ಪಬ್ ಜಿ ಮತ್ತೆ ಭಾರತಕ್ಕೆ ಬರಲು ಪ್ಲಾನ್ ; ಭಾರತದ್ದೇ ಕಂಪನಿಗೆ ವಿತರಣೆ ಹಕ್ಕು !!

10-09-20 11:32 am       Headline Karnataka News Network   ದೇಶ - ವಿದೇಶ

ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದ ಪಬ್ ಜಿ ಗೇಮ್ ಭಾರತದ್ದೇ ಕಂಪನಿ ಒಂದಕ್ಕೆ ವಿತರಣೆಯ ಗುತ್ತಿಗೆ ನೀಡಲು ಮುಂದಾಗಿದ್ದು, ಭಾರತದ ಕಂಪನಿಯ ತಲಾಶೆ ಆರಂಭಿಸಿದೆ. 

ನವದೆಹಲಿ, ಸೆಪ್ಟೆಂಬರ್ 10: ಇತ್ತೀಚೆಗೆ ಭಾರತದಲ್ಲಿ ಬ್ಯಾನ್ ಆಗಿದ್ದ ಪಬ್ ಜಿ ವಿಡಿಯೋ ಗೇಮ್ ಮತ್ತೆ ಭಾರತಕ್ಕೆ ಬರಲು ಶತಪ್ರಯತ್ನ ಮಾಡುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದ ಪಬ್ ಜಿ ಗೇಮ್ ಭಾರತದ್ದೇ ಕಂಪನಿ ಒಂದಕ್ಕೆ ವಿತರಣೆಯ ಗುತ್ತಿಗೆ ನೀಡಲು ಬಯಸಿದೆ. ಇದಕ್ಕಾಗಿ ಭಾರತದ ಕಂಪನಿಯ ತಲಾಶೆ ಆರಂಭಿಸಿದೆ. 

ಸೌತ್ ಕೊರಿಯಾ ಮೂಲದ ಪಬ್ ಜಿ ಗೇಮ್ಗಳನ್ನು ಚೀನಾ ಮೂಲದ ಟೆನ್ಸೆಂಟ್ ಕಂಪನಿ ಭಾರತ ಮತ್ತು ಚೀನಾದಲ್ಲಿ ಮಾರ್ಕೆಟ್ ಮಾಡಿತ್ತು. ಈಗ ಭಾರತದಲ್ಲಿ ಚೀನಾ ಮೂಲದ ಕಂಪನಿಗಳ ಮೇಲೆ ನಿಯಂತ್ರಣ ಹೇರಿದ್ದರಿಂದ ಟೆನ್ಸೆಂಟ್ ಕಂಪನಿಯ ಜೊತೆಗಿನ ಒಪ್ಪಂದವನ್ನು ಕಡಿದುಕೊಳ್ಳಲಿದ್ದು ಭಾರತದಲ್ಲಿ ಭಾರತದ್ದೇ ಕಂಪನಿಗೆ ವಿತರಣೆ ಹಕ್ಕನ್ನು ನೀಡಲು ಮುಂದಾಗಿದೆ. ಆಮೂಲಕ ಭಾರತೀಯರ ಮನಗೆದ್ದಿದ್ದ ಪಬ್ ಜಿ ಗೇಮ್ಗಳನ್ನು ಮತ್ತೆ ಭಾರತಕ್ಕೆ ತರಲು ಯೋಜನೆ ಹಾಕಲಾಗಿದೆ. 

ಹೊಸ ಒಪ್ಪಂದ ಕುದುರಿಸಲಿರುವ ಭಾರತೀಯ ಅಥವಾ ಇನ್ನಾವುದೇ ಕಂಪನಿಗೆ ಸಂಪೂರ್ಣ ಭಾರತೀಯ ಮಾರುಕಟ್ಟೆಯ ಹೊಣೆಯನ್ನು ನೀಡುವ ಭರವಸೆ ನೀಡಿದೆ. ಇದಕ್ಕಾಗಿ ಭಾರತದ್ದೇ ಕಂಪನಿ ಸಿಗಬಹುದೇ ಅನ್ನುವ ನೆಲೆಯಲ್ಲಿ ಪಬ್ ಜಿ ಕಾರ್ಪೊರೇಷನ್ ಹುಡುಕಾಟ ಆರಂಭಿಸಿದೆ. ಭಾರತದಲ್ಲಿ ಅಂದಾಜು 20 ಕೋಟಿ ಗ್ರಾಹಕರು ಪಬ್ ಜಿ ಗೇಮ್ ಆಟಕ್ಕೆ ಇದ್ದರು. ಹೀಗಾಗಿ ಅನಿರೀಕ್ಷಿತ ಎನ್ನುವಂತೆ ಪಬ್ ಜಿಯ‌ನ್ನು ಭಾರತ ಸರಕಾರ ಬ್ಯಾನ್ ಮಾಡಿದ್ದು ಕಂಪನಿಗೆ ದೊಡ್ಡ ನಷ್ಟ ಉಂಟುಮಾಡಿತ್ತು. ಚೀನಾದ ಇಲೆಕ್ಟ್ರಾನಿಕ್ ದೈತ್ಯ ಟೆನ್ಸೆಂಟ್ ಕಂಪನಿಯ ಷೇರು ಒಂದೇ ದಿನದಲ್ಲಿ ಪಾತಾಳಕ್ಕೆ ಬಿದ್ದು 14 ಬಿಲಿಯನ್ ಡಾಲರ್ ನಷ್ಟ ಆಗಿತ್ತು ಎನ್ನುವ ಲೆಕ್ಕಾಚಾರ ನೀಡಲಾಗಿತ್ತು.

Join our WhatsApp group for latest news updates