ಕಂಗನಾ ಕಚೇರಿ ತೆರವಿಗೆ ಬಾಂಬೆ ಹೈಕೋರ್ಟ್ ತಡೆ

09-09-20 03:20 pm       Headline Karnataka News Network   ದೇಶ - ವಿದೇಶ

ನಟಿ ಕಂಗನಾ ರಣಾವತ್​ ಕಚೇರಿ ತೆರವುಗೊಳಿಸುತ್ತಿರುವುದಕ್ಕೆ ಬಾಂಬೆ ಹೈಕೋರ್ಟ್​ ತಡೆ ನೀಡಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

ನವದೆಹಲಿ, ಸೆಪ್ಟೆಂಬರ್ 9: ಮುಂಬೈನಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಕಚೇರಿ ತೆರವುಗೊಳಿಸುತ್ತಿರುವುದಕ್ಕೆ ಬಾಂಬೆ ಹೈಕೋರ್ಟ್​ ತಡೆ ನೀಡಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

ಕಚೇರಿ ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿ ಕಂಗಾನಾ ಪರ ವಕೀಲ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ತೆರವು ಕಾರ್ಯಾಚರಣೆಗೆ ತಡೆ ನೀಡಿದ್ದು, ಕಂಗನಾ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರವನ್ನು ಕೇಳಿದೆ. ಈ ಮೂಲಕ ಕಂಗನಾ ಮಹಾ ಸರ್ಕಾರದ ವಿರುದ್ಧ ಬಹುದೊಡ್ಡ ಗೆಲುವು ಸಾಧಿಸಿದಂತಿದೆ.

ಇಂದು ಬೆಳಗ್ಗೆಯಷ್ಟೇ ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ಮನೆಯಿಂದ ಹೊರಟ ಕಂಗನಾ ಮುಂಬೈಗೆ ಮರಳಿದ್ದಾರೆ. ಅವರು ಮುಂಬೈಗೆ ಆಗಮಿಸುವ ಮುಂಚೆಯೇ ಮಹಾ ಸರ್ಕಾರ ಕಚೇರಿಯ ತೆರವು ಕಾರ್ಯಾಚರಣೆ ನಡೆಸುತ್ತಿತ್ತು.

ಮುಂಬೈ ಅನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ತೊಡೆತಟ್ಟಿದ್ದಾರೆ. ಇಂದು ಬೆಳಗ್ಗೆಯಷ್ಟೇ ಟ್ವೀಟ್​ ಮಾಡಿದ್ದ ಕಂಗನಾ, ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಗೂಂಡಾಗಳು ಮುಂಬೈನಲ್ಲಿರುವ ನನ್ನ ಕಚೇರಿಯನ್ನು ಅಕ್ರಮವಾಗಿ ನೆಲಸಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಸೋಮವಾರವಷ್ಟೇ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಬಾಂದ್ರಾದ ಪಾಲಿ ಹಿಲ್​ನಲ್ಲಿರುವ ಕಂಗನಾ ಅವರ ಕಚೇರಿಗೆ ಭೇಟಿ ನೀಡಿ, ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸೀಲ್​ ಮಾಡಿದ್ದರು. ಅಲ್ಲದೆ, ಪರಿಶೀಲನೆ ಬಳಿಕ 14 ನಿಯಮ ಉಲ್ಲಂಘನೆಗಳ ಪಟ್ಟಿ ಸಹ ಮಾಡಿದ್ದರು. ನೆಲಸಮ ಮಾಡುವುದಾಗಿಯೂ ನೋಟಿಸ್​ ಸಹ ಹೊರಡಿಸಿದ್ದರು.

ಸೋಮವಾರ ನೀಡಿದ್ದ ನೋಟೀಸ್​ನಲ್ಲಿ ಹೇಗೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲ, 24 ಗಂಟೆಗಳಲ್ಲಿ ಈ ನೋಟೀಸ್​ಗೆ ಉತ್ತರ ಕೊಡದಿದ್ದ ಪಕ್ಷದಲ್ಲಿ, ಅತಿಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಒಡೆಯುವುದಾಗಿ ಈ ನೋಟೀಸ್​ನಲ್ಲಿ ಹೇಳಲಾಗಿತ್ತು.