ಕಂಗನಾ ಟಾರ್ಗೆಟ್ ! ಮುಂಬೈ ಬರೋ ಮೊದ್ಲೇ ಕಚೇರಿ ಪುಡಿ ಪುಡಿ !!

09-09-20 01:46 pm       Headline Karnataka News Network   ದೇಶ - ವಿದೇಶ

ಬಾಲಿವುಡ್​ ನಟಿ ಕಂಗನಾ ರಣಾವತ್, ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ಮನೆಯಿಂದ ಇಂದು ಮುಂಬೈಗೆ ಮರಳುತ್ತಿದ್ದು, ಇದರ ನಡುವೆಯೇ ಮುಂಬೈನಲ್ಲಿರುವ ಅವರ ಕಚೇರಿಯನ್ನು ನೆಲಸಮ ಮಾಡಲಾಗುತ್ತಿದೆ.

ಮುಂಬೈ , ಸೆಪ್ಟೆಂಬರ್ 9: ನಗರದಲ್ಲಿರುವ ನಟಿ ಕಂಗನಾ ರಣಾವತ್ ಅವರ ಮನೆ ಮತ್ತು ಆಫೀಸ್ ಅನ್ನು ಅಕ್ರಮವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಆರೋಪಿಸಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್(ಬಿಎಂಸಿ) ಕೆಡವಿ ಹಾಕಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಣಾವತ್ ಅವರು, ಶಿವಸೇನಾ ವಿರುದ್ಧ ಮಾತನಾಡಿದ್ದಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಹೀಗಾಗಿ ಬಿಎಂಸಿಯನ್ನು ಉಪಯೋಗಿಸಿಕೊಂಡು ನನ್ನ ಮನೆ ಮತ್ತು ಆಫೀಸ್ ಅನ್ನು ಒಡೆದು ಹಾಕಿದೆ ಎಂದು ಆರೋಪ ಮಾಡಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಂಗನಾ, ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಜಾಪ್ರಭುತ್ವದ ಕಗ್ಗೋಲೆ ಬಾಬರ್ ಮತ್ತು ಅವನ ಸೈನಿಕರು ಎಂದು ವ್ಯಂಗ್ಯವಾಡಿದ್ದಾರೆ.

