ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ ಗುಂಪು ಸೇರಿದ 6 ಪೊಲೀಸರು ಸಸ್ಪೆಂಡ್

22-08-20 01:05 pm       Bangalore Correspondent   ಕರ್ನಾಟಕ

ಕರ್ತವ್ಯ ನಿರ್ವಹಿಸುವ ವೇಳೆ ಮಾಸ್ಕ್ ಧರಿಸದೆ ಸೇರಿದ್ದ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಎಂದು ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು, ಆಗಸ್ಟ್ 22: ಕರ್ತವ್ಯ ನಿರ್ವಹಿಸುವ ವೇಳೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲನೆ ಮಾಡದೆ ಪಾರ್ಕ್‌ನಲ್ಲಿ ಗುಂಪು ಸೇರಿದ್ದ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ ಆದೇಶ ಹೊರಡಿಸಿದ್ದಾರೆ.

ಜಾಲಹಳ್ಳಿ ಸಂಚಾರ ಠಾಣೆಯ ಎಎಸ್‌ಐ ಮಂಜುನಾಥಯ್ಯ, ಹೆಡ್ ಕಾನ್ಸ್​​​ಟೇಬಲ್ ನಾಗರಾಜು, ಕಾನ್ಸ್ ಟೇಬಲ್​​​ಗಳಾದ ಪದ್ಮನಾಭ್, ಮಧುಸೂಧನ್, ವಿಶ್ವನಾಥ್ ಹಾಗೂ ಮಹಿಳಾ ಕಾನ್ಸ್​​​ಟೇಬಲ್ ಸುಜನಾ ಅಮಾನತುಗೊಂಡವರು

ಜಾಲಹಳ್ಳಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಆಗಸ್ಟ್ 11ರಂದು ಈ ಆರು ಸಿಬ್ಬಂದಿಯನ್ನು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದರು. ಕೋಬ್ರಾ ಡ್ಯೂಟಿಗೆ, ಜಾಲಹಳ್ಳಿ ಜಂಕ್ಷನ್, ಗಂಗಮ್ಮನ ವೃತ್ತ, ಸಾಹಿತ್ಯ ಕೂಟ ಜಂಕ್ಷನ್ ಸೇರಿ ಹಲವೆಡೆ ಸಂಚಾರ ನಿರ್ವಹಣೆಯ ಕರ್ತವ್ಯಕ್ಕೆ ಇವರನ್ನು ನಿಯೋಜಿಸಲಾಗಿತ್ತು. ಆ ವೇಳೆ ಹಿರಿಯ ಅಧಿಕಾರಿಗಳು ಕೊರೊನಾ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚಿಸಿದ್ದು, ಅವರ ಸಲಹೆಯನ್ನು ಲೆಕ್ಕಿಸದೇ ನಿರ್ಲಕ್ಷ್ಯ ಮಾಡಿ, ಈ 6 ಮಂದಿ ಸಾಹಿತ್ಯ ಕೂಟ ಬಳಿಯ ಪಾರ್ಕ್‌ನಲ್ಲಿ ಗುಂಪು ಸೇರಿದ್ದರು‌ ಎನ್ನಲಾಗಿದೆ.

ಈ ವೇಳೆ ಮಾಸ್ಕ್ ಧರಿಸಿಲ್ಲ ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಂಡಿರಲಿಲ್ಲ ಎಂಬ ಮಾಹಿತಿ ಪಡೆದ ಡಿಸಿಪಿ ಸೌಮ್ಯಲತಾ, ಕರ್ತವ್ಯದ ವೇಳೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಆರೋಪದ ಮೇಲೆ ಸಿಬ್ಬಂದಿಯನ್ನ ಅಮಾನತು ಮಾಡಿದ್ದಾರೆ. ಹಾಗೂ ಅಮಾನತು ಅವಧಿಯಲ್ಲಿ ಖಾಸಗಿ ನೌಕರಿ ಭತ್ಯೆ ಹಾಗೂ ವ್ಯವಹಾರ ಮಾಡಿದರೆ ಜೀವನ ಭತ್ಯೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಖಡಕ್ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.