಂಗಳೂರು, ಜ.22: ಬಿಜೆಪಿ ವರಿಷ್ಠ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಬೆಂಗಳೂರು ನಿವಾಸದಲ್ಲಿ ಜೆಡಿಎಸ್ ನಾಯಕರು ಭೇಟಿಯಾಗಿ ಚರ್ಚಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಅಧಿಕೃತ ಚಟುವಟಿಕೆ ಆರಂಭಗೊಂಡಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಉಭಯ ಪಕ್ಷಗಳ ನಾಯಕರು ಚರ್ಚೆ ನಡೆಸಿದ್ದಾರೆ.  ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಎ.ಪಿ ರಂಗನಾಥ ಅವರನ್ನು ಕಣಕ್ಕಿಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಎರಡು ತಿಂಗಳ ಹಿಂದೆ ಕೇಂದ್ರ ಬಿಜೆಪಿ ನಾಯಕರ ಜೊತೆ ಜೆಡಿಎಸ್ ನಾಯಕರು ಮೈತ್ರಿ ಘೋಷಣೆ ಮಾಡಿದ್ದರು. ಆದರೆ ರಾಜ್ಯ ಮಟ್ಟದಲ್ಲಿ ಎರಡೂ ಪಕ್ಷಗಳ ನಾಯಕರು ಅಧಿಕೃತ ಭೇಟಿಯಾಗಿರಲಿಲ್ಲ. ಭಾನುವಾರ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಭೆ ನಡೆಸುವ ಮೂಲಕ ಮೈತ್ರಿಗೆ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಿದ್ದಾರೆ. ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಮಾತ್ರವಲ್ಲದೆ, ವಿಧಾನ ಪರಿಷತ್ ಚುನಾವಣೆ ಕುರಿತಾಗಿಯೂ ಚರ್ಚಿಸಿದ್ದಾರೆ.

ಉಭಯ ಪಕ್ಷಗಳ ನಾಯಕರ ನಡುವೆ ಸಮನ್ವಯ ಸಾಧಿಸುವುದು, ಲೋಕಸಭೆ ಟಿಕೆಟ್ ಹಂಚಿಕೆ ಹಾಗೂ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಮೊದಲ ಹಂತದ ಮೈತ್ರಿ ಸಭೆ ನಡೆಸಿದ್ದೇವೆ. ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ, ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಚರ್ಚಿಸಲಾಗಿದೆ. ಸಭೆಯ ಮಾಹಿತಿಯನ್ನು ಬಿಜೆಪಿ ಹೈಕಮಾಂಡ್‌ಗೆ ತಲುಪಿಸಲಾಗುವುದು ಎಂದು ಹೇಳಿದರು. 

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮುಖಂಡರಾದ ಡಿ.ವಿ.ಸದಾನಂದಗೌಡ, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ಜೆಡಿಎಸ್ ಮುಖಂಡರಾದ ಜಿ.ಟಿ.ದೇವೇಗೌಡ, ಕೆ.ಎ.ತಿಪ್ಪೇಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ಭೋಜೇಗೌಡ ಉಪಸ್ಥಿತರಿದ್ದರು.

The JDS leaders met BJP chief B S Yeddyurappa at his residence in Bengaluru and discussed the issue. With this, the official activities of the BJP-JDS alliance in the state have begun.