ಸಾವಿರಕ್ಕೂ ಹೆಚ್ಚು ಚೀನಿ ರಾಷ್ಟ್ರೀಯರ ವೀಸಾ ರದ್ದುಗೊಳಿಸಿದ ಅಮೆರಿಕ !

11-09-20 10:41 am       Headline Karnataka News Network   ದೇಶ - ವಿದೇಶ

ಸಾವಿರಕ್ಕೂ ಹೆಚ್ಚು ಚೀನಿ ರಾಷ್ಟ್ರೀಯರ ವೀಸಾ ರದ್ದು, ಪ್ರತಿಯೊಬ್ಬ ಮನುಷ್ಯರ ಅಂತರ್ಗತ ಮಾನವ ಘನತೆಯನ್ನು ಚೀನಾ ಗೌರವಿಸಬೇಕು.

ವಾಷಿಂಗ್ಟನ್ ಸೆಪ್ಟೆಂಬರ್ 11: ಒಂದು ಸಾವಿರಕ್ಕೂ ಹೆಚ್ಚು ಚೀನಿ ರಾಷ್ಟ್ರೀಯರ ವೀಸಾಗಳನ್ನು ಅಮೆರಿಕ ರದ್ದು ಪಡಿಸಿದೆ. ಭದ್ರತಾ ಕಾರಣಗಳನ್ನು ಮುಂದೊಡ್ಡಿ ಈ ಕ್ರಮ ಕೈಗೊಂಡಿದೆ. ಈಗಾಗಲೇ ಹಳಸಿರುವ ಅಮೆರಿಕ-ಚೀನಾ ಬಾಂಧವ್ಯ ಇದರಿಂದ ಮತ್ತಷ್ಟು ಹದಗೆಡುವ ಸಂಭವವಿದೆ.

ಭದ್ರತಾ ಅಪಾಯವೊಡ್ಡುವ ಶಂಕೆಯಿರುವ ಚೀನಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಅಮೆರಿಕ ಪ್ರವೇಶಿಸುವ ಮೇಲೆ ನಿರ್ಬಂಧ ಹೇರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ 29ರಂದು ಆದೇಶ ಹೊರಡಿಸಿದ್ದರು. ಅದಕ್ಕನುಗುಣವಾಗಿ ವೀಸಾ ರದ್ದು ಪಡಿಸಲಾಗಿದೆ ಎಂದು ಗೃಹ ಇಲಾಖೆಯ ವಕ್ತಾರೆ ಬುಧವಾರ ತಿಳಿಸಿದ್ದಾರೆ.

ಚೀನಾದ ಮಿಲಿಟರಿಯೊಂದಿಗೆ ಸಂಬಧವಿರುವ ಚೀನಿ ಪದವಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ವೀಸಾಗಳನ್ನು ತಡೆ ಹಿಡಿಯುವುದಾಗಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ಪ್ರಭಾರ ಮುಖ್ಯಸ್ಥ ಚಾಡ್ ವೂ ಇದಕ್ಕೂ ಮುನ್ನ ಹೇಳಿದ್ದರು. ಸೂಕ್ಷ್ಮ ಸಂಶೋಧನಾ ವಿಚಾರಗಳನ್ನು ಕದ್ದು ದುರುಪಯೋಗ ಮಾಡುವುದನ್ನು ತಡೆಯಲು ಈ ಕ್ರಮ ಎಂದವರು ವಿವರಿಸಿದ್ದರು.

ಕರೊನಾ ವೈರಸ್ ಸಂಶೋಧನೆ ಸಹಿತ ಚೀನಾ ಹಲವು ಕಾನೂನು ಬಾಹಿರ ವ್ಯಾವಹಾರಿಕ ಚಟುವಟಿಕೆ ನಡೆಸುತ್ತಿದೆ ಹಾಗೂ ಕೈಗಾರಿಕಾ ಅಂಶಗಳಿಗೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಅಮೆರಿಕದ ಆರೋಪವನ್ನು ಪುನರುಚ್ಚರಿಸಿದ್ದಾರೆ. ಅಮೆರಿಕದ ಶೈಕ್ಷಣಿಕ ವಿಚಾರಗಳನ್ನು ಶೋಷಿಸಲು ವಿದ್ಯಾರ್ಥಿ ವೀಸಾಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದಿದ್ದರು. ಗುಲಾಮಿ ಶ್ರಮದಿಂದ ತಯಾರಾಗುವ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆ ಪ್ರವೇಶಿಸುವುದನ್ನು ತಡೆಯುವ ಉದ್ದೇಶವೂ ಇದೆ ಎನ್ನುವ ಮೂಲಕ ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪರೋಕ್ಷವಾಗಿ ಹೇಳಿದ್ದರು. ‘ಪ್ರತಿಯೊಬ್ಬ ಮನುಷ್ಯರ ಅಂತರ್ಗತ ಮಾನವ ಘನತೆಯನ್ನು ಚೀನಾ ಗೌರವಿಸಬೇಕು’ ಎಂದೂ ತಾಕೀತು ಮಾಡಿದ್ದಾರೆ. ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದನ್ನು ಉಲ್ಲೇಖಿಸಿ ಅವರು ಈ ಟಿಪ್ಪಣಿ ಮಾಡಿದ್ದಾರೆ.

Join our WhatsApp group for latest news updates