ಅಮೆರಿಕದ ಗಗನ ನೌಕೆಗೆ ಭಾರತ ಮೂಲದ ಗಗನಾಯಾತ್ರಿ ಕಲ್ಪನಾ ಚಾವ್ಲಾ ಹೆಸರು!

11-09-20 10:55 am       Headline Karnataka News Network   ದೇಶ - ವಿದೇಶ

ಬಾಹ್ಯಾಕಾಶ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಕೊಡುಗೆಯನ್ನು ಗುರುತಿಸಿ ಬಾಹ್ಯಾಕಾಶ ನೌಕೆಗೆ ಕಲ್ಪನಾ ಚಾವ್ಲಾ ಹೆಸರು ಇಡಲಾಗಿದೆ.

ವಾಷಿಂಗ್ಟನ್, ಸೆ.11: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿರುವ ಅಮೆರಿಕದ ಕಮರ್ಷಿಯಲ್ ಕಾರ್ಗೊ ಬಾಹ್ಯಾಕಾಶ ನೌಕೆಗೆ ನಾಸಾದ ಬಾಹ್ಯಾಕಾಶಯಾನಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರು ಇಡಲಾಗಿದೆ. ಚಾವ್ಲಾ, ಬಾಹ್ಯಾಕಾಶ ಪ್ರವೇಶಿಸಿದ ಮೊಟ್ಟಮೊದಲ ಭಾರತೀಯ ಸಂಜಾತೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಕೊಡುಗೆಯನ್ನು ಗುರುತಿಸಿ ಬಾಹ್ಯಾಕಾಶ ನೌಕೆಗೆ ಇವರ ಹೆಸರು ಇಡಲಾಗಿದೆ.

ಮುಂದಿನ ಸೈಗ್ನಸ್ ಕ್ಯಾಪ್ಸೂಲ್‌ಗೆ "ಎಸ್.ಎಸ್.ಕಲ್ಪನಾ ಚಾವ್ಲಾ" ಬಾಹ್ಯಾಕಾಶ ನೌಕೆ ಎಂದು ಹೆಸರಿಸಲಾಗುವುದು ಎಂದು ಅಮೆರಿಕದ ಜಾಗತಿಕ ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿಯಾದ ನಾರ್ಥ್‌ರಾಪ್ ಗ್ರೂಮನ್ ಪ್ರಕಟಿಸಿದೆ. 2003ರಲ್ಲಿ ಆರು ಮಂದಿ ತಂತ್ರಜ್ಞರ ಜತೆ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಮೃತಪಟ್ಟ ಕಲ್ಪನಾ ಚಾವ್ಲಾ ಅವರ ಸ್ಮರಣಾರ್ಥವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

"ಇತಿಹಾಸ ಸೃಷ್ಟಿಸಿದ, ಭಾರತೀಯ ಮೂಲದ ಮೊಟ್ಟಮೊದಲ ಮಹಿಳಾ ಬಾಹ್ಯಾಕಾಶ ಯಾನಿ ಕಲ್ಪನಾ ಚಾವ್ಲಾ ಅವರನ್ನು ನಾವಿಂದು ಗೌರವಿಸುತ್ತಿದ್ದೇವೆ. ಮನುಷ್ಯ ಸಹಿತ ಬಾಹ್ಯಾಕಾಶ ನೌಕೆ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಕೊಡುಗೆ ಅವಿಸ್ಮರಣೀಯ" ಎಂದು ಕಂಪನಿ ಟ್ವೀಟ್ ಮಾಡಿದೆ.

ಬಾಹ್ಯಾಕಾಶ ಯೋಜನೆಗೆ ಕಲ್ಪನಾ ಚಾವ್ಲಾ ಮಾಡಿದ ತ್ಯಾಗ ಅವಿಸ್ಮರಣೀಯ. ಅವರ ಪರಂಪರೆ ಸಹ ಬಾಹ್ಯಾಕಾಶ ಯಾನಿಗಳ ಮೂಲಕ ಮುಂದುವರಿದಿದ್ದು, ಅವರ ಹೆಜ್ಜೆ ಗುರುತನ್ನು ಅನುಸರಿಸುವಂತೆ ಅವರು ಸ್ಫೂರ್ತಿ ತುಂಬಿದಿದ್ದಾರೆ ಎಂದು ಅವರ ಸಾಧನೆಯನ್ನು ಬಣ್ಣಿಸಿದೆ.

Join our WhatsApp group for latest news updates