ರಾಜ್ಯ ಸರಕಾರಕ್ಕೆ ಪಂಚಮಸಾಲಿ ಕಂಟಕ ; ವಿಧಾನಸಭೆ ಮುತ್ತಿಗೆ ಹಾಕಲು ನಿರ್ಣಯ 

06-12-20 10:19 pm       Headline Karnataka News Network   ಕರ್ನಾಟಕ

ಒಂದೆಡೆ ಕುರುಬ ಸಮುದಾಯಕ್ಕೆ ಎಸ್ಸಿ ಮೀಸಲು ಕರುಣಿಸಲು ದಾಳ ಉರುಳಿಸುತ್ತಿರುವ ರಾಜ್ಯ ಸರಕಾರಕ್ಕೆ ಪಂಚಮ ಸಾಲಿ ಸಂಕಷ್ಟ ಎದುರಾಗಿದೆ. 

ವಿಜಯಪುರ, ಡಿ.6: ಒಂದೆಡೆ ಕುರುಬ ಸಮುದಾಯಕ್ಕೆ ಎಸ್ಸಿ ಮೀಸಲು ಕರುಣಿಸಲು ದಾಳ ಉರುಳಿಸುತ್ತಿರುವ ರಾಜ್ಯ ಸರಕಾರಕ್ಕೆ ಪಂಚಮ ಸಾಲಿ ಸಂಕಷ್ಟ ಎದುರಾಗಿದೆ. 

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ಹೋರಾಟಕ್ಕೆ ನಿರ್ಧರಿಸಲಾಗಿದೆ. ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಮುದಾಯ ಮುಖಂಡರು ಉದ್ದೇಶಿಸಿದ್ದು ವಿಜಯಪುರದಿಂದ ಡಿ.23 ರಿಂದ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.‌

ಈ ಬಗ್ಗೆ ವಿಜಯಪುರದಲ್ಲಿ ಪಂಚಮಸಾಲಿ ಸಮುದಾಯದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಟಿ ನಡೆಸಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲ ಸಂಗಮ ಪೀಠದಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಂಚಲಕ್ಷ ಹೆಜ್ಜೆಗಳೊಂದಿಗೆ ಬೃಹತ್ ಪಾದಯಾತ್ರೆ ನಡೆಸಲಿದ್ದಾರೆ. 

ಮೀಸಲು ವಿಷಯ ಮುಂದಿಟ್ಟು ಕಳೆದ ಅಕ್ಟೋಬರ್ 28ರಂದು ಬೆಳಗಾವಿ ಸುವರ್ಣ ಸೌಧದ ಎದುರು ಬಸವ ಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವೇಳೆ ಸ್ವಾಮೀಜಿಗೆ ಕರೆ ಮಾಡಿದ್ದ ಸಿಎಂ ಯಡಿಯೂರಪ್ಪ, ಬೇಡಿಕೆ ಇಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಬೇಡಿಕೆ ಈಡೇರದ ಕಾರಣ ಪಂಚಮಸಾಲಿ ಶ್ರೀಗಳು ಪಾದಯಾತ್ರೆಗೆ ಮುಂದಾಗಿದ್ದಾರೆ. 

ಸಿಎಂ ಸ್ಥಾನ ಉತ್ತರ ಕರ್ನಾಟಕಕ್ಕೆ ನೀಡಿ... 

ಇದೇ ವೇಳೆ, ಸಿಎಂ ಬದಲಾವಣೆ ಮಾಡೋದಾದ್ರೆ ಪಂಚಮಸಾಲಿ ಸಮುದಾಯದ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕು. ಸಿಎಂ ಬದಲಾವಣೆ ಮಾಡುವುದು ಕೇಂದ್ರಕ್ಕೆ ಬಿಟ್ಟಿದ್ದು. ಏನೇ ಮಾಡಲಿ, ಯಡಿಯೂರಪ್ಪ ಅವರನ್ನು ಬದಲಿಸುವುದಿದ್ದರೆ ಸಿಎಂ ಸ್ಥಾನವನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.