ಸೆ.21ರಿಂದ ಶಾಲೆ, ಕಾಲೇಜು ಆರಂಭಕ್ಕೆ ಷರತ್ತಿನ ಅನುಮತಿ, ಮೊದಲು 9-12ರ ವರೆಗೆ ಅವಕಾಶ ! 

09-09-20 07:27 pm       Headline Karnataka News Network   ದೇಶ - ವಿದೇಶ

ಕೆಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 21ರಿಂದ 9ರಿಂದ 12 ನೇ ತರಗತಿ ನಡುವಿನ ವಿದ್ಯಾರ್ಥಿಗಳಿಗೆ ಆಯಾ ಶಾಲೆಗೆ ಬರಲು ಅನುಮತಿ ನೀಡಲಾಗಿದೆ. 

ನವದೆಹಲಿ, ಸೆಪ್ಟೆಂಬರ್ 9: ಕೊರೊನಾ ಲಾಕ್ಡೌನ್ ಬಳಿಕ ದೇಶಾದ್ಯಂತ ಶಾಲೆ, ಕಾಲೇಜು ಬಂದ್ ಆಗಿವೆ. ಆದರೆ, ಈಗ ಕೇಂದ್ರ ಸರಕಾರದ ಅನ್ ಲಾಕ್ 4 ಮಾರ್ಗಸೂಚಿ ಪ್ರಕಾರ, ನಿಧಾನಕ್ಕೆ ಶಾಲೆ, ಕಾಲೇಜು ತೆರೆಯಲು ಸಿದ್ಧತೆ ನಡೆದಿದೆ. ಕೆಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 21ರಿಂದ 9ರಿಂದ 12 ನೇ ತರಗತಿ ನಡುವಿನ ವಿದ್ಯಾರ್ಥಿಗಳಿಗೆ ಆಯಾ ಶಾಲೆಗೆ ಬರಲು ಅನುಮತಿ ನೀಡಲಾಗಿದೆ. 

ಕಳೆದ ಆಗಸ್ಟ್ 31ರಂದು ನೀಡಿರುವ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ 50 ಶೇಕಡಾ ಸಿಬಂದಿ ಹಾಜರಾಗಲು ಅನುಮತಿ ಕೊಡಲಾಗಿತ್ತು. ಆನ್ ಲೈನ್ ಕ್ಲಾಸ್, ಎಡ್ಮಿಶನ್ ಇನ್ನಿತರ ವಿಚಾರಕ್ಕೆ 50 ರಷ್ಟು ಸಿಬಂದಿಯನ್ನು ಶಾಲೆಗೆ ಕರೆಸಿಕೊಳ್ಳಬಹುದು ಎಂದು ಸೂಚಿಸಲಾಗಿತ್ತು. ಅದೇ ಮಾರ್ಗಸೂಚಿ ಅನುಸರಿಸಿ, ಈಗ ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಸೆ.21ರಿಂದ ವಿದ್ಯಾರ್ಥಿಗಳು ಶಾಲೆಗೆ ಬಂದು ಶಿಕ್ಷಕರಲ್ಲಿ ಅನುಮಾನ ಪರಿಹರಿಸಿಕೊಳ್ಳಬಹುದು ಎಂದು ಸೂಚನೆ ನೀಡಿವೆ. ಆದರೆ ಕಂಟೈನ್ಮೆಂಟ್ ವಲಯದ ಹೊರಗಿನ ಶಾಲೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ. ಅಲ್ಲದೆ, ಪೋಷಕರ ಲಿಖಿತ ಅನುಮತಿ ಪಡೆದುಕೊಂಡೇ ಶಾಲೆಗೆ ಬರಬೇಕೆಂದು ಸೂಚನೆ ನೀಡಲಾಗಿದೆ. ದೆಹಲಿ ಸರಕಾರ ಈ ಬಗ್ಗೆ ಸುತ್ತೋಲೆ ಜಾರಿ ಮಾಡಿದ್ದು ಎಲ್ಲ ಶಾಲೆಗಳು ಸೆಪ್ಟೆಂಬರ್ 30ರ ವರೆಗೆ ಮುಚ್ವಿರುತ್ತವೆ. ಆದರೆ, 9ರಿಂದ 12 ನೇ ಕ್ಲಾಸ್ ವರೆಗಿನ ವಿದ್ಯಾರ್ಥಿಗಳಿಗೆ ವಿಶೇಷ ಅನುಮತಿ ನೀಡಲಾಗಿದೆ ಎಂದಿದೆ. 