ಮುಂಬೈನ ಪಾಲಿ ಹಿಲ್ಸ್‍ನಲ್ಲಿರುವ ಕಂಗನಾ ಅವರು ಕಚೇರಿಯಲ್ಲಿ 14 ಬಗೆಯ ನಿಯಮ ಉಲ್ಲಂಘನೆಗಳನ್ನು ಪಟ್ಟಿ ಮಾಡಿದ್ದೇವೆ. ಜೊತೆಗೆ ಆಕೆ ಬಾಂದ್ರಾ ಪ್ರದೇಶದಲ್ಲಿರುವ ಬಂಗಲೆಯಲ್ಲಿ ಕೂಡ ಅಕ್ರಮವಾದ ಕೆಲ ರಚನೆಗಳು ಕಂಡು ಬಂದಿವೆ. ಹೀಗಾಗಿ ನಾವು ಅವುಗಳನ್ನು ನೆಲಸಮ ಮಾಡಿ ಅವರಿಗೆ ವಿಳಾಸದಲ್ಲಿಯೇ ನೋಟಿಸ್ ನೀಡಲಾಗಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ನಾನು ಮುಂಬೈಗೆ ಬರಲು ವಿಮಾನ ನಿಲ್ದಾಣದಲ್ಲಿ ಇದ್ದಾಗ, ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಗೂಂಡಾಗಳು ನನ್ನ ಮನೆಗ ಮತ್ತು ಆಫೀಸ್‍ಗೆ ಹೋಗಿ ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿ ಅದನ್ನು ಒಡೆದು ಹಾಕಿದ್ದಾರೆ. ಅವರು ಒಡೆದು ಹಾಕಲಿ. ನಾನು ಮುಂಬೈಗಾಗಿ ನನ್ನ ರಕ್ತವನ್ನು ಬೇಕಾದರೂ ಕೊಡಲು ಸಿದ್ಧವಿದ್ದೇನೆ. ಅವರು ಏನೇ ಕಿತ್ತುಕೊಂಡರೂ ನನ್ನ ಹೋರಾಟದ ಗುಣವನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಟ್ವೀಟ್ ಕಂಗನಾ ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿರುವ ಕಂಗನಾ, ನನ್ನ ಮನೆಯನ್ನು ಅಕ್ರಮವಾಗಿ ಕಟ್ಟಿದ್ದರೆ, ಅದನ್ನು ಈಗಲೇ ಒಡೆಯಬೇಕಿತ್ತಾ? ಕೊರೊನಾ ಕಾರಣದಿಂದ ಸೆಪ್ಟಂಬರ್ 30ವರೆಗೆ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ಮನೆಗಳನ್ನು ಕೆಡವುವಂತಿಲ್ಲ ಎಂದು ಹೇಳಿದೆ. ಫ್ಯಾಸಿಸಮ್ ಎಂದರೆ ಏನು ಎಂಬುದನ್ನು ಬಾಲಿವುಡ್ ಈಗ ನೋಡುತ್ತಿದೆ ಎಂದು ಕಂಗನಾ ಹೇಳಿದ್ದಾರೆ. ಜೊತೆಗೆ ನಾನು ಪ್ರೀತಿ ಇಂದು ಹಲವಾರು ವರ್ಷದಿಂದ ಕಟ್ಟಿದ ಮನೆಯನ್ನು ಕೆಡವಲು ನನಗೆ ಎಚ್ಚರಿಕೆಯ ನೋಟಿಸ್ ಕಳುಹಿಸಲಾಗಿದೆ. ಅವರು ಮನೆಯನ್ನು ಕೆಡವಬಹುದು ನನ್ನ ಆತ್ಮಬಲವನ್ನು ಅಲ್ಲ ಎಂದು ಕಂಗನಾ ತಿಳಿಸಿದ್ದಾರೆ.

ಈ ಮೊದಲು ಕಂಗನಾ ರಣಾವತ್ ಅವರು, ಮುಂಬೈಯನ್ನು ಪಿಓಕೆ ಎಂದು ಹೇಳಿದ್ದರು. ಇದಕ್ಕೆ ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದ ಶಿವಸೇನಾ ನಾಯಕರು ಕಂಗನಾ ಮುಂಬೈಗೆ ಬರುವುದು ಬೇಡ ಎಂದು ಹೇಳಿದ್ದರು. ಜೊತೆಗೆ ಕೆಲವರು ಬೆದರಿಕೆಯನ್ನು ಹಾಕಿದ್ದರು. ಆದರೆ ಇದಕ್ಕೆ ಭಯಪಡದ ಕಂಗನಾ ಇಂದು ಮುಂಬೈಗೆ ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ.

ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸುತ್ತಿರುವ ಮುಂಬೈ ಪೊಲೀಸರು ಹಾಗೂ ಶಿವಸೇನೆಯ ಸರ್ಕಾರದ ವಿರುದ್ಧ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಶಿವಸೇನೆ ಹಾಗೂ ಎನ್‍ಸಿಪಿ ಕಾರ್ಯಕರ್ತರು ನಟಿ ಮುಂಬೈಗೆ ಆಗಮಿಸಬಾರದು, ಅವರು ಮುಂಬೈನಿಂದ ದೂರ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು. ಬಳಿಕ ಎಂಪಿ ಸಂಜಯ್ ರಾವತ್ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರ ಮಧ್ಯೆಯೂ ಕಂಗನಾ ಇಂದು ಮುಂಬೈಗೆ ಆಗಮಿಸಿಸುತ್ತಿದ್ದಾರೆ.