ಪಬ್ ಜಿ ಆಟದ ಗಮ್ಮತ್ತು ; ಅಜ್ಜನ ಪಿಂಚಣಿ ಹಣ ಖಾಲಿ, ಮೊಮ್ಮಗನ ಕಿತಾಪತಿ ಕಂಡ ಪೊಲೀಸರೇ ಬೇಸ್ತು ! 

08-09-20 07:10 pm       Headline Karnataka News Network   ದೇಶ - ವಿದೇಶ

ಇಲ್ಲೊಬ್ಬ 15 ವರ್ಷದ ಹುಡುಗ ಪಬ್ ಜಿ ಆಟವಾಡುತ್ತಾ ತನ್ನ ಅಜ್ಜನ ಖಾತೆಯಲ್ಲಿದ್ದ ಎರಡು ಲಕ್ಷ ರೂಪಾಯಿ ಪಿಂಚಣಿ ಹಣವನ್ನೇ ಖಾಲಿ ಮಾಡಿದ್ದಾನೆ. 

ನವದೆಹಲಿ, ಸೆಪ್ಟೆಂಬರ್ 8: ಪಬ್ ಜಿ ವಿಡಿಯೋ ಗೇಮ್ ಹುಚ್ಚು ಕೆಲವರಿಗೆ ಅದೆಷ್ಟು ಹಚ್ಚಿಕೊಂಡಿತ್ತು ಅಂದ್ರೆ, ಎಷ್ಟು ಹಣ ಖಾಲಿಯಾದ್ರೂ ಹಣದ ಬೆಲೆ ಗೊತ್ತಾಗ್ತಾನೇ ಇರ್ತಿರಲಿಲ್ಲ. ಇಲ್ಲೊಬ್ಬ 15 ವರ್ಷದ ಹುಡುಗ ಪಬ್ ಜಿ ಆಟವಾಡುತ್ತಾ ತನ್ನ ಅಜ್ಜನ ಖಾತೆಯಲ್ಲಿದ್ದ ಎರಡು ಲಕ್ಷ ರೂಪಾಯಿ ಪಿಂಚಣಿ ಹಣವನ್ನೇ ಖಾಲಿ ಮಾಡಿದ್ದಾನೆ. 

65 ವರ್ಷದ ವೃದ್ಧ ವ್ಯಕ್ತಿಗೆ ತನ್ನ ಮೊಬೈಲ್ ಬಳಸುವುದು ಅಷ್ಟಾಗಿ ಗೊತ್ತಿರಲಿಲ್ಲ. ಪೇಟಿಎಂ ಇತ್ತಾದರೂ ಅವನ್ನೆಲ್ಲ ಆಪರೇಟ್ ಮಾಡುತ್ತಿದ್ದುದು ಮೊಮ್ಮಕ್ಕಳೇ ಆಗಿದ್ದರು. ಸಣ್ಣ ಪುಟ್ಟ ಏನಾದ್ರೂ ತಗೊಳ್ಳೋದಕ್ಕೆ ಅಜ್ಜನ ಪೇಟಿಎಂ ನಿಂದಲೇ ಮಾಡಿಕೊಳ್ತಿದ್ದರು. ಹಾಗಾಗಿ, ಅಜ್ಜನೂ ತನ್ನ ಖಾತೆಯ ದುಡ್ಡಿನ ಬಗ್ಗೆ ಚಿಂತೆ ಮಾಡಿರಲಿಲ್ಲ. ಮೊನ್ನೆ ಒಂದು ದಿನ ಅಜ್ಜ‌ನ ಮೊಬೈಲಿಗೆ ಮೆಸೇಜ್ ಬಂದಿತ್ತು. ನಿಮ್ಮ ಖಾತೆಯಲ್ಲಿ ರೂಪಾಯಿ 275 ಮಾತ್ರ ಇದ್ದು ಬ್ಯಾಲೆನ್ಸ್ ಎಮೌಂಟ್ ಉಳಿಸುವಂತೆ ಸೂಚನೆ ನೀಡಿತ್ತು. ಅಜ್ಜನಿಗೆ ಇದನ್ನು ನೋಡಿ ಶಾಕ್ ಆಗಿತ್ತು. ಎರಡು ಲಕ್ಷಕ್ಕೂ ಹೆಚ್ಚು ಹಣ ಇತ್ತು. ಏನಾಯ್ತು ಅಂತ ಗಾಬರಿಗೊಂಡು ಏನೋ ಕಿತಾಪತಿ ಆಗಿರಬೇಕು ಅಂತ ಪೊಲೀಸ್ ದೂರು ಕೊಟ್ಟರು. ಪೊಲೀಸರು ಅಜ್ಜನ ದೂರನ್ನು ತಗೊಂಡು ಚೆಕ್ ಮಾಡಿದ್ರು. ತಪಾಸಣೆ ಮಾಡಿದಾಗ, ಪೇಟಿಎಂ ಮೂಲಕವೇ ಹಣ ಖಾಲಿಯಾಗಿದ್ದು ಪೊಲೀಸರಿಗೆ ಗೊತ್ತಾಗಿತ್ತು. ಅಲ್ಲದೆ, ಅಜ್ಜನ ಅಕೌಂಟ್ ಬಗ್ಗೆ ತಿಳಿದುಕೊಂಡಿದ್ದ 15 ವರ್ಷದ ಮೊಮ್ಮಗನದ್ದೇ ಕಿತಾಪತಿ ಅನ್ನುವುದೂ ಪೊಲೀಸರಿಗೆ ಗೊತ್ತಾಯ್ತು. 

