ಜೈಲಿನಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ಗೆ ಮತ್ತೊಂದು ಶಾಕ್ ; ಮನೆ ಮೇಲೆ ಸಿಬಿಐ ಅಟ್ಯಾಕ್

23-11-20 12:35 pm       Bangalore Correspondent   ಕರ್ನಾಟಕ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಬೆಳಗಿನ ಜಾವ ದಾಳಿ ನಡೆದಿದೆ.

ಬೆಂಗಳೂರು, ನವೆಂಬರ್ 23: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಬೆಳಗಿನ ಜಾವ ದಾಳಿ ನಡೆದಿದೆ. ದೆಹಲಿ ಮೂಲದ ಹದಿಮೂರು ಅಧಿಕಾರಿಗಳ ತಂಡ ದಾಳಿ ನಡಸಿದ್ದು ದಾಖಲೆಗಳಿಗಾಗಿ ಶೋಧ ನಡೆಸುತ್ತಿದೆ. ಪುಲಿಕೇಶೀನಗರದ ಕೋಲ್ಸ್ ಪಾರ್ಕ್ ಬಳಿ ಇರುವ ಬೇಗ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.

ಬೆಳಗಿನ ಜಾವ ಇಬ್ಬರು ಮಹಿಳಾ ಅಧಿಕಾರಿಗಳು ಸೇರಿ ಸಿಬಿಐ ಅಧಿಕಾರಿಗಳ ತಂಡ ರೋಷನ್ ಬೇಗ್ ಅವರ ಮನೆ ಮೇಲೆ ದಾಳಿ ನಡೆಸಿತು. ದಾಳಿಯ ನೋಟಿಸ್ ಕೊಟ್ಟು ಮನೆ ಒಳಗೆ ಪ್ರವೇಶಿಸಿರುವ ಅಧಿಕಾರಿಗಳು, ಮನೆಯವರ ಮೊಬೈಲ್‌ ಗಳನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ. ಐಎಂಎ ನಿಂದ ಚಿನ್ನದ ಆಭರಣ ಹಾಗೂ ಕೋಟ್ಯಂತರ ರೂಪಾಯಿ ಬೇಗ್ ಪಡೆದ ಆರೋಫಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು ಹೆಚ್ಚುವರಿ ಸಾಕ್ಷಾಧಾರಗಳ ಸಂಗ್ರಹಕ್ಕೆ ಮುಂದಾಗಿದೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ರೋಷನ್ ಬೇಗ್ ಅವರನ್ನು ಬಂಧಿಸಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆ ಮುಂದೆ ಹಾಜರು ಪಡಿಸಿದ್ದರು. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನ ಕ್ವಾರೆಂಟೈನ್ ಸೆಲ್‌ನಲ್ಲಿದ್ದಾರೆ. ಬಂಧನ ಆಗುತ್ತಿದ್ದಂತೆ ಇದೀಗ ಸಿಬಿಐ ದಾಳಿ ನಡೆದಿದೆ.

ಐಎಂಎ ಕಂಪನಿಯಿಂದ 200 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದ ಆರಂಭಿಕ ದಿನಗಳಲ್ಲಿ ಐಎಂಎ ಸಂಸ್ಥಾಪಕ, ಸಿಇಓ ಮನ್ಸೂರ್ ಖಾನ್‌ ಅವರೇ ರೋಷನ್ ಬೇಗ್ ಅವರ ಮೇಲೆ ಆರೋಪ ಮಾಡಿದ್ದರು. ಐಎಂಎ ಕಂಪನಿಯಿಂದ ರೋಷನ್ ಬೇಗ್ ಬೇಕಾದಾಗೆಲ್ಲಾ ಹಣ ಪಡೆದಿದ್ದಾರೆ. ಅದನ್ನು ವಾಪಸು ಕೇಳಿದಾಗ ಸ್ಥಳೀಯ ರೌಡಿಗಳಿಂದ ಬೆದರಿಸಿದ್ದರು ಎಂಬ ಅಡಿಯೋ ಅಂದಿನ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರಿಗೆ ಮನ್ಸೂರ್ ಆಲಿಖಾನ್ ಅವರೇ ಕಳಿಸಿಕೊಟ್ಟಿದ್ದರು.

A search by the Central Bureau of Investigation (CBI) is underway at the Bengaluru residence of former Karnataka minister R Roshan Baig.