ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವಿಡಿಯೋ ಪಾಕ್ ಏಜಂಟರಿಗೆ ರವಾನೆ, ತರಬೇತಿ ಯುವಕ ಬಂಧನ

24-11-26 08:45 pm       HK News Staffer   ದೇಶ - ವಿದೇಶ

ಮುಂಬೈನ ಪ್ರಮುಖ ನೌಕಾನೆಲೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ನೌಕಾನೆಲೆಯಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನೌಕಾನೆಲೆಯಿಂದ ಸುಮಾರು 90 ರಹಸ್ಯ ವಿಡಿಯೋಗಳನ್ನು ಚಿತ್ರೀಕರಿಸಿದ್ದಲ್ಲದೆ, ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳಿಗೆ ಹಂಚಿದ್ದಾನೆಂಬ ಆರೋಪ ಕೇಳಿಬಂದಿದೆ.

ಮುಂಬೈ, ನ.24: ಮುಂಬೈನ ಪ್ರಮುಖ ನೌಕಾನೆಲೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ನೌಕಾನೆಲೆಯಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನೌಕಾನೆಲೆಯಿಂದ ಸುಮಾರು 90 ರಹಸ್ಯ ವಿಡಿಯೋಗಳನ್ನು ಚಿತ್ರೀಕರಿಸಿದ್ದಲ್ಲದೆ, ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳಿಗೆ ಹಂಚಿದ್ದಾನೆಂಬ ಆರೋಪ ಕೇಳಿಬಂದಿದೆ.

ಬಂಧಿತ ವ್ಯಕ್ತಿಯನ್ನು ಮುಂಬೈನ ಕೊಲಾಬಾ ಪ್ರದೇಶದ ಬಧ್ವಾರ್ ಪಾರ್ಕ್ ನಿವಾಸಿ ಬಂಟಿ ರಾಮಪ್ರಕಾಶ್ ಮೀನಾ ಎಂದು ಗುರುತಿಸಿದ್ದು ನೌಕಾ ಯಾರ್ಡ್‌ನಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದ. ನೌಕಾ ಹಡಗುಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯ ನಡೆಯುವ ಸೂಕ್ಷ್ಮ ಪ್ರದೇಶಗಳನ್ನು ವಿಡಿಯೋ ಮಾಡಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. 

ಪೊಲೀಸರ ಪ್ರಕಾರ, ಇನ್‌ಸ್ಟಾಗ್ರಾಂ ಖಾತೆ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ವಾಟ್ಸ್‌ಆ್ಯಪ್ ಸಂಖ್ಯೆಯ ಮೂಲಕ ಆರೋಪಿಗೆ ಪಾಕ್ ಕಡೆಯವರ ಪರಿಚಯವಾಗಿತ್ತು. ಬಳಿಕ ಅವರೊಂದಿಗೆ ಗ್ರೂಪ್ ಕಾಲ್‌ಗಳಲ್ಲಿ ಭಾಗವಹಿಸಿದ್ದಾನೆ ಎನ್ನುವ ಆರೋಪ ಇದೆ. ನೌಕಾನೆಲೆಗೆ ಆಗಮಿಸುವ ಯುದ್ಧನೌಕೆಗಳ ವಿವರಗಳನ್ನು ಪಡೆಯಲು ಕೆಲವರು ಹಡಗು ನಿರ್ವಹಣಾ ಕಂಪನಿಗಳ ಉದ್ಯೋಗಿಗಳಂತೆ ನಟಿಸಿ ಮಾಹಿತಿ ಪಡೆದಿರುವ ಅನುಮಾನ ವ್ಯಕ್ತವಾಗಿದೆ. 

ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಧಿಕೃತ ರಹಸ್ಯಗಳ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಯಾರು, ಯಾವುದೇ ಹಣಕಾಸಿನ ವಹಿವಾಟು ನಡೆದಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.