ರಾಜಧಾನಿ ತಲುಪಿದ ದೇಶದ ಮೊದಲ ಕಿಸಾನ್ ರೈಲು

11-09-20 01:46 pm       Headline Karnataka News Network   ದೇಶ - ವಿದೇಶ

ಕೃಷಿಕರಿಗೆ ವರದಾನವಾದ ದೇಶದ ಮೊದಲ ಕಿಸಾನ್ ರೈಲು ರಾಜಧಾನಿ ದೆಹಲಿ ತಲುಪಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಹೊರಟ ರೈಲು ಇಂದು ಬೆಳಗ್ಗೆ ದೆಹಲಿ ತಲುಪಿದೆ.

ನವದೆಹಲಿ, ಸೆಪ್ಟೆಂಬರ್ 11: ದೇಶದ ಮೊದಲ ಕಿಸಾನ್ ರೈಲು ತರಕಾರಿಗಳನ್ನು ಹೊತ್ತುಕೊಂಡು ರಾಜಧಾನಿ ದೆಹಲಿ ತಲುಪಿದೆ. ನಿನ್ನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಹೊರಟ ರೈಲು ಇಂದು ಬೆಳಗ್ಗೆ ದೆಹಲಿ ತಲುಪಿತು. 

322 ಟನ್ ಹಣ್ಣು ಮತ್ತು ತರಕಾರಿಗಳನ್ನು ಹೊತ್ತು ಹೊರಟ ಕಿಸಾನ್ ರೈಲಿಗೆ ನಿನ್ನೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಆಂಧ್ರಪ್ರದೇಶ ಸಿಎಂ ವೈ.ಎಸ್ ಜಗನ್ಮೋಹನ್ ರೆಡ್ಡಿ ನವದೆಹಲಿ ಮತ್ತು ಅಮರಾವತಿಯಿಂದ ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಿದ್ದರು. ಮೊದಲ ಕಿಸಾನ್ ರೈಲಿನಲ್ಲಿ ಟೊಮ್ಯಾಟೊ, ಬಾಳೆಹಣ್ಣು, ಸಿಹಿ ಕಿತ್ತಳೆ ಹಣ್ಣು, ಪಪ್ಪಾಯ, ಮಸ್ಕ್ ಮೆಲನ್, ಮಾವಿನ ಹಣ್ಣು ಸೇರಿ ಹಲವು ಹಣ್ಣು ಮತ್ತು ತರಕಾರಿಗಳಿದ್ದವು. 

ಈ ಹೊಸ ಕಿಸಾನ್ ರೈಲು ತರಕಾರಿ, ಹಣ್ಣು ಹಂಪಲುಗಳನ್ನು ಕಡಿಮೆ ಸಮಯದಲ್ಲಿ ರಾಜಧಾನಿ ತಲುಪಿಸುತ್ತದೆ. ಅನಂತಪುರದಿಂದ ದೆಹಲಿಗೆ 2150 ಕಿಮೀ ದೂರ ಇದ್ದು ರಸ್ತೆ ಮಾರ್ಗದಲ್ಲಿ 40 ಗಂಟೆ ಬೇಕಾದರೆ ರೈಲಿನಲ್ಲಿ 16-18 ಗಂಟೆಗಳಲ್ಲಿ ಮುಟ್ಟಬಹುದು. ಅನಂತಪುರ ಅತಿ ಹೆಚ್ಚು ಹಣ್ಣುಗಳ ಉತ್ಪಾದಿಸುವ ಜಿಲ್ಲೆಯಾಗಿದ್ದು ಉತ್ಪಾದನೆಯಾಗುವ 58 ಲಕ್ಷ ಮೆಟ್ರಿಕ್ ಟನ್ ಹಣ್ಣು, ತರಕಾರಿಯ 80 ಶೇಕಡಾ ಉತ್ತರ ಭಾರತದ ರಾಜ್ಯಗಳಿಗೆ ರವಾನೆಯಾಗುತ್ತದೆ.‌ ಹರ್ಯಾಣ, ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳಿಗೆ ರಸ್ತೆ ಮೂಲಕ ಹಣ್ಣು ತರಕಾರಿ ಸಾಗಿಸಲು ಕಷ್ಟಪಡುತ್ತಿದ್ದರು. ವಾಹನಗಳಲ್ಲಿ ಮೂರ್ನಾಲ್ಕು ದಿನಗಳಾದರೆ ಹಾಳಾಗಿ ಹೋಗ್ತಿತ್ತು. ಹೀಗಾಗಿ ಅಲ್ಲಿನ ಕೃಷಿಕರು ಮತ್ತು ವ್ಯಾಪಾರಿಗಳಿಗೆ ಸಾಗಾಟದ ಸಾರಿಗೆ ವ್ಯವಸ್ಥೆಯೇ ವೆಚ್ಚದಾಯಕ ಮತ್ತು ಕಷ್ಟದ ಹಾದಿಯಾಗಿತ್ತು. ಈಗ ಕಿಸಾನ್ ರೈಲು ಅಲ್ಲಿನ ಕೃಷಿಕರಿಗೆ ವರದಾನವಾಗಿದೆ. ಸದ್ಯಕ್ಕೆ ವಾರಕ್ಕೊಮ್ಮೆ ರೈಲು ವ್ಯವಸ್ಥೆ ಮಾಡಲಾಗಿದ್ದು ಅಗತ್ಯ ನೋಡಿಕೊಂಡು ಓಡಾಟ ಕಲ್ಪಿಸುವ ಭರವಸೆಯನ್ನು ರೈಲ್ವೇ ಇಲಾಖೆ ನೀಡಿದೆ.

Join our WhatsApp group for latest news updates