ಕೋವಿಡ್ ಪರೀಕ್ಷಾ ವರದಿ ಇನ್ಮುಂದೆ ಆನ್‌ಲೈನ್‌ - ಸುಧಾಕರ್

19-08-20 10:32 pm       Headline Karnataka News Network   ಕರ್ನಾಟಕ

ಕೋವಿಡ್ ಪರೀಕ್ಷೆಯ ವರದಿಯನ್ನು ಇನ್ನು ಮುಂದೆ ವೆಬ್ ಸೈಟ್ ನಲ್ಲೇ ಪಡೆಯಬಹುದು ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು, ಆಗಸ್ಟ್ 19: ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ಬೇಗನೆ ಪತ್ತೆ ಮಾಡಲು, ನಿಗದಿಪಡಿಸಿದ ಗುರಿಯಂತೆ ಪರೀಕ್ಷೆ ನಡೆಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಹಾಗೂ ಪ್ರಯೋಗಾಲಯಗಳ ಮುಖ್ಯಸ್ಥರೊಂದಿಗೆ ಸಚಿವ ಡಾ.ಕೆ.ಸುಧಾಕರ್ ಅವರು ವೀಡಿಯೋ ಸಭೆ ನಡೆಸಿದರು.

ಕೊರೊನಾ ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಮಾಡಿದರೆ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಪ್ರತಿ ಪ್ರಯೋಗಾಲಯಗಳಲ್ಲಿ ನಿಗದಿ ಮಾಡಿದಷ್ಟು ಸಂಖ್ಯೆಯಲ್ಲಿ ಪರೀಕ್ಷೆ ನಡೆಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಲು ಇರುವ ಅಡ್ಡಿಗಳನ್ನು ನಿವಾರಿಸಲು ಸರ್ಕಾರದಿಂದ ಎಲ್ಲ ಬಗೆಯ ನೆರವು ನೀಡಲಾಗುವುದು" ಎಂದು ಸಚಿವ ಡಾ.ಕೆ.ಸುಧಾಕರ್ ಸಭೆಗೆ ತಿಳಿಸಿದರು. ಕೋವಿಡ್ ಪರೀಕ್ಷೆಯ ಉಸ್ತುವಾರಿ ಎಸಿಎಸ್ ಡಾ.ಶಾಲಿನಿ ರಜನೀಶ್ ಪಾಲ್ಗೊಂಡಿದ್ದರು.

ಆನ್ ಲೈನ್ ನಲ್ಲೇ ವರದಿ
ಕೋವಿಡ್ ಪರೀಕ್ಷೆಯ ವರದಿಯನ್ನು ಇನ್ನು ಮುಂದೆ ವೆಬ್ ಸೈಟ್ ನಲ್ಲೇ ಪಡೆಯಬಹುದು. ಕೊರೊನಾ ಪರೀಕ್ಷೆ ಮಾಡಿಸಿಕೊಂಡವರು ತಮ್ಮ ಎಸ್‍ಆರ್ ಎಫ್ ಗುರುತು ಬಳಸಿ www.covidwar.karnataka.gov.in/service1 ನಲ್ಲಿ ಆನ್ ಲೈನ್ ನಲ್ಲೇ ಪರೀಕ್ಷೆಯ ವರದಿಯನ್ನು ಪಡೆಯಬಹುದು ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.