ಭಾರತದ ಗಡಿಯೊಳಗೆ ನುಸುಳಲು ಚೀನಾ ಪ್ರಯತ್ನ ; ಕದನದ ಮುನ್ಸೂಚನೆ?

08-09-20 12:14 pm       Headline Karnataka News Network   ದೇಶ - ವಿದೇಶ

ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಗುಂಡಿನ ಚಕಮಕಿ ಶುರುವಾಗಿದ್ದು, ಆತಂಕ ಸೃಷ್ಟಿಯಾಗಿದೆ.

ಲಡಾಖ್, ಸೆಪ್ಟೆಂಬರ್ 7: ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಗುಂಡಿನ ಚಕಮಕಿ ಶುರುವಾಗಿದ್ದು, ಆತಂಕ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಕದನದ ಮುನ್ಸೂಚನೆಯೂ ಸಿಗುತ್ತಿದೆ.

ಪ್ಯಾನ್‍ಗಾಂಗ್ ಸರೋವರ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಗುಂಡಿನ ಸದ್ದು ಕೇಳಿಬಂದಿದೆ. ಪೂರ್ವ ಲಡಾಖ್‍ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‍ಎಸಿ) ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ನಡುವೆ ಚಕಮಕಿ ಶುರುವಾಗಿರುವುದಾಗಿ ವರದಿಯಾಗಿದೆ.

1975ರ ಬಳಿಕ ಮೊದಲ ವಾರ್ನಿಂಗ್ ಶಾಟ್‌ ಅಥವಾ ಗುಂಡಿನ ಚಕಮಕಿ ಇದು ಎಂದು ಹೇಳಲಾಗುತ್ತಿದೆ.

ಎರಡೂ ದೇಶಗಳು ಇದೀಗ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ಎಲ್‍ಎಸಿ ದಾಟಿ ತಮ್ಮ ಮೇಲೆ ಭಾರತೀಯರ ಯೋಧರು ಗುಂಡಿನ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಪ್ರತಿಯಾಗಿ ನಾವು ಗುಂಡಿನ ದಾಳಿ ನಡೆಸಿರುವುದಾಗಿ ಚೀನಾ ಆರೋಪಿಸುತ್ತಿದೆ.

ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಮೇಲೆಯೇ ಚೀನಾ ಗಂಭೀರ ಆರೋಪ ಮಾಡಿದೆ.‌ ಭಾರತದ ಸೇನೆ ಶೆನ್ ಪಾವೊ ಪರ್ವತಗಳ ಬಳಿ LOC ಉಲ್ಲಂಘನೆ ಮಾಡಿದೆ. ಪಾಂಗೊಂಗ್ ಸರೋವರದಲ್ಲಿ ಭಾರತೀಯ ಸೇನೆಯಿಂದ ಗುಂಡಿನ‌ ದಾಳಿ ನಡೆದಿದೆ. ಭಾರತದ ಈ 2 ಕ್ರಮಗಳು ಗಡಿಯಲ್ಲಿ ಪ್ರಚೋದನಕಾರಿ ಹೆಜ್ಜೆಗಳಾಗಿವೆ. ಗಡಿ ದಾಟಿ ಬಂದು ಚೀನಾದ ಪ್ರದೇಶವಾದ ಬಾಂಗೋಂಗ್ ಹುನಾನ್​ಗೆ ಬಂದಿದ್ದರು ಎಂಬ ಗಂಭೀರ ಆರೋಪ ಹೊರಿಸಿದೆ. ಆದರೆ, ಚೀನಾ ಆರೋಪಗಳನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ.

ಇನ್ನೊಂದೆಡೆ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವುದರ ನಡುವೆಯೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಇಂದು‌ ಭಾರತ-ಚೀನಾ ವಿದೇಶಾಂಗ ಸಚಿವರ ಭೇಟಿಯಾಗುವ ಸಂಭವ ಇದೆ. ಎರಡೂ ದೇಶಗಳ ವಿದೇಶಾಂಗ ಸಚಿವರು ಮಾಸ್ಕೋದಲ್ಲಿ ಭೇಟಿ ಸಾಧ್ಯತೆಯಿದ್ದು ಈಗಾಗಲೇ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಸ್ಕೋ ತಲುಪಿದ್ದಾರೆ‌. ಅವರು ಎಸ್‌ಸಿಒ ಸಭೆಯಲ್ಲಿ ಭಾಗವಹಿಸಲು ಮಾಸ್ಕೋಗೆ ಭೇಟಿ ನೀಡಿದ್ದಾರೆ.