ಭಾರತೀಯ ವಾಯುಪಡೆಗೆ ಇಂದು ರಫೇಲ್ ಯುದ್ಧ ವಿಮಾನ ಸೇರ್ಪಡೆ

10-09-20 09:43 am       Headline Karnataka News Network   ದೇಶ - ವಿದೇಶ

ಫ್ರಾನ್ಸ್ ನಲ್ಲಿ ತಯಾರಾದ ರಫೇಲ್ ಯುದ್ಧ ವಿಮಾನ ಗುರುವಾರ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ.

ನವದೆಹಲಿ, ಸೆಪ್ಟೆಂಬರ್ 10: ರಫೇಲ್ ಯುದ್ಧ ವಿಮಾನಗಳು ಇಂದು ಅಧಿಕೃತವಾಗಿ ಭಾರತದ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಈ ಕಾರ್ಯಕ್ರಮಕ್ಕಾಗಿ ನವದೆಹಲಿಗೆ ಆಗಮಿಸಿದ್ದಾರೆ.

ಅಂಬಾಲ ವಾಯುನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 5 ರಫೇಲ್ ಯುದ್ಧ ವಿಮಾನಗಳನ್ನು ವಾಯುಪಡೆಗೆ ಸೇರಿಸಿಕೊಳ್ಳಲಾಗುತ್ತದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡಲಿದೆ. ಇವುಗಳಲ್ಲಿ 10 ವಿಮಾನಗಳನ್ನು ಡಾಸೋ ಏವಿಯೇಷನ್ ಕಂಪನಿ ಭಾರತಕ್ಕೆ ನೀಡಿದೆ. ಇವುಗಳಲ್ಲಿ 5 ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿವೆ.

ಈಗ ಆಗಿರುವ ಒಪ್ಪಂದದ ಜೊತೆಗೆ ಇನ್ನೂ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತ ಫ್ರಾನ್ಸ್‌ನಿಂದ ಖರೀದಿ ಮಾಡುವ ನಿರೀಕ್ಷೆ ಇದೆ. ಈ ಕುರಿತ ಮಾತುಕತೆ ಇಂದು ವಿಮಾನಗಳ ಸೇರ್ಪಡೆ ಕಾರ್ಯಕ್ರಮದ ಬಳಿಕ ನಡೆಯಲಿದೆ.

ಭಾರತಕ್ಕೆ ಈಗಾಗಲೇ 5 ರಫೇಲ್ ಯುದ್ಧ ವಿಮಾನಗಳು ಆಗಮಿಸಿವೆ. ನವೆಂಬರ್‌ ತಿಂಗಳಿನಲ್ಲಿ 5 ರಿಂದ 10 ವಿಮಾನಗಳು ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ. 5 ವಿಮಾನಗಳನ್ನು ಫ್ರಾನ್ಸ್‌ನಲ್ಲಿ ಭಾರತೀಯ ವಾಯುಪಡೆ ಪೈಲೆಟ್‌ಗಳ ತರಬೇತಿಗಾಗಿ ಇಟ್ಟುಕೊಳ್ಳಲಾಗಿದೆ.