Bangalore Suicide 12 year old girl, Flat: ಬೆಂಗಳೂರು; ಅಪಾರ್ಟ್​ಮೆಂಟ್​ನ 29ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ 12ವರ್ಷದ 6ನೇ ಕ್ಲಾಸ್ ವಿದ್ಯಾರ್ಥಿನಿ, ಬೆಚ್ಚಿಬಿದ್ದ ಫ್ಲಾಟ್ ಮಂದಿ

24-01-24 12:31 pm       Bangalore Correspondent   ಕರ್ನಾಟಕ

29ನೇ ಮಹಡಿಯಿಂದ ಬಿದ್ದು 12ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಗೂರು ಬಳಿಯ ಅಪಾರ್ಟ್‍ಮೆಂಟ್ ಒಂದರಲ್ಲಿ ನಡೆದಿದೆ.

ಬೆಂಗಳೂರು, ಜ 24: 29ನೇ ಮಹಡಿಯಿಂದ ಬಿದ್ದು 12ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಗೂರು ಬಳಿಯ ಅಪಾರ್ಟ್‍ಮೆಂಟ್ ಒಂದರಲ್ಲಿ ನಡೆದಿದೆ.

ಬಾಲಕಿ ಅಪಾರ್ಟ್‍ಮೆಂಟ್‍ನಲ್ಲಿ ತಂದೆ – ತಾಯಿ ಜೊತೆ ವಾಸವಾಗಿದ್ದಳು. ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಳು ಎನ್ನಲಾಗಿದೆ. ಬಾಲಕಿಯ ತಂದೆ ಸಾಫ್ಟ್‌ವೇರ್‌ ಎಂಜಿನಿಯರ್, ತಾಯಿ ಗೃಹಿಣಿಯಾಗಿದ್ದಾರೆ. ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 

ಬಾಲಕಿ ಮಂಗಳವಾರ ರಾತ್ರಿ ಮಲಗಿದ್ದ ವೇಳೆ, ಇದ್ದಕ್ಕಿದ್ದಂತೆ ಮುಂಜಾನೆ 4:30ಕ್ಕೆ ಎದ್ದು ಹಾಲ್‍ಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನು ಆಕೆಯ ತಾಯಿ ವಿಚಾರಿಸಿದಾಗ, ಸರಿಯಾಗಿ ಉತ್ತರಿಸದೆ ಮತ್ತೆ ಮಲಗುವುದಾಗಿ ರೂಮಿಗೆ ತೆರಳಿದ್ದಳು. ಸುಮಾರು 5 ಗಂಟೆ ವೇಳೆಗೆ ಬಾಲಕಿ ಅಪಾರ್ಟ್‍ಮೆಂಟ್ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಜೋರಾದ ಶಬ್ದ ಕೇಳಿ ಸೆಕ್ಯೂರಿಟಿ ಹೊರಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೋಷಕರಿಗೆ ಹಾಗೂ ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ಗೆ ಸೆಕ್ಯೂರಿಟಿ ಮಾಹಿತಿ ನೀಡಿದ್ದರು.

ಈ ಸಂಬಂಧ ಹುಳಿಮಾವು ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

A class 7 student allegedly jumped to death from the balcony f her 29th-floor flat on Begur Road, Hulimavu southeast Bengaluru, early Tuesday.