ಹರ್ಯಾಣದಲ್ಲಿ ಮನೋಹರ ಲಾಲ್ ಖಟ್ಟರ್ ಸರಕಾರ ಆರಂಭದಲ್ಲಿ ಎರಡು ಸರಕಾರಿ ಶಾಲೆಗಳಲ್ಲಿ 10ರಿಂದ 12ರ ನಡುವಿನ ತರಗತಿಗಳನ್ನು ತೆರೆಯಲು ನಿರ್ಧರಿಸಿದೆ. ಕರ್ನಲ್ ಮತ್ತು ಸೋನಿಪತ್ ಜಿಲ್ಲೆಯ ಎರಡು ಶಾಲೆಗಳನ್ನು ತೆರೆದು ಅಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯ ಪಡೆದು ಮುಂದುವರಿಯಲು ನಿರ್ಧರಿಸಲಾಗಿದೆ. ಅಲ್ಲಿನ ಪೋಷಕರಲ್ಲಿ ಹೆಚ್ಚಿನವರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ತೆರೆಯಬೇಕೆಂದು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಇದೇ ವೇಳೆ, ಹರ್ಯಾಣ ಸರಕಾರದ ಶಿಕ್ಷಣ ಮಂತ್ರಿ ಕನ್ವರ್ ಪಾಲ್, ಕೇಂದ್ರ ಸರ್ಕಾರ ಅವಕಾಶ ಕೊಟ್ಟರೆ ಎಲ್ಲ ಶಾಲೆಗಳನ್ನು ತೆರೆಯಲು ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ. 

ಇನ್ಹು ಬಿಹಾರ ರಾಜ್ಯದ ಪಾಟ್ನಾದಲ್ಲಿ 9ರಿಂದ 12 ನೇ ತರಗತಿಯ ಮಕ್ಕಳಿಗೆ ಶಾಲೆಗೆ ಬರಲು ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಸುತ್ತೋಲೆ ಜಾರಿ ಮಾಡಿದ್ದು ವಿದ್ಯಾರ್ಥಿಗಳು ತಮ್ಮ ಶಾಲೆಗೆ ಬಂದು ಸಂಶಯ ನಿವಾರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಉಳಿದಂತೆ ಬಿಹಾರದಲ್ಲಿ ಕಂಟೈನ್ಮೆಂಟ್ ವ್ಯಾಪ್ತಿಯ ಪೂರ್ತಿಯಾಗಿ ಶಟ್ ಡೌನ್ ಜಾರಿಗೊಳಿಸಲಾಗಿದೆ. 

ಇದೇ ವೇಳೆ, ಆಂಧ್ರಪ್ರದೇಶ ಸರ್ಕಾರ ಸೆಪ್ಟೆಂಬರ್ 21ರಿಂದ 9ರಿಂದ 12ರ ತರಗತಿಗಳಿಗೆ ಕ್ಲಾಸ್ ನಡೆಸಲು ಅವಕಾಶ ನೀಡಿದೆ. ಕೊರೊನಾ ಕೇಸ್ ಕಡಿಮೆಯಾಗಿರುವ ಕಾರಣ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಶಾಲಾಡಳಿತಗಳೇ ತರಗತಿ ನಡೆಸಲು ಮುಂದಾಗಿವೆ. ಹೀಗಾಗಿ ಅಲ್ಲಿನ ರಾಜ್ಯ ಸರಕಾರವೂ ಎಂದಿನಂತೆ ಶಾಲೆ ತೆರೆಯುವುದಕ್ಕೆ ಅವಕಾಶ ನೀಡಿದೆ.

Join our WhatsApp group for latest news updates