ಅಲ್ಲೀವರೆಗೂ ತನಗೇನು ಗೊತ್ತೇ ಇಲ್ಲ ಎಂದು ನಾಟಕ ಆಡುತ್ತಿದ್ದ ಹುಡುಗನೂ ಪೊಲೀಸರಲ್ಲಿ ಸತ್ಯ ಬಾಯಿಬಿಟ್ಟ. ಕೆಲವು ತಿಂಗಳಿಂದ ಪಬ್ ಜಿ ಆಡುತ್ತಿದ್ದೆ. ಏಪ್ ಡೌನ್ಲೋಡ್ ಮಾಡಿಕೊಳ್ಳಲು ಅಜ್ಜನ ಪೇಟಿಎಂ ಯೂಸ್ ಮಾಡ್ತಿದ್ದೆ. ಆನಂತ್ರ ಗೆಳೆಯನೂ ಇದೇ ಪೇಟಿಎಂ ಬಳಕೆ ಮಾಡುತ್ತಿದ್ದರು. ಹುಡುಗನ ಗೆಳೆಯ 23 ವರ್ಷದ ಪಂಕಜ್ ಕುಮಾರ್ ಎನ್ನುವಾತ ಒಂದಷ್ಟು ಹಣವನ್ನು ಆತನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದೂ ವಿಚಾರಣೆಯಲ್ಲಿ ತಿಳಿದುಬಂತು. ಅಷ್ಟೇ ಅಲ್ಲ, ಪೇಟಿಎಂ ಯೂಸ್ ಮಾಡಿ, ಬಳಿಕ ಒಟಿಪಿಯನ್ನು ಡಿಲೀಟ್ ಮಾಡ್ತಿದ್ದೆ‌ ಎನ್ನುವುದನ್ನೂ ಒಪ್ಪಿಕೊಂಡಿದ್ದಾನೆ. ಮೊಮ್ಮಗನ ನಂಬಿದ ಅಜ್ಜ ತನ್ನ ತಲೆಗೆ ತಾನೇ ಚಪ್ಪಡಿ ಕಲ್ಲು ಹಾಕ್ಕೊಂಡಿದ್ದ. ಪಬ್ ಜಿ ಲೋಕದಲ್ಲಿ ಮುಳುಗಿದ್ದ ಹುಡುಗ ಹಣದ ಬೆಲೆಯನ್ನೂ ಅರಿಯದೇ ಹೋಗಿದ್ದ.