BJP MP Pratap Simha: ನೀವೊಬ್ಬ ದಲಿತ ವಿರೋಧಿ, ದಲಿತರ ಜಮೀನಿಗೆ ಏಕೆ ಬರ್ತೀರಿ ? ಇಲ್ಲಿಂದ ಹೋಗಿ ; ರಾಮ ಮಂದಿರ ಗುದ್ದಲಿ ಪೂಜೆಗೆ ಆಗಮಿಸಿದ ಸಂಸದಗೆ ಘೇರಾವ್, ವಾಪಸ್ ತೆರಳಿದ ಸಿಂಹ

22-01-24 11:06 pm       HK News Desk   ಕರ್ನಾಟಕ

ಸಂಸದ ಪ್ರತಾಪ್ ಸಿಂಹ ಅವರಿಗೆ  ದಲಿತ 'ರಾಮಭಕ್ತರು ಘೇರಾವ್ ಹಾಕಿರುವ ಘಟನೆ ಸೋಮವಾರ ಮೈಸೂರಿನಲ್ಲಿ ನಡೆದಿದೆ.

ಮೈಸೂರು, ಜ 22: ಸಂಸದ ಪ್ರತಾಪ್ ಸಿಂಹ ಅವರಿಗೆ  ದಲಿತ 'ರಾಮಭಕ್ತರು ಘೇರಾವ್ ಹಾಕಿರುವ ಘಟನೆ ಸೋಮವಾರ ಮೈಸೂರಿನಲ್ಲಿ ನಡೆದಿದೆ.

ರಾಮಲಲ್ಲಾ ವಿಗ್ರಹ ಕೆತ್ತನೆಗೆ ಕಲ್ಲು ತೆಗೆದ ಸ್ಥಳದಲ್ಲಿ ಹಾರೋಹಳ್ಳಿ ಮತ್ತು ಗುಜ್ಜೇಗೌಡನಪುರ ಗ್ರಾಮಸ್ಥರು ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ವಿರೋಧಿ ಘೋಷಣೆ ಕೂಗಿ ಘೇರಾವ್ ಹಾಕಿದ್ದಾರೆ

ಇದರಿಂದ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿಯೇ ಇದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ರಾಮಲಲ್ಲಾ ಮೂರ್ತಿಗೆ ಕಲ್ಲು ಕೊಟ್ಟ ದಲಿತ ರೈತನಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲ ಎಂಬುದು ಇವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ

ಮಾಜಿ ತಾಪಂ ಸದಸ್ಯ ಹಾರೋಹಳ್ಳಿ ಸುರೇಶ್ ಮಾತನಾಡಿ, ''ನೀವೊಬ್ಬ ದಲಿತ ವಿರೋಧಿ. ನಿಮ್ಮ ನಡವಳಿಕೆಯಿಂದ ದಲಿತರ ಭಾವನೆಗೆ ಧಕ್ಕೆಯುಂಟಾಗಿದೆ. ಮಹಿಷ ದಸರಾ ಆಚರಣೆ ಸಂದರ್ಭದಲ್ಲಿ ದಲಿತರನ್ನು ತುಳಿದು ಹಾಕಿ ಬಿಡುತ್ತೇನೆ, ಹೊಸಕಿ ಹಾಕಿ ಬಿಡುತ್ತೇನೆ ಎಂದು ಬೆದರಿಸಿದ್ದ ನೀವು ದಲಿತರ ಜಮೀನಿಗೆ ಏಕೆ ಬರುತ್ತೀರಿ? ಇಲ್ಲಿಂದ ಹೊರ ನಡೆಯಿರಿ'' ಎಂದು ಹೇಳಿದರು.

ಈ ವೇಳೆ ಸಂಸದ ಪ್ರತಾಪ್ ಸಿಂಹ, "ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ದಲಿತ ವಿರೋಧಿಯಲ್ಲ" ಎಂದು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ಮಾಡಿದರು. ಆದರೆ ಇದರಿಂದ ಸಮಾಧಾನಗೊಳ್ಳದ ಗ್ರಾಮಸ್ಥರು, "ನೀವು ಏನು ಹೇಳುವುದು ಬೇಡ, ಇಲ್ಲಿಂದ ವಾಪಸ್ ಹೋಗಿ" ಪಟ್ಟು ಹಿಡಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಪಟ್ಟರಾದರೂ ಗ್ರಾಮಸ್ಥರು ಮಾತ್ರ ಅದಕ್ಕೆ ಬಗ್ಗಲಿಲ್ಲ. ನಂತರ ಸಂಸದ ಪ್ರತಾಪ್ ಸಿಂಹ ಅವರನ್ನೇ ಅಲ್ಲಿಂದ ವಾಪಸ್ ಹೋಗುವಂತೆ ಶಾಸಕರು ವಿನಂತಿಸಿದರು.

ಇದರಿಂದ ಬೇಸರಗೊಂಡ ಸಂಸದ ಪ್ರತಾಪ್ ಸಿಂಹ ಅಲ್ಲಿಂದ ಹೊರಟು ಹೋದರು. ಆ ಬಳಿಕ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.

BJP MP Pratap Simha on Monday faced the ire of villagers in Karnataka’s Mysuru district after he was stopped from participating in a foundation laying event of a temple held in a village, ahead of the Ram temple consecration ceremony in Ayodhya.