ಆರ್ಥಿಕ ಪ್ಯಾಕೇಜ್ ಬಗ್ಗೆ ಭಾರೀ ಆಕ್ರೋಶ ; ಬೋಗಸ್ ಪ್ಯಾಕೇಜ್ - ಡಿಕೆಶಿ ; ಬಡವನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ - ಕುಮಾರಸ್ವಾಮಿ

19-05-21 12:42 pm       Headline Karnataka News Network   ಕರ್ನಾಟಕ

ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ ಸರಕಾರ ಘೋಷಣೆ ಮಾಡಿರುವ ನೆರವಿನ ಪ್ಯಾಕೇಜ್ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿವೆ. 

ಬೆಂಗಳೂರು, ಮೇ 19: ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ ಸರಕಾರ ಘೋಷಣೆ ಮಾಡಿರುವ ನೆರವಿನ ಪ್ಯಾಕೇಜ್ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿವೆ. 

ಯಾವುದೇ ಪೂರ್ವ ಯೋಜನೆ ಇಲ್ಲದೆ ತರಾತುರಿಯಲ್ಲಿ ಪರಿಹಾರ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಎಷ್ಟು ಮಂದಿಗೆ ಎಷ್ಟೆಲ್ಲಾ ನಷ್ಟ ಆಗಿದೆ ಎನ್ನುವ ಬಗ್ಗೆ ಮಾಹಿತಿಯನ್ನೇ ಪಡೆಯದೆ ಜುಜುಬಿ ಪರಿಹಾರ ಘೋಷಣೆ ಮಾಡಿದ್ದಾರೆ. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡೋಕೂ ಮುನ್ನ ಅಧ್ಯಯನ ನಡೆಸಬೇಕಿತ್ತು. ತೋರಿಕೆಗೆ ಪ್ಯಾಕೇಜ್ ಘೋಷಣೆ ಮಾಡಬಾರದು. ಸರಕಾರ ಭಿಕ್ಷೆ ನೀಡುವುದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. ಕಳೆದ ಬಾರಿ ಮಾಡಿದ್ದ ಘೋಷಣೆಯೇ ಜನರಿಗೆ ತಲುಪಿಲ್ಲ. ಯಾರಿಗೆ ಎಷ್ಟು ಕೊಟ್ಟಿದ್ದೀರಿ ಎಂದು ಲೆಕ್ಕ ಕೊಡಿ. ಹೂವು ಬೆಳಗಾರರಿಗೆ ಕಳೆದ ಬಾರಿ ಹೆಕ್ಟೇರ್ ಗೆ 25 ಸಾವಿರ ರೂ.ನಂತೆ ಕೊಡುವುದಾಗಿ ಹೇಳಿದ್ದಿರಿ. ಎಷ್ಟು ಮಂದಿಗೆ ಸಿಕ್ಕಿದೆ, ಲೆಕ್ಕ ಕೊಡಿ. ಸರಕಾರದ ಆರ್ಥಿಕ ಪ್ಯಾಕೇಜ್ ಬರೀಯ ಬೋಗಸ್ ಎಂದು ಡಿಕೆಶಿ ಟೀಕಿಸಿದ್ದಾರೆ. 

ಬಡವನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ! 

ಸರಕಾರದ ಆರ್ಥಿಕ ಪ್ಯಾಕೇಜ್ ಬಡವರ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಷ್ಟೇ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಟೀಕಿಸಿದ್ದಾರೆ. ಇವರಿಗೆ ಬಡವರ ಬಗ್ಗೆ ಕಾಳಜಿ ಇರುತ್ತಿದ್ದರೆ ಈ ರೀತಿ ಜುಜುಬಿ ಪರಿಹಾರ ಘೋಷಣೆ ಮಾಡುತ್ತಿರಲಿಲ್ಲ. ಎರಡು ಸಾವಿರ, ಮೂರು ಸಾವಿರದಲ್ಲಿ ಜೀವನ ನಡೆಯುತ್ತಾ.. ಇವರಿಗೆ ಕನಿಷ್ಠ ಮಾಹಿತಿ ಇದ್ಯಾ.. ದಿನಕೂಲಿ ಮಾಡೋ ಮಂದಿಯ ಬಗ್ಗೆ ಇವರಿಗೆ ಮಾಹಿತಿಯೇ ಇಲ್ಲ.. ರಾಜ್ಯದ ಜನರ ಬಗ್ಗೆ ಸರಿಯಾದ ಮಾಹಿತಿಯೇ ಇವರ ಬಳಿ ಇಲ್ಲ. ಏನೋ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒಂದಷ್ಟು ಘೋಷಣೆ ಮಾಡಿದ್ದಾರೆ. ಸರಕಾರದ ಆರ್ಥಿಕ ಪರಿಸ್ಥಿತಿ ಹೇಗಿದೆ ಎನ್ನೋದು ಗೊತ್ತು. ನಾನು ಕೂಡ ಸರಕಾರ ನಡೆಸಿದವನು. ಹಾಗೆ ನೋಡಿದರೆ ಕಳೆದ ಬಾರಿ ದೊಡ್ಡ ಕಷ್ಟವಾಗಿತ್ತು. ಈ ಬಾರಿ ಅಂಥ ಸ್ಥಿತಿ ಇಲ್ಲ. ಸರಕಾರ ಹೇಗೆ ನಡೆಸಬೇಕು, ಆರ್ಥಿಕ ಪರಿಸ್ಥಿತಿ ಹೇಗಿದೆ ಎನ್ನೋದು ಗೊತ್ತು. ಇವರು ಜುಜುಬಿ ಪರಿಹಾರ ನೀಡಿ ದುಡಿಯುವ ಜನರನ್ನು ಅಣಕಿಸಿದ್ದಾರೆ ಎಂದು ಕಟುವಾಗಿ ಟೀಕೆ ಮಾಡಿದ್ದಾರೆ.

Read: ಲಾಕ್ಡೌನ್ ಸಂಕಷ್ಟ ; ಶ್ರಮಿಕ ವರ್ಗಕ್ಕೆ 1250 ಕೋಟಿ ಪ್ಯಾಕೇಜ್, ಸಾಲ ಪಾವತಿಗೆ ವಿನಾಯ್ತಿ , ವಿವಿಧ ವರ್ಗಕ್ಕೆ ಜುಜುಬಿ ಪರಿಹಾರ !!